ಶುಕ್ರವಾರ, ಆಗಸ್ಟ್ 12, 2022
27 °C
ಸರ್‌ ಎಂ.ವಿಶ್ವೇಶ್ವರಯ್ಯ 160ನೇ ಜಯಂತಿಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ

‘ವಿರೋಧ ಬಿಡಿ; ಶ್ರೀರಾಮಾಂಜನೇಯರಿದ್ದಂತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೆಆರ್‌ಎಸ್‌ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್. ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಸಬೇಡಿ. ಅವರಿಬ್ಬರೂ ಶ್ರೀರಾಮಾಂಜನೇಯರಿದ್ದಂತೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಮಂಗಳವಾರ ಇಲ್ಲಿ ಹೇಳಿದರು.

ನಗರದ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಆವರಣದಲ್ಲಿ ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಶಾಸಕರು, ‘ಮಹನೀಯರ ಬಗ್ಗೆ ವಾದ–ವಿವಾದ ಬೇಡ. ವಿಶ್ವೇಶ್ವರಯ್ಯ ದೇಶಕ್ಕಾಗಿ ತಮ್ಮ ತಾಂತ್ರಿಕತೆ, ನೈಪುಣ್ಯತೆ ಧಾರೆ ಎರೆದವರು. ಅವರ ಪ್ರತಿಮೆ ಸ್ಥಾಪನೆಗೆ ಯಾರೊಬ್ಬರೂ ವಿರೋಧ ಮಾಡಬಾರದು’ ಎಂದರು.

ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್ ಮಾತನಾಡಿ ‘ಒಡೆಯರ್–ವಿಶ್ವೇಶ್ವರಯ್ಯ ರಾಮ–ಲಕ್ಷ್ಮಣರಿದ್ದಂತೆ. ಕೆಆರ್‌ಎಸ್‌ನಿಂದ ನೀರಾವರಿ ಸಾಧ್ಯವಾಗಿದೆ. ನಾವು ನೀರು ಕುಡಿಯುತ್ತಿದ್ದೇವೆ ಎಂದರೇ ವಿಶ್ವೇಶ್ವರಯ್ಯ ಅವರೇ ಕಾರಣ. ಈ ನೀರು ಕುಡಿದು ಕ್ಷುಲ್ಲಕ ವಿಚಾರವಿಟ್ಟುಕೊಂಡು ಪ್ರಗತಿಪರರ ಹೆಸರಿನಲ್ಲಿ ವಿರೋಧಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಹೇಳಿದರು.

‘ಮದ್ರಾಸ್‌ನವರ ಆಕ್ಷೇಪಣೆಯಿಂದ ಕನ್ನಂಬಾಡಿ ಕಟ್ಟಲು ಅನುಮತಿ ಸಿಕ್ಕಿದ್ದು 80 ಅಡಿಗಷ್ಟೇ. ವಿಶ್ವೇಶ್ವರಯ್ಯ ಪರಿಶ್ರಮದಿಂದ ಅದು 124.80 ಅಡಿಯಾಯ್ತು. ‘ಭಾರತ ರತ್ನ’ಕ್ಕೆ ಗೌರವ ಕೊಡೋಣ’ ಎಂದರು.

ಇದೇ ಸಂದರ್ಭ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಪ್ರತಿಮೆ ವಿವಾದ ಕುರಿತಂತೆ ಹೊರೆಯಾಲ ದೊರೆಸ್ವಾಮಿ ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಕೆ.ರಘುರಾಂ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿದರು.

ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಎಂ.ಡಿ.ಪಾರ್ಥಸಾರಥಿ, ವಿಕ್ರಂ ಅಯ್ಯಂಗಾರ್ ಮತ್ತಿತರರಿದ್ದರು.

ಎಂಜಿನಿಯರ್ಸ್‌ಗಳಿಗೆ ಅಪಮಾನ

‘ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಪ್ರಗತಿಪರರು ಆಕ್ಷೇಪ ವ್ಯಕ್ತಪಡಿಸಿ ವಿಶ್ವೇಶ್ವರಯ್ಯ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಇದು ಸರ್‌ ಎಂವಿಗೆ ಆಗುತ್ತಿರುವ ಅಪಚಾರವಲ್ಲ. ಎಂಜಿನಿಯರ್ಸ್‌ ಸಮುದಾಯಕ್ಕೆ ಆಗುತ್ತಿರುವ ಅಪಮಾನ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

‘ವೈದ್ಯರು, ಶಿಕ್ಷಕರು, ವಕೀಲರ ಸಂಘಟನೆಯಂತೆ ಎಂಜಿನಿಯರ್ಸ್‌ ಸಂಘಟನೆಯಿಲ್ಲ. ಇದೇ ನಮ್ಮ ಬಲಹೀನತೆಯಾಗಿದೆ. ಕೆಲಸ ಮಾಡೋರು ನಾವಾದರೂ ಗೌರವ ಸಿಗದಾಗಿದೆ. ಎಂಜಿನಿಯರ್ಸ್‌ಗಳಿಗೂ ಗೌರವ ಕೊಡಿ’ ಎಂದರು.

ಎಂಜಿನಿಯರ್ಸ್‌ ಅಸೋಸಿಯೇಷನ್‌ನ ಛೇರ್‌ಮನ್‌ ಡಾ.ಆರ್.ಸುರೇಶ್, ಕಾರ್ಯದರ್ಶಿ ಕೆ.ದಿನೇಶ್‌ಕುಮಾರ್, ಎ.ಎಸ್.ಸತೀಶ್‌, ಅನಂತಪದ್ಮನಾಭ್, ಕೆ.ಬಿ.ಭಾಸ್ಕರ್, ಸುರೇಶ್‌ಬಾಬು ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು