ಭಾನುವಾರ, ಡಿಸೆಂಬರ್ 8, 2019
20 °C

ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಉಪಚುನಾವಣೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನವಿದ್ದು, ಅನರ್ಹ ಶಾಸಕರು ಬೇಕಾಬಿಟ್ಟಿ ದುಡ್ಡು ಖರ್ಚು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಮತದಾರರಿಗೆ ಹಂಚಲು ಇಟ್ಟಿದ್ದ 30 ಸಾವಿರ ಸೀರೆ ವಶಪಡಿಸಿಕೊಳ್ಳಲಾಗಿದೆ. ಕೆಲವೆಡೆ ಫ್ರಿಜ್‌, ಕುಕ್ಕರ್‌ಗಳನ್ನು ಕೊಡುತ್ತಿದ್ದಾರೆ. ಅನರ್ಹರು ಮಾರಾಟ ಆದಾಗ ದುಡ್ಡು ಬಂದಿತ್ತು. ಚುನಾವಣೆಗೆ ಖರ್ಚು ಮಾಡಲು ಬೇರೆಯೇ ದುಡ್ಡು ಕೊಟ್ಟಿದ್ದಾರೆ. ಆ ದುಡ್ಡನ್ನು ಹಂಚುತ್ತಿದ್ದಾರೆ. ಪಾರದರ್ಶಕತೆ ಎಲ್ಲಿಂದ ಬಂತು? ಎಂದು ಮೈಸೂರಿನಲ್ಲಿ ಗುರುವಾರ ಟೀಕಿಸಿದರು.

ಬಿಜೆಪಿಗೆ ಎಂಟಿಬಿ ಸಾಲ: ‘ಆಪರೇಷನ್‌ ಕಮಲ’ದಲ್ಲಿ ಎಂಟಿಬಿ ನಾಗರಾಜ್‌ ಅವರು ಬಿಜೆಪಿಗೆ ಸಾಲ ಕೊಟ್ಟಿದ್ದಾರೆ. ಅದಕ್ಕೆ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಎಂಟಿಬಿ ಮೇಲೆ ಅಷ್ಟೊಂದು ಪ್ರೀತಿ. ಅವರಿಂದ ನಾನು ಸಾಲ ಪಡೆದಿಲ್ಲ. ಸಾಲ ಪಡೆದಿದ್ದ ಕೃಷ್ಣಭೈರೇಗೌಡ ಈಗಾಗಲೇ ವಾಪಸ್‌ ಕೊಟ್ಟಿದ್ದಾರೆ. ಹತಾಶೆಯಿಂದ ಏನೇನೋ ಹೇಳುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಕ್ಷಮೆ ಕೇಳಬೇಕಿತ್ತು: ಕುರುಬ ಸಮುದಾಯದ ಸ್ವಾಮೀಜಿಯನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು. ಯಡಿಯೂರಪ್ಪ ಯಾಕೆ ಕೇಳಿದ್ರು? ಅವರು (ಮಾಧುಸ್ವಾಮಿ) ತಪ್ಪು ಮಾಡದಿದ್ದರೆ ಯಡಿಯೂರಪ್ಪ ಯಾಕೆ ಕ್ಷಮೆ ಕೇಳ್ತಾರೆ. ಆದರೆ ಈ ವಿವಾದವನ್ನು ಮುಂದುವರಿಸಿಕೊಂಡು ಹೋಗುವುದು ಬೇಡ. ಇಲ್ಲಿಗೆ ಕೊನೆಗೊಳಿಸಬೇಕು ಎಂದರು.

ಹುಣಸೂರು ಕ್ಷೇತ್ರದ ಗೆಲುವಿಗೆ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರ ಬೆಂಬಲ ಕೇಳುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಅವರೊಂದಿಗೆ ಮಾತನಾಡುತ್ತೇನೆ ಎಂದಿದ್ದೆ. ಮನವೊಲಿಸುತ್ತೇನೆ ಎಂದಿಲ್ಲ. ಅವರ ಮನಃಸ್ಥಿತಿ ನೋಡಿ ಮಾತನಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)