ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಯಶಸ್ಸಿಗೆ ಕೈ ಜೋಡಿಸಿದ ಸ್ಥಳೀಯರು

ಸ್ಥಳೀಯರು, ಹಿತೈಷಿಗಳಿಂದ ಶಾಲೆಗೆ ಆರ್ಥಿಕ ಬೆಂಬಲ
Last Updated 10 ಮೇ 2019, 20:18 IST
ಅಕ್ಷರ ಗಾತ್ರ

ಹುಣಸೂರು: ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ ಅನೇಕ ಶಾಲೆಗಳು ಮುಚ್ಚಿಹೋಗುತ್ತಿದ್ದರೂ ತಾಲ್ಲೂಕಿನ ಶ್ರವಣನಹಳ್ಳಿ ಸರ್ಕಾರಿ ಕಿರಿಯ ಶಾಲೆ ಮಾದರಿಯಾಗಿ ಹೊರ ಹೊಮ್ಮಿದೆ.

ಸರ್ಕಾರಿ ಶಾಲೆ ಎಂದಾಕ್ಷಣ ಹಳ್ಳಿಯಿಂದ ನಗರದವರೆಗೂ ಮೂಗು ಮುರಿದು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದು ರೂಢಿಯಾಗಿದೆ. ಆದರೆ, ಶ್ರವಣನಹಳ್ಳಿ ಇದಕ್ಕೆ ವಿಭಿನ್ನ. ಇಲ್ಲಿನ ಗ್ರಾಮಸ್ಥರು ಒಗ್ಗೂಡಿ, ಗ್ರಾಮದ ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಯಲ್ಲೇ ಓದಬೇಕು ಎಂಬ ‘ಷರತ್ತಿಗೆ’ ಬದ್ಧರಾಗಿ ಮಕ್ಕಳು ಖಾಸಗಿ ಶಾಲೆಯತ್ತ ಮುಖ ಮಾಡದೆ ಮನೆ ಮುಂದಿನ ಶಾಲೆಯಲ್ಲೇ ಅಕ್ಷರ ಕಲಿಕೆ ನಡೆಸುವಂತೆ ಮಾಡಿದ್ದಾರೆ.

ಲಕ್ಷ್ಮಣತೀರ್ಥ ನದಿ ದಂಡೆಗೆ ಹೊಂದಿಕೊಂಡಿರುವ ಶ್ರವಣನಹಳ್ಳಿ ಸರ್ಕಾರಿ ಶಾಲೆಯಲ್ಲಿ 1 ರಿಂದ 5ನೇ ತರಗತಿವರಗೆ 50 ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಯು ಸಮುದಾಯದ ಸಹಭಾಗಿತ್ವದಲ್ಲಿ ಅಚ್ಚುಕಟ್ಟಾಗಿ ನಡೆದಿದೆ. ಈ ಶಾಲೆಯು ಅಮೆರಿಕದ ಅನಿವಾಸಿ ಭಾರತೀಯರಿಂದ ಮೈಸೂರು ಹಾಗೂ ಸ್ಥಳೀಯರ ಸಹಾಯ ಹಸ್ತದೊಂದಿಗೆ ಬೆಳೆದಿದೆ.

ವಿದ್ಯಾರ್ಥಿಗಳ ಮಧ್ಯಾಹ್ನದ ಭೋಜನಕ್ಕೆ ಸುವ್ಯವಸ್ಥಿತ ಸ್ಥಳ, ಭೋಜನ ಶಾಲೆಯಲ್ಲಿ ರಾಷ್ಟ್ರೀಯ ನಾಯಕರು, ಸಾಹಿತಿಗಳ ಭಾವಚಿತ್ರ ಸೇರಿದಂತೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಫಲಕ ಮಕ್ಕಳ ಮಾನಸಿಕ ವಿಕಸನಕ್ಕೆ ಅವಕಾಶ ಕಲ್ಪಿಸುವಂತಿವೆ.

ಶಿಸ್ತು: ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಚಂದ್ರನಾಯಕ 10 ವರ್ಷದಿಂದ ಕರ್ತವ್ಯ ನಿರ್ವಹಿಸಿ ಪ್ರಗತಿಗೆ ಟೊಂಕ ಕಟ್ಟಿದ್ದಾರೆ. ಮನೋವಿಕಸನದೊಂದಿಗೆ ಶಿಸ್ತು ಮಕ್ಕಳಿಗೆ ಅತ್ಯವಶ್ಯಕ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಸ್ತು ಹೊಂದಿರಬೇಕು ಎನ್ನುವುದು ಇವರ ವಾದ.

ದಾನ: ಗ್ರಾಮದ ನಿವಾಸಿ ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ 1 ಎಕರೆ 11 ಗುಂಟೆ ಕೃಷಿ ಭೂಮಿ ದಾನ ನೀಡಿ, ಶಾಲೆ ನಿರ್ಮಿಸಲು ಸಹಾಯ ಹಸ್ತ ನೀಡಿದ್ದಾರೆ. ಇದಲ್ಲದೆ ಶಾಲೆಯ ಆಗು–ಹೋಗುಗಳಿಗೆ ಆರ್ಥಿಕ ಶಕ್ತಿ ತುಂಬಿಸಲು ಹೆಚ್ಚುವರಿ ಕೃಷಿ ಭೂಮಿಯನ್ನು ಸ್ಥಳೀಯರಿಗೆ ವಾರ್ಷಿಕ ಗುತ್ತಿಗೆಗೆ ನೀಡಿದ್ದಾರೆ. ಇದರ ಹಣ ಶಾಲೆಯ ನಿತ್ಯ ಖರ್ಚಿಗೆ ಬಳಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಅಭಿವೃದ್ಧಿ: ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಅಮೆರಿಕಾ ನಿವಾಸಿ ಸೀಮಾ ಶ್ರವಣ್ ವಿಜ್ಞಾನ ಪ್ರಯೋಗಾಲಯ, ಭೋಜನ ಶಾಲೆ, ಸಾಮಾನ್ಯ ಜ್ಞಾನ ಫಲಕ ಸೇರಿದಂತೆ ಕೊಠಡಿ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದ್ದಾರೆ. ಇಷ್ಟಲ್ಲದೇ ಐಡಿಯಲ್‌ ಜಾವಾ ಕಾರ್ಖಾನೆಯ ನಿವೃತ್ತ ಕಾರ್ಮಿಕರ ತಂಡ ಕ್ರೀಡೆಗೆ ಒತ್ತು ನೀಡಿ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿದೆ. ಹಳೆ ವಿದ್ಯಾರ್ಥಿಗಳು ಸಮವಸ್ತ್ರ ನೀಡುವ ಜವಾಬ್ದಾರಿ ಹೊತ್ತು ಸಮುದಾಯದ ಶಾಲೆಯನ್ನಾಗಿ ಕಟ್ಟಿ ಬೆಳೆಸುವಲ್ಲಿ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT