ಭಾನುವಾರ, ಸೆಪ್ಟೆಂಬರ್ 26, 2021
21 °C
ಜಿಲ್ಲೆಯಲ್ಲಿ 1,763 ವೈದ್ಯ ಸಿಬ್ಬಂದಿ ಇಲ್ಲ l ಮಂಜೂರಾದ ಹುದ್ದೆಗಳ ಪೈಕಿ ಅರ್ಧದಷ್ಟು ಖಾಲಿ

ಸಿಬ್ಬಂದಿ ಕೊರತೆ; ಬಳಲಿದೆ ಆರೋಗ್ಯ ಇಲಾಖೆ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಸ್ಟಾಫ್‌ ನರ್ಸ್‌, ಪ್ರಯೋಗಾಲಯ ತಂತ್ರಜ್ಞರು–ಫಾರ್ಮಸಿಸ್ಟ್‌ಗಳು ಹಾಗೂ ಡಿ ಗ್ರೂಪ್‌ ನೌಕರರು ಸೇರಿದಂತೆ ಸಾವಿರಾರು ವೈದ್ಯ–ಸಿಬ್ಬಂದಿಯ ಕೊರತೆಯಿಂದ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ಬಳಲುತ್ತಿದೆ.

ಇರುವ ಸಿಬ್ಬಂದಿಯನ್ನಷ್ಟೇ ಬಳಸಿಕೊಂಡು ಆರೋಗ್ಯ ಸೇವೆಯನ್ನು ನೀಡುವಲ್ಲಿ ಇಲಾಖೆಯು ಏದುಸಿರು ಬಿಡುತ್ತಿದೆ. ಮಂಜೂರಾಗಿರುವ ಹುದ್ದೆಗಳ ಪೈಕಿ ಅರ್ಧದಷ್ಟು ಹುದ್ದೆಗಳೂ ಭರ್ತಿಯಾಗದೇ ಇರುವುದು ಸದ್ಯದ ಸಮಸ್ಯೆ.

ಜಿಲ್ಲಾ ಕೇಂದ್ರದಲ್ಲಿರುವ ‘ದೊಡ್ಡಾಸ್ಪತ್ರೆ’ಯೆಂದೇ ಖ್ಯಾತಿಯಾದ ಕೆ.ಆರ್‌.ಆಸ್ಪತ್ರೆಯಲ್ಲೇ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಸಂಸ್ಥೆಯೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು , ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಿಬ್ಬಂದಿ ಕೊರತೆ ಮುಂದುವರಿದಿದೆ.

ದೊಡ್ಡಾಸ್ಪತ್ರೆಗಿಂತಲೂ ವೈದ್ಯಕೀಯ ಕಾಲೇಜಿನಲ್ಲೇ ತಜ್ಞ ವೈದ್ಯರು ಸೇರಿ ದಂತೆ ಎಲ್ಲ ಹಂತದ ಸಿಬ್ಬಂದಿಯ ಕೊರತೆ ಹೆಚ್ಚಿದೆ. ಮಂಜೂರಾದ ತಜ್ಞ ವೈದ್ಯರ ಹುದ್ದೆಗಳ ಪೈಕಿ ಸದ್ಯ ಅರ್ಧದಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿವೆ. ದೊಡ್ಡಾಸ್ಪತ್ರೆಯಲ್ಲಿ ಕೊರತೆ ಇಲ್ಲವಾದರೂ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೊರತೆ ಹೆಚ್ಚಿದೆ. ಕಾಲೇಜಿನಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ ವೈದ್ಯಾಧಿಕಾರಿಗಳಿದ್ದಾರೆ.

ಸ್ಟಾಫ್‌ ನರ್ಸ್‌ ಇಲ್ಲ: ಎಲ್ಲೆಡೆ ಸ್ಟಾಫ್‌ ನರ್ಸ್‌ಗಳ ಕೊರತೆಯು, ಇರುವ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ
ವನ್ನೂ ಸೃಷ್ಟಿಸಿದೆ. ವೈದ್ಯಕೀಯ ಕಾಲೇಜಿನಲ್ಲಿ ಈ ಕೊರತೆಯು ಮೂರಂಕಿಯಷ್ಟಿದ್ದರೆ, ದೊಡ್ಡಾಸ್ಪತ್ರೆಯಲ್ಲಿ ಎರಡಂಕಿ
ಯಷ್ಟಿದೆ. ಉಳಿದೆಡೆ ಬೆರಳೆಣಿಕೆಯಷ್ಟು ಕೊರತೆ ಇದೆ.

ನಗರ ಮತ್ತು ಗ್ರಾಮೀಣ ಎಂಬ ವ್ಯತ್ಯಾಸವಿಲ್ಲದೆ ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಾಲಯ ತಂತ್ರಜ್ಞರ ಕೊರತೆ ಹೆಚ್ಚಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಈ ಕೊರತೆ ಮುಂದುವರಿದಿದೆ. ಮಿಕ್ಕೆಲ್ಲೆಡೆಗಿಂತ ದೊಡ್ಡಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಅರೆವೈದ್ಯಕೀಯ ಸಿಬ್ಬಂದಿ ಕೊರತೆ ಹೆಚ್ಚಿದೆ.

ಡಿ ಗ್ರೂಪ್‌ ದೊಡ್ಡ ಕೊರತೆ: ಜಿಲ್ಲೆಯಾದ್ಯಂತ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಡಿ ಗ್ರೂಪ್‌ ನೌಕರರ ಕೊರತೆಯೇ ದೊಡ್ಡ ಪ್ರಮಾಣದಲ್ಲಿದೆ. ಈ ವಿಷಯದಲ್ಲಿ ವೈದ್ಯಕೀಯ ಕಾಲೇಜು ಹೆಚ್ಚು ಸಂತ್ರಸ್ತ ಸಂಸ್ಥೆಯಾಗಿ ಕಾಣುತ್ತದೆ. ದೊಡ್ಡಾಸ್ಪತ್ರೆಯಲ್ಲಿ ಎರಡಂಕಿಯಷ್ಟು ಕೊರತೆ ಇದ್ದರೆ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ
ಗಳಲ್ಲಿ ಮೂರಂಕಿಯಷ್ಟು ಕೊರತೆ ಇದೆ.

ತಜ್ಞ ವೈದ್ಯರ ಕೊರತೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ನಂಜರಾಜ್‌, ‘ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿಯಮಾನುಸಾರ ಸದ್ಯ ವೈದ್ಯರ ಕೊರತೆ ಇಲ್ಲ. ಆದರೆ ಕಾಲೇಜಿನ ಪ್ರವೇಶ ಸೀಟುಗಳನ್ನು 150ರಿಂದ 250ಕ್ಕೆ ಹೆಚ್ಚಿಸುವ ಸಂಬಂಧ ಅನುಮೋದನೆ ನೀಡಿದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ತುರ್ತು ಚಿಕಿತ್ಸಾ ಔಷಧಿ ಮತ್ತು ಪುನರ್ವಸತಿ ಔಷಧಿ ವಿಭಾಗ, ಶಸ್ತ್ರಚಿಕಿತ್ಸೆ ಮತ್ತು ಔಷಧದ ತಲಾ ಎಂಟು ಘಟಕ ಹಾಗೂ ಪ್ರಸೂತಿಯ ಐದು ಘಟಕಗಳನ್ನು ತೆರೆಯಬೇಕಾಗುತ್ತದೆ. ಅದಕ್ಕಾಗಿ 32 ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲಾಗುವುದು’ ಎಂದು ಹೇಳಿದರು.

‘ಡಿ ಗ್ರೂಪ್‌ ನೌಕರರ ಕೊರತೆಯು ಹಲವು ಸಮಸ್ಯೆಗಳನ್ನು ತಂದಿಟ್ಟಿದೆ. ಜಯದೇವ ಆಸ್ಪತ್ರೆ, ಹೊರರೋಗಿ ಘಟಕ, ಚೆಲುವಾಂಬ ಆಸ್ಪತ್ರೆ, ಕಲ್ಲಿನ ಕಟ್ಟಡ, ಮನೋರೋಗ, ನೇತ್ರ ಚಿಕಿತ್ಸೆ ವಿಭಾಗ, ವೈದ್ಯಕೀಯ ಕಾಲೇಜು, ನಾಲ್ಕು ವಿದ್ಯಾರ್ಥಿನಿಲಯಗಳೆಲ್ಲವೂ ಪ್ರತ್ಯೇಕವಾಗಿರುವುದರಿಂದ, ರಸ್ತೆಯಲ್ಲೂ ಕೂಡ ಡಿ ಗ್ರೂಪ್‌ ಸಿಬ್ಬಂದಿಯನ್ನು ನೀಯೋಜಿಸಬೇಕಾದ ಪರಿಸ್ಥಿತಿ ಇದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಕೆ.ಆರ್‌ ಆಸ್ಪತ್ರೆಯಲ್ಲಿ ಒಂದೇ ಪ್ರವೇಶ–ನಿರ್ಗಮನ ದ್ವಾರ ವ್ಯವಸ್ಥೆಯನ್ನು ರೂಪಿಸಲು ಸಿದ್ಧತೆ ನಡೆದಿದೆ. ₹ 30 ಲಕ್ಷ ವೆಚ್ಚದಲ್ಲಿ ಕಾಂಪೌಂಡ್‌ ಅನ್ನು ಮೂರು ಅಡಿಯಷ್ಟು ಎತ್ತರಿಸಿ, ಹಳೆಯ ಪಾರಂಪರಿಕ ಗ್ರಿಲ್‌ಗಳನ್ನೇ ಮತ್ತೆ ಅಳವಡಿಸಲಾಗುವುದು’ ಎಂದರು.

ಸ್ಟಾಫ್‌ ನರ್ಸ್‌ ಹುದ್ದೆಗಳೇ ಕಡಿಮೆ!: ‘ಆರೋಗ್ಯ ಇಲಾಖೆಯೇ ವೈದ್ಯಕೀಯ ಕಾಲೇಜುಗಳಿಗೆ ನರ್ಸಿಂಗ್‌ ಸಿಬ್ಬಂದಿಯನ್ನು ಪೂರೈಸು ತ್ತಿದ್ದ ಕಾಲಘಟ್ಟದಲ್ಲಿದ್ದ ನಿಯಮಗಳ ಪ್ರಕಾರ, ಕಾಲೇಜಿಗೆ ಕಡಿಮೆ ಸಂಖ್ಯೆಯಲ್ಲಿ ಹುದ್ದೆಗಳು ಮಂಜೂ ರಾಗಿವೆ. ನಿವೃತ್ತರಾದವರು ಸೇರಿದಂತೆ ಈಗ ಕಾರ್ಯನಿರ್ವಹಿಸು ತ್ತಿರುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ವೈದ್ಯಕೀಯ ಕಾಲೇಜಿನ ಡೀನ್‌ ಡಾ.ನಂಜರಾಜ್‌ ತಿಳಿಸಿದರು.

‘ಕಾಲೇಜಿನಲ್ಲಿರುವ ಬಿಎಸ್‌ಸಿ ನರ್ಸಿಂಗ್‌, ಜೆಎನ್‌ಎಂ ನರ್ಸಿಂಗ್‌ ಕೋರ್ಸ್‌ಗಳಿಗೆ ಬೋಧನೆ ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ ಸ್ನಾತಕೋತ್ತರ ನರ್ಸಿಂಗ್‌ ಪೂರೈಸಿರುವ ನರ್ಸಿಂಗ್‌ ಸಿಬ್ಬಂದಿಯನ್ನೇ ಪ್ರಾಂಶುಪಾಲರಾಗಿ , ಬೋಧಕರಾಗಿ ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಪ್ರತಿ ಐಸಿಯು ಹಾಸಿಗೆಯ ರೋಗಿಯನ್ನು ನೋಡಿಕೊಳ್ಳಲು ಮೂವರು ನರ್ಸಿಂಗ್‌ ಸಿಬ್ಬಂದಿ ಇರಬೇಕೆಂಬುದು ನಿಯಮ. ಆದರೆ ಅದರಂತೆ ನಿಯೋಜಿಸಲು ಸಿಬ್ಬಂದಿ ಇಲ್ಲ. ಈ ಕೊರತೆ ನೀಗಿಸಲು ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು. ಮುಂದಿನ ಆರು ತಿಂಗಳಿಗೆ ಅವರನ್ನೇ ಮುಂದುವರಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.