ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: 2.60 ಲಕ್ಷ ಕಟ್ಟಡ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹ

Last Updated 10 ಜುಲೈ 2021, 9:08 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯ ಸರ್ಕಾರವು 2.60 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಮುಂದೆ ಜುಲೈ 12ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದೆ.

‘ರಾಜ್ಯದಲ್ಲಿ ಸುಮಾರು 26 ಲಕ್ಷ ಕಟ್ಟಡ ಕಾರ್ಮಿಕರು ಇದ್ದಾರೆ. ಆದರೆ, ಸರ್ಕಾರದ ಬಳಿ 15 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಮಾಹಿತಿ ಇದೆ. ಉಳಿದವರು ಮ್ಯಾನುಯಲ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ. ಅವರ ಮಾಹಿತಿಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಲ್ಲ. ಹೀಗಾಗಿ, 15 ಲಕ್ಷ ಕಾರ್ಮಿಕರಿಗೆ ₹3 ಸಾವಿರ ಪರಿಹಾರ ಘೋಷಿಸಲಾಗಿತ್ತು. ಈ ಪೈಕಿ ಇನ್ನೂ 2.60 ಕಾರ್ಮಿಕರಿಗೆ ಪರಿಹಾರ ನೀಡಿಲ್ಲ’ ಎಂದು ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿ ಎನ್‌.ಮುದ್ದುಕೃಷ್ಣ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ₹10 ಸಾವಿರ ಕೋಟಿ ಸೆಸ್‌ ಹಣ ಇದೆ. ಆ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿಲ್ಲ. ಮೂರು ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಅವರಿಗೆ ಪ್ರತಿ ತಿಂಗಳಿಗೆ ₹10 ಸಾವಿರದಂತೆ ₹30 ಸಾವಿರ ಕೋವಿಡ್‌ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ, ವೈದ್ಯಕೀಯ ವೆಚ್ಚ ಪಾವತಿ, ಕೋವಿಡ್‌ನಿಂದ ಮೃತಪಟ್ಟವರಿಗೆ ₹5 ಲಕ್ಷ ಪರಿಹಾರ ಹಾಗೂ ಕೋವಿಡ್‌, ಕೋವಿಡೇತರ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ಭರಿಸಬೇಕು’ ಎಂದು ಒತ್ತಾಯಿಸಿದರು.

ಟ್ರಾನ್ಸಿಟ್‌ ಹೌಸ್‌ ಬೇಡ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಜಿಲ್ಲಾ ಮುಖಂಡ ಎಚ್‌.ಎಂ.ಬಸವಯ್ಯ ಮಾತನಾಡಿ, ‘ವಲಸೆ ಕಾರ್ಮಿಕರಿಗಾಗಿ ಪ್ರಮುಖ ನಗರಗಳಲ್ಲಿ ‘ಟ್ರಾನ್ಸಿಟ್‌ ಹೌಸ್‌’ಗಳನ್ನು ನಿರ್ಮಿಸಲು ಮಂಡಳಿ ಮುಂದಾಗಿದೆ. ಕಟ್ಟಡ ಕಾರ್ಮಿಕರು ನಿರ್ಮಾಣ ಚಟುವಟಿಕೆ ನಡೆಯುವ ಸ್ಥಳಗಳಲ್ಲೇ ಉಳಿಯುತ್ತಾರೆ. ಆದರೆ, ಟ್ರಾನ್ಸಿಟ್‌ ಹೌಸ್‌ಗಳನ್ನು ನಗರದ ಹೊರಗೆ ನಿರ್ಮಿಸುವುದರಿಂದ ಕಾರ್ಮಿಕರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಹೀಗಾಗಿ, ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಈ ಯೋಜನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ವಿ.ಯಶೋಧರ್‌, ಎನ್‌ಟಿಯುಸಿ ಸದಸ್ಯೆ ಪೂಜಾ ಇದ್ದರು.

ಆಹಾರ ಕಿಟ್‌ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ

‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ಆಹಾರ ಕಿಟ್‌ ವಿತರಿಸಲು ಮಾರುಕಟ್ಟೆ ದರಕ್ಕಿಂತ ಶೇ 40ರಷ್ಟು ಹೆಚ್ಚುವರಿ ಹಣ ನೀಡಿ ಕಿಟ್‌ಗಳನ್ನು ಖರೀದಿಸಲಾಗಿದೆ. ಇದರಿಂದ ಸುಮಾರು ₹15 ಕೋಟಿ ಅವ್ಯವಹಾರ ನಡೆದಿದೆ. ಕಾರ್ಮಿಕರ ಬದಲಿಗೆ ಬಿಜೆಪಿ ಕಾರ್ಯಕರ್ತರಿಗೆ ಕಿಟ್‌ಗಳನ್ನು ನೀಡಲಾಗಿದೆ’ ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮರಾಜೇ ಅರಸ್‌ ಆರೋಪಿಸಿದರು.

‘ತಂತ್ರಾಂಶ ಅಳವಡಿಕೆ, ಟೂಲ್‌ಕಿಟ್‌, ಆಂಬುಲೆನ್ಸ್‌ ಹಾಗೂ ಔಷಧ ಕಿಟ್‌ಗಳ ಖರೀದಿಯಲ್ಲೂ ಅವ್ಯವಹಾರ ನಡೆದಿದೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT