ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ

7
ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿಗಾಗಿ ಹೆಚ್ಚಿದ ಪರದಾಟ

ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ

Published:
Updated:
Prajavani

ಮೈಸೂರು: ಅಗತ್ಯವಿರುವಷ್ಟು ಕೃಷಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಜಿಲ್ಲೆಯಲ್ಲಿ ಇಲ್ಲದಿರುವ ಕಾರಣ ಕೃಷಿ ಇಲಾಖೆಯ ಯೋಜನೆ, ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಲು ಹಾಗೂ ಮಾಹಿತಿ ನೀಡಲು ಕಷ್ಟಕರವಾಗಿ ಪರಿಣಮಿಸಿದೆ.

ಅದರಲ್ಲೂ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಹಚ್ಚಿನ ಕೊರತೆ ಇದೆ. ಹಳ್ಳಿಗಳಿಂದ ಬರುವ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಹಲವು ವಿಚಾರ ಕುರಿತು ಪೂರ್ಣಪ್ರಮಾಣದಲ್ಲಿ ಮಾಹಿತಿ, ನೆರವು ನೀಡುವುದು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಈಗಿರುವ ಅಧಿಕಾರಿಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ.

ಮೈಸೂರು ಜಿಲ್ಲೆಗೆ ಒಟ್ಟು 170 ಹುದ್ದೆಗಳು ಮಂಜೂರಾಗಿದ್ದು, 88 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ 82 ಹುದ್ದೆಗಳು ಖಾಲಿ ಉಳಿದಿವೆ.

‘ಪ್ರಮುಖವಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ಕೃಷಿ ಅಧಿಕಾರಿಗಳ ಕೊರತೆ ಇದೆ. 3–4 ಅಧಿಕಾರಿಗಳು ಇರುವ ಜಾಗದಲ್ಲಿ ಈಗ ಒಬ್ಬರೇ ಕೆಲಸ ನಿಭಾಯಿಸಬೇಕಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಇರುವ 33 ರೈತ ಸಂಪರ್ಕ ಕೇಂದ್ರಗಳಲ್ಲಿ ಕೇವಲ 35 ಸಹಾಯಕ ಕೃಷಿ ಅಧಿಕಾರಿಗಳು ಇದ್ದಾರೆ. 61 ಅಧಿಕಾರಿಗಳ ಕೊರತೆ ಇದೆ. ರೈತರಿಗೆ ಮಾಹಿತಿ ಒದಗಿಸಲು, ಹಳ್ಳಿಗಳಿಗೆ ತೆರಳಿ ಯೋಜನೆಗಳ ಬಗ್ಗೆ ಹೇಳಲು ಮತ್ತು ಕಚೇರಿ ಕೆಲಸ ಕಾರ್ಯಗಳಿಗೆ ಸಿಬ್ಬಂದಿ ಅಗತ್ಯವಿದ್ದು, ಹುದ್ದೆಗಳನ್ನು ಭರ್ತಿ ಮಾಡುವಂತೆ ಈಗಾಗಲೇ ಕೃಷಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಯೋಜನೆಗಳಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಮಣ್ಣು ಪರೀಕ್ಷೆ, ಕೃಷಿ ಭಾಗ್ಯ, ಸಾವಯುವ ಕೃಷಿ, ಬೆಳೆ ವಿಮಾ ಯೋಜನೆ, ಕೃಷಿ ಪರಿಕರಗಳ ಗುಣ ನಿಯಂತ್ರಣ, ಸಹಾಯಧನ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ನಿಭಾಯಿಸಲು ಸಿಬ್ಬಂದಿ ಕೊರತೆ ಕಾಡುತ್ತಿದೆ. ಹೀಗಾಗಿ, ಕಾರ್ಯಕ್ರಮಗಳು, ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ.

‘ಈ ಹಿಂದೆ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದರು. ಜಮೀನಿಗೆ ಬಂದು ಬೆಳೆಗೆ ಬರುವ ರೋಗ, ಕೀಟಬಾಧೆಯ ವಿಚಾರ ತಿಳಿಸುತ್ತಿದ್ದರು. ಯಾವ ಕೀಟನಾಶಕ ಸಿಂಪಡಿಬೇಕು ಎಂದು ಹೇಳುತ್ತಿದ್ದರು. ಈಗ ಸರಿಯಾಗಿ ಸ್ಪಂದಿಸುವುದಿಲ್ಲ. ನಾವೇ ಅವರ ಬಳಿಗೆ ಹೋಗಬೇಕಾಗಾಗಿದೆ’ ಎಂದು ರೈತರು ದೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !