ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್‌ಗೆ ಶಿಕ್ಷೆ ನೀಡಿದ್ದ ನ್ಯಾಯಾಧೀಶರಿಗೆ ವರ್ಗಾವಣೆ ಶಿಕ್ಷೆ!

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜೋಧಪುರ: ಶುಕ್ರವಾರ ತಡರಾತ್ರಿ ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನಟ ಸಲ್ಮಾನ್‌ ಖಾನ್‌ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಜೋಧಪುರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರವೀಂದ್ರ ಕುಮಾರ್‌ ಜೋಷಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಜೋಷಿ ಅವರನ್ನು ಸಿರೋಹಿ ನ್ಯಾಯಾಲಯಕ್ಕೆ ವರ್ಗ ಮಾಡಲಾಗಿದೆ. ರಾಜಸ್ಥಾನ ಹೈಕೋರ್ಟ್ ಒಟ್ಟು 134 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದೆ.

ಜೋಷಿ ಸ್ಥಾನಕ್ಕೆ ಚಂದ್ರಕುಮಾರ್‌ ಸೋನವಾರ್‌ ಅವರನ್ನು ವರ್ಗಾಯಿಸಲಾಗಿದ್ದು, ತಕ್ಷಣದಿಂದಲೇ ಸೂಚಿಸಿದ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ.

ಸಲ್ಮಾನ್‌ ಖುದ್ದು ಹಾಜರಾತಿಗೆ ಆದೇಶ: ಶಿಕ್ಷೆ ರದ್ದುಪಡಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲು ನಟನಿಗೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಒಪ್ಪಿಗೆ ನೀಡಿದೆ. ಮೇ 7ರಂದು ಈ ಅರ್ಜಿಯ ವಿಚಾರಣೆಯ ವೇಳೆ ಖುದ್ದು ಹಾಜರಿರುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

₹50,000 ವೈಯಕ್ತಿಕ ಬಾಂಡ್‌ ಮತ್ತು ಎರಡು ಭದ್ರತಾ ಬಾಂಡ್‌ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಗಿದ್ದು, ದೇಶಬಿಟ್ಟು ತೆರಳದಂತೆ ಸೂಚಿಸಲಾಗಿದೆ.

ಇದಕ್ಕೂ ಮೊದಲು ಎರಡೂ ಕಡೆಯ ವಾದ, ವಿವಾದ ಆಲಿಸಿದ ನ್ಯಾಯಾಧೀಶರು, ಮಧ್ಯಾಹ್ನ ಮೂರು ಗಂಟೆಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು.

ಕೃಷ್ಣಮೃಗಗಳು ಸಹಜ ಸಾವನ್ನಪ್ಪಿದ್ದು, ಗುಂಡಿಕ್ಕಿ ಹತ್ಯೆ ಮಾಡಿದ ಬಗ್ಗೆ ಎಲ್ಲಿಯೂ ಸೂಕ್ತ ಸಾಕ್ಷ್ಯ ಇಲ್ಲ ಎಂದು ಸಲ್ಮಾನ್‌ ಪರ ವಕೀಲರು ವಾದಿಸಿದರು.

‘ಕೃಷ್ಣಮೃಗಗಳನ್ನು ಕೊಂದ ನಟನಿಗೆ ಜಾಮೀನು ದೊರೆತದ್ದರಿಂದ ತೀವ್ರ ನಿರಾಸೆಯಾಗಿದೆ‘ ಎಂದು ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪೆಟಾ ಸಂಘಟನೆ ಪ್ರತಿಕ್ರಿಯಿಸಿದೆ.

ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದ ನಿರ್ಧಾರ ಪ್ರಶ್ನಿಸಿ ಬಿಷ್ಣೋಯಿ ಸಮುದಾಯ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಹಿನ್ನೆಲೆ:1998ರಲ್ಲಿ ರಾಜಸ್ಥಾನದ ಕಂಕಣೀ ಗ್ರಾಮದ ಬಳಿ ‘ಹಮ್‌ ಸಾಥ್ ಸಾಥ್ ಹೈ’ ಸಿನಿಮಾ ಚಿತ್ರೀಕರಣದ ವೇಳೆ ಸಲ್ಮಾನ್‌ ಖಾನ್‌ ಮತ್ತು ಇತರ ಕಲಾವಿದರು ಅಳಿವಿನಂಚಿನಲ್ಲಿರುವ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು.

ಈ ಪ್ರಕರಣದಲ್ಲಿ ಜೋಧಪುರ ನ್ಯಾಯಾಲಯ ಗುರುವಾರ ಸಲ್ಮಾನ್‌ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆ ದಿನವೇ ಅವರನ್ನು ಜೋಧಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಬೇಟೆಯ ವೇಳೆ ಸಲ್ಮಾನ್‌ ಜತೆಗಿದ್ದ ಚಿತ್ರದ ಸಹಕಲಾವಿದರಾದ ಸೈಫ್ ಅಲಿ ಖಾನ್, ಟಬು, ನೀಲಂ ಕೊಠಾರಿ ಮತ್ತು ಸೊನಾಲಿ ಬೇಂದ್ರೆ ಅವರನ್ನು ನ್ಯಾಯಾಲಯ ಸಂದೇಹದ ಲಾಭದ ಮೇಲೆ ಬಿಡುಗಡೆಗೊಳಿಸಿತ್ತು.

ಊಟ ಬಿಟ್ಟು ಜೈಲಿನಲ್ಲೇ ಕಸರತ್ತು ನಡೆಸಿದ ನಟ!
ಜೋಧಪುರ:
ಜೋಧಪುರ ಕೇಂದ್ರ ಕಾರಾಗೃಹದಲ್ಲಿ ನಟ ಸಲ್ಮಾನ್‌ ಖಾನ್‌ ಅವರು ಎರಡನೇ ರಾತ್ರಿಯನ್ನೂ ನಿದ್ರೆ ಇಲ್ಲದೆ ಆತಂಕದಲ್ಲಿಯೇ ಕಳೆದರು.

ಶನಿವಾರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ಬರಲಿದ್ದ ಕಾರಣ ಇಡೀ ರಾತ್ರಿ ಅವರಲ್ಲಿ ಆತಂಕ ಮನೆಮಾಡಿತ್ತು.

ಜೈಲಿನ ನಿಯಮಾವಳಿ ಅನ್ವಯ ನಟನಿಗೆ ಕೈದಿ ಸಂಖ್ಯೆ 106 ನೀಡಲಾಗಿತ್ತು. ಎರಡೂ ದಿನವೂ ಅವರು ಜೈಲಿನ ಊಟ ಮಾಡಲಿಲ್ಲ. ಆದರೆ, ದೈಹಿಕ ಕಸರತ್ತು ಬಿಡಲಿಲ್ಲ. ಜೈಲಿನ ಕೋಣೆಯಲ್ಲಿಯೇ ಶುಕ್ರವಾರ ಮೂರು ತಾಸು ವ್ಯಾಯಾಮ ಮಾಡಿದರು.

ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದ್ದ ವೇಳೆ ಅವರು ಜೈಲಿನಲ್ಲಿಯೇ ಇದ್ದರು.ಗುರುವಾರ ಜೈಲಿಗೆ ಬಂದಿದ್ದ ಅವರು ಕೈದಿಗಳಿಗೆ ನೀಡಿದ ಊಟವನ್ನು ಸೇವಿಸಿರಲಿಲ್ಲ.

**

* 20 ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣ

* ಜಾಮೀನು ಕೋರಿ 51 ಪುಟದ ಅರ್ಜಿ

* ಜಾಮೀನು ಮಂಜೂರು ಮಾಡಲು 54 ಸಕಾರಣ ಪಟ್ಟಿ

* ಪ್ರಕರಣದ ಪ್ರತ್ಯಕ್ಷ ಸಾಕ್ಷಿ ನಂಬಲು ಅನರ್ಹ: ನಟನ ಪರ ವಕೀಲರ ವಾದ

* ಜೋಧಪುರ ಕಾರಾಗೃಹ ಮತ್ತು ನ್ಯಾಯಾಲಯದ ಎದುರು ಜಮಾಯಿಸಿದ್ದ ಅಭಿಮಾನಿಗಳಿಂದ ಸಂಭ್ರಮಾಚರಣೆ

* ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

* ನಟನ ಮುಂಬೈ ನಿವಾಸಕ್ಕೆ ಬಿಗಿ ಪೊಲೀಸ್‌ ಭದ್ರತೆ

* ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ ಸಲ್ಮಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT