ಸಲ್ಲದ ನೆಪ ಬಿಟ್ಟು ಸಾಲಮನ್ನಾ ಮಾಡಲಿ

7
ನಂಜನಗೂಡಿನಲ್ಲಿ ಪ್ರತಿಭಟನೆ: ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಆಗ್ರಹ

ಸಲ್ಲದ ನೆಪ ಬಿಟ್ಟು ಸಾಲಮನ್ನಾ ಮಾಡಲಿ

Published:
Updated:
ನಂಜನಗೂಡಿನ ತಾಲ್ಲೂಕು ಕಚೇರಿ ಮುಂಭಾಗ ಮಂಗಳವಾರ ಧರಣಿ ನಿರತ ರೈತರನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು

ನಂಜನಗೂಡು: ‘ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯೊಳಗೆ ಕೃಷಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ ಈಗ ಸಲ್ಲದ ನೆಪ ಹೇಳುವುದನ್ನು ಬಿಟ್ಟು ಆಡಿದ ಮಾತಿನಂತೆ ಸಾಲಮನ್ನಾ ಮಾಡಬೇಕು’ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ  ಆಗ್ರಹಿಸಿದರು.

ನಗರದ ತಾಲ್ಲೂಕು ಕಚೇರಿ ಮುಂಭಾಗ ಮಂಗಳವಾರ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

‘ಬ್ಯಾಂಕ್‌ಗಳೇ ಮನೆ–ಮನೆ ತಿರುಗಿ ಮಹಿಳೆಯರಿಗೆ ಮೈಕ್ರೊಫೈನಾನ್ಸ್ ಹೆಸರಲ್ಲಿ , ಧರ್ಮಸ್ಥಳದ ಮಂಜುನಾಥನ ಹೆಸರಲ್ಲಿ ಸಾಲ ನೀಡುತ್ತವೆ. ಹೆಣ್ಣು ಮಕ್ಕಳು ಸಾಲ ಪಡೆಯುತ್ತಾರೆ. ಸಕಾಲದಲ್ಲಿ ಮಳೆಯಾಗದೆ, ಬೆಳೆ ಕೈಗೆ ಹತ್ತದೆ ಅಥವಾ ಮಾರುಕಟ್ಟೆ ಕುಸಿತದಿಂದ  ಬೆಳೆಗೆ ಬೆಲೆ ಸಿಗುವುದಿಲ್ಲ. ಸಾಲ ಪಡೆದವರು ಕಂತು ಕಟ್ಟಲು ಸಾಧ್ಯವಾಗುವುದಿಲ್ಲ. ಈ ಸರಳ ಸತ್ಯ ಬ್ಯಾಂಕಿನವರಿಗೆ ಅರ್ಥವಾಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸಾಲ ಪಡೆದವರನ್ನು ಹೀನಾಮಾನ ವಾಗಿ ನಿಂದಿಸುವುದರಿಂದ ರಾಜ್ಯ ದಲ್ಲಿ ಮಹಿಳೆಯರೂ ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತೆನೆ ಹೊತ್ತ ರೈತ ಮಹಿಳೆಯನ್ನು ತನ್ನ ಪಕ್ಷದ ಚಿನ್ಹೆಯಾಗಿ ಮಾಡಿಕೊಂಡಿರುವ ಕುಮಾರಸ್ವಾಮಿ ಅವರಿಗೆ ರೈತನ ಮೇಲೆ ಕನಿಷ್ಠ ಸೌಜನ್ಯ, ಪ್ರಾಮಾಣಿಕತೆಯಿದ್ದರೆ ತಕ್ಷಣದಿಂದ ರೈತರು ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘ ಹಾಗೂ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಪಡೆದಿರುವ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ಇಸ್ರೇಲ್ ಮಾದರಿ ಕೃಷಿ ಜಾರಿಗೆ ತರುತ್ತೇವೆ ಎಂದು ಹೇಳುತ್ತಾರೆ. ಆದರೆ, ಇಸ್ರೇಲ್‌ನಲ್ಲಿ ಭೂಮಿ ಇಲ್ಲ. ನೀರೂ ಇಲ್ಲ. ಕುಮಾರಸ್ವಾಮಿ ಅವರು ಕಾಲಹರಣ ಮಾಡಲು ಈರೀತಿಯ ನಾಟಕವಾಡುವುದನ್ನು ಬಿಟ್ಟು ರೈತ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದು, ಹೊಸ ಕೃಷಿ ನೀತಿ ರೂಪಿಸಲಿ ಎಂದರು.

ರೈತ ಸಂಘದ ಮುಖಂಡ ಅಶ್ವಥ್ ನಾರಾಯಣ ರಾಜೇಅರಸ್ ಮಾತನಾಡಿ, ಕಬಿನಿ ನದಿಯ ಪ್ರವಾಹದಿಂದ ಬೆಳೆ ಕಳೆದು ಕೊಂಡ ರೈತರಿಗೆ ಎಕರೆಗೆ ₹45 ಸಾವಿರ ಪರಿಹಾರ ನೀಡಬೇಕು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕು. ಕಬಿನಿ ಬಲದಂಡೆ ನಾಲೆ ಕಾಲುವೆ ಏರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ವರನ್ನು ಬಂಧಿಸಬೇಕು. ಅವರಿಗೆ ಬೆಂಬಲವಾಗಿ ನಿಂತಿರುವ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬೆಳಿಗ್ಗೆ 11 ಗಂಟೆ ಸಮಯದಲ್ಲಿ ನಗರದ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಸೇರಿದ ಸಾವಿರಾರು ರೈತರು , ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿ ತಲುಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ನಡೆಸಿದರು. ಬಳಿಕ 15 ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ತಹಶೀಲ್ದಾರ್ ಅಶ್ವಥ್ ನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಂಗಾರು ಸ್ವಾಮಿ, ಮುಖಂಡರಾದ ಬೊಕ್ಕಳ್ಳಿ ನಂಜುಂಡಸ್ವಾಮಿ, ಹೊಸಕೋಟೆ ಬಸವ ರಾಜು, ಗುರುಲಿಂಗೇಗೌಡ, ಶಿರಮಳ್ಳಿ ಸಿದ್ದಪ್ಪ, ಸತೀಶ್ ರಾವ್, ಇಮ್ಮಾವು ರಘು, ದೊಡ್ಡಯ್ಯ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !