ಪುರಸಭೆಗಳಿಗೆ 29 ರಂದು ಚುನಾವಣೆ: ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

7

ಪುರಸಭೆಗಳಿಗೆ 29 ರಂದು ಚುನಾವಣೆ: ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

Published:
Updated:

ಮೈಸೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಿಧಾನಸಭೆ ಚುನಾವಣೆಯ ಬಳಿಕ ವಿಶ್ರಾಂತಿಯಲ್ಲಿದ್ದ ಸ್ಥಳೀಯ ಜನಪ್ರತಿನಿಧಿಗಳಿಗೆ ಹೊಸ ಸವಾಲು ಎದುರಾಗಿದೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ 105 ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್‌ 29 ರಂದು ಚುನಾವಣೆ ನಡೆಯಲಿದೆ. ಜಿಲ್ಲೆಯ ತಿ.ನರಸೀಪುರ, ಪಿರಿಯಾಪಟ್ಟಣ ಮತ್ತು ಎಚ್‌.ಡಿ.ಕೋಟೆ ಪುರಸಭೆಗಳು ಇದರಲ್ಲಿ ಒಳಗೊಂಡಿವೆ. ಈ ಮೂರು ಪುರಸಭೆಗಳ ತಲಾ 23 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿಸಂಹಿತೆ ಜಾರಿಗೆ ಬರಲಿದೆ. ನಂಜನಗೂಡು, ಹುಣಸೂರು ನಗರಸಭೆ ಮತ್ತು ಕೆ.ಆರ್‌.ನಗರ ಹಾಗೂ ಬನ್ನೂರು ಪುರಸಭೆಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಪುರಸಭೆಗಳಿಗೆ ಹೊಸ ವಾರ್ಡ್‌ವಾರು ಮೀಸಲಾತಿ ಪಟ್ಟಿ ಕೂಡಾ ಪ್ರಕಟಗೊಂಡಿದ್ದು, ಅಭ್ಯರ್ಥಿಗಳು ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಮೂರು ಪ್ರಮುಖ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ತೆರೆಮರೆಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಮುಖಂಡರ ಮನೆಯ ಬಾಗಿಲು ತಟ್ಟತೊಡಗಿದ್ದಾರೆ.

ಇದುವರೆಗೆ ಪಟ್ಟಣ ಪಂಚಾಯಿತಿ ಆಗಿದ್ದ ಪಿರಿಯಾಪಟ್ಟಣ ಮತ್ತು ತಿ.ನರಸೀಪುರ ಸ್ಥಳೀಯ ಸಂಸ್ಥೆಗಳು ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ತಿ.ನರಸೀಪುರದಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಕೈಯಲ್ಲಿದ್ದರೆ, ಉಪಾಧ್ಯಕ್ಷ ಸ್ಥಾನ ಬಿಜೆಪಿಯಲ್ಲಿದೆ. ಪಿರಿಯಾಪಟ್ಟಣ ಮತ್ತು ಎಚ್‌.ಡಿ.ಕೋಟೆಯಲ್ಲಿ ಅಧ್ಯಕ್ಷ ಸ್ಥಾನ ಜೆಡಿಎಸ್‌ ಕೈಯಲ್ಲಿದೆ.

ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಬಾರಿ ನೋಟಾ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !