ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಯಿಂದ ನಮ್ಮನ್ನೇಕೆ ಹೊರಗಿಡುವಿರಿ? : ಸ್ಥಳೀಯ ಕಲಾವಿದರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ಥಳೀಯ ಕಲಾವಿದರ ಪ್ರತಿಭಟನೆ, ಮನವಿ ಸಲ್ಲಿಕೆ
Last Updated 25 ಸೆಪ್ಟೆಂಬರ್ 2020, 1:57 IST
ಅಕ್ಷರ ಗಾತ್ರ

ಮೈಸೂರು: ‘ನಮ್ಮ ಊರಿನ ದಸರೆಯಿಂದ ನಮ್ಮನ್ನೇಕೆ ಹೊರಗಿಡುವಿರಿ’ ಎಂದು ಸ್ಥಳೀಯ ಕಲಾವಿದರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊರಗಿನ ಕಲಾವಿದರಿಗಿಂತ ಮೊದಲ ಆದ್ಯತೆ ನಮಗೆ ನೀಡಿ ಎಂದು ಅವರು ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಮೈಸೂರು ಅರಮನೆಯಲ್ಲಿ ಮಾತ್ರವೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲಿ ಯಾವ ರೀತಿ ಮುನ್ನಚ್ಚರಿಕೆ ವಹಿಸುವಿರೋ, ಅಷ್ಟೇ ಮುಂಜಾಗ್ರತೆಯನ್ನು ಕೈಗೊಂಡು ಇತರ ಏಳು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರೆ, ಕಲಾವಿದರು ಬದುಕುತ್ತಾರೆ ಎಂದು ಹೇಳಿದರು.

ಕೋವಿಡ್ ಬಂದ ನಂತರ ಇಲ್ಲಿಯವರೆಗೆ ಕಲಾವಿದರಿಗೆ ಒಂದೇ ಒಂದು ಕಾರ್ಯಕ್ರಮ ಸಿಕ್ಕಿಲ್ಲ. ಕಲೆಯನ್ನೇ ಜೀವನೋಪಾಯಕ್ಕೆ ನಂಬಿದ್ದ ಅವರು ಈಗ ಮನೆ ಬಾಡಿಗೆ ಕಟ್ಟಲಾರದ ಸ್ಥಿತಿಗೆ ತಲುಪಿದ್ದಾರೆ. ಶಕ್ತಿ ಇದ್ದವರು ಮೂಟೆ ಹೊತ್ತು ಜೀವನ ಸಾಗಿಸುತ್ತಿದ್ದಾರೆ. ಮಹಿಳೆಯರಿಗೆ ಬಟ್ಟೆ ಅಂಗಡಿಗಳಲ್ಲೂ ಕೆಲಸ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಗಳ ಕಲಾವಿದರಿಗೆ ವಿಶೇಷ ಯೋಜನೆಯಡಿ ಅನುದಾನ ಹೆಚ್ಚಿಸಿ ಧನಸಹಾಯ ಮಾಡಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆಗ್ರಹಿಸಿದರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರ ಸಂಭಾವನೆ ಹೆಚ್ಚಿಸಬೇಕು, ನಿರ್ಲಕ್ಷಿತ, ಅಶಕ್ತ ಕಲಾವಿದರ ಹಿತಾಸಕ್ತಿ ಕಾಪಾಡಲು ಪ್ರಾಧಿಕಾರ ರಚಿಸಬೇಕು ಎಂದು ಮನವಿ ಮಾಡಿದರು.

ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಕಳುಹಿಸಲಾಯಿತು.

ಸಂಘಟನೆಯ ಅಧ್ಯಕ್ಷ ಬಿ.ಎಸ್.ಜಯರಾಮರಾಜು, ನಿರ್ದೇಶಕ ಗಣೇಶ್‌ ಈಶ್ವರ್‌ಭಟ್, ಮೇರಿ ಬೆಸಿಲಿಕಾ, ಎಂ.ಆರ್.ಕೃಷ್ಣರಾವ್, ಆರ್.ಶಿವಕುಮಾರ್, ವಿ.ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT