ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಭಾಷೆಯ ಶುದ್ಧ ಕಲಿಕೆಗೊಂದು ಲ್ಯಾಬ್‌

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆ
Last Updated 30 ಜೂನ್ 2022, 5:44 IST
ಅಕ್ಷರ ಗಾತ್ರ

ಮೈಸೂರು: ಭಾಷೆಯನ್ನು ಶುದ್ಧವಾಗಿ ಕಲಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)ದ ಭಾಷೆಗಳ ಶಾಲೆ (ಸ್ಕೂಲ್ ಆಫ್‌ ಲಾಂಗ್ವೇಜಸ್) ವಿಭಾಗದಿಂದ ವತಿಯಿಂದ ಇದೇ ಮೊದಲ ಬಾರಿಗೆ ‘ಭಾಷಾ ಪ್ರಯೋಗಾಲಯ’ ಸ್ಥಾಪಿಸಲಾಗಿದೆ.

ಮುಕ್ತ ವಿಶ್ವವಿದ್ಯಾಲಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳ ದೂರ ಶಿಕ್ಷಣಕ್ಕಾಗಿ ಪ್ರವೇಶ ಪಡೆಯುತ್ತಾರೆ. ಕೆಲಸದಲ್ಲಿರುವವರು, ಗೃಹಿಣಿಯರು, ಗ್ರಾಮೀಣ ಪ್ರದೇಶದವರು ಹೀಗೆ... ಹಲವು ರೀತಿಯವರು ವಿದ್ಯಾರ್ಥಿಗಳಾಗಿರುತ್ತಾರೆ. ಅವರಿಗೆ ಭಾಷೆಯ ಮೇಲೆ ಹಿಡಿತ ಬರುವಂತೆ ಮಾಡುವ ನಿಟ್ಟಿನಲ್ಲಿ ನೆರವಾಗುವುದು ನೂತನ ಪ್ರಯೋಗಾಲಯದ ಉದ್ದೇಶವಾಗಿದೆ.

ವಿಶ್ವವಿದ್ಯಾಲಯದ ವಿಜ್ಞಾನ ಕಟ್ಟಡದಲ್ಲಿ ಪ್ರಯೋಗಾಲಯ ರೂಪಿಸಲಾಗಿದೆ. ಇಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಸಂಸ್ಕೃತ ಹಾಗೂ ಉರ್ದು ಭಾಷೆಗಳನ್ನು ಕಲಿಸಲಾಗುತ್ತದೆ. 50 ಅತ್ಯಾಧುನಿಕ ತಂತ್ರಜ್ಞಾನದ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಇವುಗಳನ್ನು, ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್‌ಗಳ ಸಂಪರ್ಕ ಕಾರ್ಯಕ್ರಮಗಳಿಗೆಂದು ಬರುವ ವಿದ್ಯಾರ್ಥಿಗಳು ಬಳಸಬಹುದಾಗಿದೆ.

ಪ್ರಾಯೋಗಿಕವಾಗಿ ಕಲಿಸಲು:

ಬ್ಯಾಚ್‌ವಾರು 50 ವಿದ್ಯಾರ್ಥಿಗಳ ಕಲಿಕೆಗೆ ಇದು ಸಹಾಯವಾಗಲಿದೆ. ಭಾಷೆಯನ್ನು ಶುದ್ಧವಾಗಿ ಕಲಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಿರುವ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಅದನ್ನು ಬಳಸಿ ಪಾಠ ಮಾಡುವುದು ಹೇಗೆ ಎಂಬಿತ್ಯಾದಿ ಅಂಶಗಳ ಮೇಲೆ ಉಪನ್ಯಾಸಕರಿಗೆ ತರಬೇತಿ ನೀಡಲಾಗಿದ್ದು, ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.

‘ಈವರೆಗೆ ವಿಶ್ವವಿದ್ಯಾಲಯದಲ್ಲಿ ಭಾಷಾ ಪ್ರಯೋಗಾಲಯ ಇರಲಿಲ್ಲ. ಇದರಿಂದ ಪ್ರಾಯೋಗಿಕವಾಗಿ ಕಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಈ ಕೊರತೆ ನೀಗಿಸುವುದಕ್ಕಾಗಿ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ಈಚೆಗೆ ಉದ್ಘಾಟಿಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಎಲ್ಲ ಭಾಷೆಗಳ ಪದಗಳನ್ನು ವೈಜ್ಞಾನಿಕ ಹಾಗೂ ಶುದ್ಧವಾಗಿ ಉಚ್ಚಾರಣೆ ಮಾಡುವುದು ಹೇಗೆ ಎನ್ನುವುದನ್ನು ಕಲಿಸಲಾಗುತ್ತದೆ. ಇದರಿಂದ ತಪ್ಪು ಪದ ಬಳಕೆ ಅಥವಾ ಪ್ರಯೋಗವನ್ನು ತಪ್ಪಿಸಬಹುದಾಗಿದೆ. 20 ಮಂದಿ ಉಪನ್ಯಾಸಕರು ಇಲ್ಲಿ ಕಾರ್ಯನಿರ್ವಹಿಸುತ್ತಾರೆ’ ಎಂದು ಸ್ಕೂಲ್ ಆಫ್‌ ಲಾಂಗ್ವೇಜಸ್‌ನ ನಿರ್ದೇಶಕ ಪ್ರೊ.ಎಂ.ರಾಮನಾಥಂ ನಾಯ್ಡು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂವಹನ ಕೌಶಲ ವೃದ್ಧಿಗೆ:

‘ವಿದ್ಯಾರ್ಥಿಗಳ ಕಲಿಕಾ ಮಟ್ಟ ವೃದ್ಧಿಸುವ ಯೋಜನೆ ಭಾಗವಾಗಿ ಪ್ರಯೋಗಾಲಯ ಸ್ಥಾಪಿಸಲಾಗಿದೆ. ತಂತ್ರಾಂಶವನ್ನು ಬಳಸಿಕೊಂಡು ಸರಳವಾಗಿ ಅರ್ಥವಾಗುವಂತೆ ಕಲಿಸುವುದಕ್ಕಾಗಿ ಉಪನ್ಯಾಸಕರಿಗೆ ತರಬೇತಿ ಕೊಡಲಾಗಿದೆ. ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಶುದ್ಧ ವ್ಯಾಕರಣ ಕಲಿಕೆಯಿಂದ ಸಂವಹನ ಕೌಶಲವೂ ಪರಿಣಾಮಕಾರಿಯಾಗಿ ಆಗುತ್ತದೆ. ಉಚ್ಚಾರಣೆ ಸರಿ ಇಲ್ಲದಿದ್ದರಿಂದ ಆಗುವ ಅಪಾರ್ಥಗಳಿಗೆ ಕಡಿವಾಣವೂ ಬೀಳುತ್ತದೆ. ಸಂದರ್ಶನ ಮೊದಲಾದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಹಾಯಕ್ಕೆ ಬರುತ್ತದೆ. ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳೆಲ್ಲರೂ ಸಂಪರ್ಕ ಕಾರ್ಯಕ್ರಮದ ಸಂದರ್ಭದಲ್ಲಿ ಈ ಪ್ರಯೋಗಾಲಯವನ್ನು ಬಳಸಬಹುದಾಗಿದೆ’ ಎನ್ನುತ್ತಾರೆ ಅವರು.

ಅನಿಸಿಕೆ ಆಧರಿಸಿ

ಈವರೆಗೆ ಸಿಐಐಎಲ್‌ನಲ್ಲಿ ಮಾತ್ರ ಭಾಷಾ ಪ್ರಯೋಗಾಲಯ ಇತ್ತು. ಈಗ ನಮ್ಮಲ್ಲೂ ಲಭ್ಯವಿದೆ. ವಿದ್ಯಾರ್ಥಿಗಳ ಅನಿಸಿಕೆ ಆಧರಿಸಿ ಪ್ರಯೋಗಾಲಯದಲ್ಲಿ ಮತ್ತಷ್ಟು ಸುಧಾರಣೆಗೆ ಕ್ರಮ ವಹಿಸಲಾಗುವುದು.

–ಪ್ರೊ.ಎಂ.ರಾಮನಾಥಂ ನಾಯ್ಡು, ನಿರ್ದೇಶಕ, ಸ್ಕೂಲ್ ಆಫ್‌ ಲಾಂಗ್ವೇಜಸ್, ಕೆಎಸ್‌ಒಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT