ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಮಹಿಳೆ ಸಾವು; ವರದಕ್ಷಿಣೆ ಹಿಂಸೆ ಆರೋಪ‍
Last Updated 26 ಸೆಪ್ಟೆಂಬರ್ 2020, 1:59 IST
ಅಕ್ಷರ ಗಾತ್ರ

ಮೈಸೂರು: ವರದಕ್ಷಿಣೆ ಕಿರುಕುಳದ ದೂರು ನೀಡಲು ನಿರ್ಧರಿಸಿದ ಪತ್ನಿ ದೇವಿ ಅವರನ್ನು ಹತ್ಯೆಗೈದ ಆರೋಪದ ಮೇರೆಗೆ ಪತಿ ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ಶಿವಣ್ಣ ಎಂಬಾತನಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದ ಅಂಕನಾಯಕ ಪುತ್ರಿ ದೇವಿ ಅವರು 2014ರಲ್ಲಿ ಆರೋಪಿಯೊಂದಿಗೆ ವಿವಾಹವಾಗಿದ್ದರು. 2016ರಲ್ಲಿ ವರದಕ್ಷಿಣೆ ತರುವಂತೆ ಹಿಂಸೆ ನೀಡಲು ಆರಂಭಿಸಿದಾಗ ಊರಿನ ಪಂಚಾಯಿತಿದಾರರಿಗೆ ವಿಷಯ ಮುಟ್ಟಿಸಿದರು. ಪಂಚಾಯಿತಿದಾರರು ಹಿಂಸೆ ನೀಡಬೇಡ ಎಂದು ಪದೇ ಪ‍ದೇ ಹೇಳಿದಾಗ್ಯೂ ಈತ ಹಿಂಸಿಸುವುದನ್ನು ಮುಂದುವರಿಸಿದ. ಕೈಚೆಲ್ಲಿದ ಪಂಚಾಯಿತಿದಾರರು ಪೊಲೀಸರಿಗೆ ದೂರು ನೀಡಲು ದೇವಿ ಅವರಿಗೆ ಸೂಚಿಸಿದರು. ಇದರಿಂದ ಕೋಪಗೊಂಡ ಆರೋಪಿಯು ಮಹಿಳೆಯನ್ನು ಕೊಲೆ ಮಾಡಿ ಗೋಣಿಚೀಲದಲ್ಲಿ ಶವವನ್ನು ಬಿಳಿಗೆರೆ– ಸೋನಹಳ್ಳಿ ಗ್ರಾಮದ ಮಧ್ಯೆ ಕುರುಚಲು ಗಿಡಗಳ ಪೊದೆಯ ಬಳಿ ಎಸೆದಿದ್ದ.

ಒಂದು ತಿಂಗಳ ಬಳಿಕ ಇವರ ಶವ ಅಸ್ತಿಪಂಜರದ ರೂಪದಲ್ಲಿ ಪತ್ತೆಯಾಯಿತು. ಸೀರೆ, ಕಾಲು ಚೈನುಗಳ ಆಧಾರದ ಮೇಲೆ ಶವವನ್ನು ಗುರುತಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದರು. ಆರೋಪಿಯನ್ನು ಬಂಧಿಸಿದ ನಂಜನಗೂಡು ಉಪವಿಭಾಗದ ಎಎಸ್‌ಪಿ ದಿವ್ಯಾಸಾರಾ ಥಾಮಸ್ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ದೊಡ್ಡೇಗೌಡ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹ 18 ಸಾವಿರ ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ ಮೃತರ ತಂದೆ, ತಾಯಿಗೆ ₹10 ಸಾವಿರ ಪರಿಹಾರ ನೀಡಬೇಕು ಜಿಲ್ಲಾ ಕಾನೂನು ನೆರವು ಸಮಿತಿ ಸೂಕ್ತ ಪರಿಹಾರ ನೀಡಬೇಕು ಎಂದು ಶಿಫಾರಸು ಮಾಡಿದ್ದಾರೆ. ‌

ಪಬ್ಲಿಕ್ ಪ್ರಾಸಿಕ್ಯೂಟರ್ ನಾಗಪ್ಪ ಸಿ.ನಾಕ್‌ಮನ್‌ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಮಹಿಳೆ ಸಾವು; ವರದಕ್ಷಿಣೆ ಹಿಂಸೆ ಆರೋಪ‍

ಮೈಸೂರು: ಇಲ್ಲಿನ ಎನ್.ಆರ್.ಮೊಹಲ್ಲಾದ ಗಣೇಶ್‌ನಗರದ ನಿವಾಸಿ ಕುಮಾರಿ (25) ಎಂಬ ಮಹಿಳೆ ಮೃತಪಟ್ಟಿದ್ದು, ವರದಕ್ಷಿಣೆಗಾಗಿ ಪತಿಯ ಮನೆಯವರು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

‘ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಗ್ರಾಮದ ಇವರು 2018ರಲ್ಲಿ ಮಹೇಶ್‌ ಎಂಬುವವರನ್ನು ವಿವಾಹವಾಗಿದ್ದರು. ವರದಕ್ಷಿಣೆಗಾಗಿ ಪತಿಯ ಮನೆಯವರು ಪೀಡಿಸುತ್ತಿದ್ದು, ಹಲವು ಬಾರಿ ರಾಜಿ ಪಂಚಾಯ್ತಿಗಳು ನಡೆದಿದ್ದವು. ನಂತರ, ಗುರುವಾರ ಕರೆ ಮಾಡಿ ಕುಮಾರಿ ಅವರು ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿಸಿದರು. ನಂತರ, ಆಸ್ಪತ್ರೆಗೆ ಹೋಗಿ ನೋಡಿದಾಗ ಕುತ್ತಿಗೆ ಮತ್ತಿತ್ತರ ಭಾಗಗಳ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ’ ಎಂದು ಕುಮಾರಿ ಅವರ ಸೋದರ ನಾಗೇಶ್ ಅವರು ಮಹೇಶ್, ಬಸಮ್ಮಣ್ಣಿ, ಮಹದೇವಶೆಟ್ಟಿ, ಚೈತ್ರಾ, ಮನು ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಉದಯಗಿರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT