ಶನಿವಾರ, ಜುಲೈ 2, 2022
22 °C
ಲಾಕ್‌ಡೌನ್‌ ಸಮಯದಲ್ಲಿ ಕೃಷಿಯತ್ತ ಒಲವು

ಗುತ್ತಿಗೆ ಪಡೆದು ತೋಟ ಮಾಡಿದ ಕೆಂಪರಾಜು

ರವಿಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಂಪಾಪುರ: ತಮ್ಮ ಬಳಿ ಇರುವ ಕೃಷಿಭೂಮಿಯಲ್ಲಿ ಬೇಸಾಯ ಮಾಡದೇ ಪಟ್ಟಣಗಳಿಗೆ ವಲಸೆ ಬಂದು ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿಯೋ, ಗಾರೆಕೆಲಸ ಮಾಡಿಯೋ ಅನೇಕರು ಜೀವನ ಸಾಗಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬರು ತಮ್ಮ ಬಳಿ ಕೃಷಿಭೂಮಿ ಇಲ್ಲದಿದ್ದರೂ ಗುತ್ತಿಗೆಗೆ ಭೂಮಿ ಪಡೆದು ಅದರಲ್ಲಿ ತೋಟಗಾರಿಕೆ ಮಾಡಿ, ಯಶಸ್ಸು ಕಂಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಎಚ್.ಮಟಕೆರೆ ಗ್ರಾಮದ ಕೆಂಪರಾಜು ಅವರು ಲಾಕ್‌ಡೌನ್ ಸಮಯದಲ್ಲಿ ಸಮೀಪದ ನೂರಲಕುಪ್ಪೆ ಗ್ರಾಮದ ಜಾಫರ್ ಎಂಬುವವರ 9 ಎಕರೆ ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದು ಬಾಳೆ ಕೃಷಿಯಲ್ಲಿ ನಿರತರಾಗಿದ್ದಾರೆ.

ತಮ್ಮ ಚಿಕ್ಕಪ್ಪ ವಿಷಕಂಠಯ್ಯ ಅವರೊಂದಿಗೆ ಅವರು ಕೇರಳದಲ್ಲಿ ಹೆಚ್ಚಿನ ಬೇಡಿಕೆ ಇರುವ ನೇಂದ್ರ ತಳಿಯ 10,800 ಬಾಳೆಗಿಡಗಳನ್ನು ನೆಟ್ಟರು. ಕಾಲಕ್ಕೆ ತಕ್ಕಂತೆ ಸಾವಯವ ಗೊಬ್ಬರ, ನೀರು ಹಾಕುತ್ತಾ, ಕಳೆ ತೆಗೆಯುತ್ತ ಹೋದರು. ಇದರ ಪರಿಣಾಮವಾಗಿ ಅವರಿಗೆ ದಕ್ಕಿದ್ದು ಬರೋಬರಿ 97 ಟನ್ ಬಾಳೆಹಣ್ಣು. ₹8.5 ಲಕ್ಷ ಖರ್ಚು ಮಾಡಿದ್ದು, ₹11.5 ಲಕ್ಷ (ಖರ್ಚು ಕಳೆದು) ಲಾಭ ಗಳಿಸಿದ್ದಾರೆ. ತಮಗೆ ಸಾಥ್ ನೀಡಿದ ಚಿಕ್ಕಪ್ಪ ಅವರಿಗೆ ಸಮಪಾಲನ್ನು ನೀಡುವ ಮೂಲಕ 2ನೇ ಬೆಳೆಗೂ ಅಣಿಯಾಗಿದ್ದಾರೆ.

ಭೂರಹಿತ ಕೃಷಿ ಕುಟುಂಬಕ್ಕೆ ಸೇರಿದ ಕೆಂಪರಾಜು ಅವರ ತಂದೆಯೂ ಗುತ್ತಿಗೆ ಆಧಾರದ ಮೇಲೆ ಭೂಮಿ ಪಡೆದು ಭತ್ತ, ರಾಗಿ, ಹತ್ತಿ, ತೊಗರಿ, ಜೋಳ, ಅವರೆ ಬೆಳೆಗಳನ್ನು ಬೆಳೆಯುತ್ತಿದ್ದರು. ತಂದೆಯೊಂದಿಗೆ ತೊಡಗಿಸಿಕೊಂಡಿದ್ದ ಕೆಂಪರಾಜು ಅವರಿಗೆ ಶಿಕ್ಷಕ ವೃತ್ತಿ ದೊರಕಿತು. ನಂತರ, ಕೃಷಿಯಿಂದ ಕೊಂಚ ದೂರ ಉಳಿದಿದ್ದ ಅವರು ಲಾಕ್‌ಡೌನ್ ಸಮಯದಲ್ಲಿ ಮತ್ತೆ ಕೃಷಿಯತ್ತ ಮುಖ ಮಾಡಿದರು.

‘ಬೆಳಿಗ್ಗೆ 5.30 ಅಥವಾ 6 ಗಂಟೆಗೆ ಎದ್ದು ತೋಟಕ್ಕೆ ಹೋಗಿ 8.30ವರೆಗೆ ಕೆಲಸ ಮಾಡುತ್ತೇನೆ. ನಂತರ, ಕ್ಲಸ್ಟರ್ ಸಂಪನ್ಮೂಲ ಸಂಯೋಜಕ ಕೆಲಸಕ್ಕೆ ಹೋಗುತ್ತೇನೆ. ಉಳಿದ ಕೆಲಸವನ್ನು ಚಿಕ್ಕಪ್ಪ ನೋಡಿಕೊಳ್ಳುತ್ತಾರೆ. ಸಂಜೆ 4.30ಕ್ಕೆ ಕರ್ತವ್ಯ ಮುಗಿದ ನಂತರ ಮತ್ತೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವೆ. ನನ್ನ ವೃತ್ತಿಗೆ ಬಾಳೆ ಸೂಕ್ತ ಎಂದು ಕಂಡುಬಂದ ಕಾರಣ ಈ ಕೃಷಿಯನ್ನೇ ಮಾಡುತ್ತಿದ್ದೇನೆ. ಯುವಜನರು ಸಂಪೂರ್ಣವಾಗಿ ವ್ಯವಸ್ಥಿತವಾಗಿ ಕೃಷಿಯಲ್ಲಿ ತೊಡಗಿಸಿಕೊಂಡರೆ, ನಿತ್ಯವೂ ದುಡಿದರೆ, ನಷ್ಟವಾಗುವುದಿಲ್ಲ’ ಎಂದು ಕೆಂಪರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು