ಬುಧವಾರ, ಜೂನ್ 16, 2021
22 °C
ಬಿಕೊ ಎನ್ನುತ್ತಿದ್ದ ರಸ್ತೆಗಳು, ಹೆಚ್ಚಾಗಿ ತೆರೆಯದ ಅಂಗಡಿಗಳು

ಮೈಸೂರು | ಲಾಕ್‌ಡೌನ್‌ ತೆರವಾದರೂ ಗರಿಗೆದರದ ವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದಲ್ಲಿ ಭಾನುವಾರದ ‘ಲಾಕ್‌ಡೌನ್‌’ ತೆರವಾದರೂ ವಹಿವಾಟು ಕಳೆಗಟ್ಟಿಲ್ಲ. ಎಲ್ಲೆಡೆ ಬಿಕೊ ಎನ್ನುವಂತಹ ವಾತಾವರಣ ಈ ಭಾನುವಾರವೂ ಕಂಡು ಬಂತು.

ದೇವರಾಜ ಮಾರುಕಟ್ಟೆ ಹಿಂಭಾಗದ ಮಟನ್‌ ಮಾರುಕಟ್ಟೆಯಲ್ಲಿ ಕಳೆದ ಭಾನುವಾರ ಕಾರ್ಮಿಕರೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಬಂದ್ ಆಗಿತ್ತು. ಈ ಭಾನುವಾರ ಎಲ್ಲ ಅಂಗಡಿಗಳೂ ತೆರೆದಿದ್ದರೂ, ಮಾಂಸದ ಖರೀದಿ ಪ್ರಕ್ರಿಯೆ ಬಿರುಸು ಪಡೆಯಲಿಲ್ಲ. ಬಕ್ರೀದ್ ಹಬ್ಬ ಈಗಷ್ಟೇ ಮುಗಿದಿರುವುದು ಹಾಗೂ ಶ್ರಾವಣ ಮಾಸ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಗೆ ಬರಲಿಲ್ಲ.

ಸಂತೇಪೇಟೆ ಸೇರಿದಂತೆ ಹಲವೆಡೆ ಸಗಟು ದಿನಸಿ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ತಮ್ಮ ತಮ್ಮ ಅಂಗಡಿಗಳನ್ನು ಮುಚ್ಚಿದ್ದರು. ಕೊರೊನಾ ಸೋಂಕಿನ ತಡೆಗಾಗಿ ಸರ್ಕಾರ ಭಾನುವಾರ ಲಾಕ್‌ಡೌನ್‌ ಘೋಷಣೆ ಮಾಡುವ ಮುಂಚೆಯೇ ಇವರು ಅಂಗಡಿಗಳನ್ನು ಬಂದ್ ಮಾಡಲು ನಿರ್ಧಾರ ಕೈಗೊಂಡಿದ್ದರು. ಹೀಗಾಗಿ, ಇಲ್ಲೆಲ್ಲ ರಸ್ತೆಗಳು ಭಣಗುಡುತ್ತಿದ್ದವು.

ದೇವರಾಜ ಅರಸು ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ, ಗ್ರಾಹಕರು ಹೆಚ್ಚಾಗಿ ಇತ್ತ ಸುಳಿಯಲಿಲ್ಲ. ವ್ಯಾಪಾರ ಪ್ರಕ್ರಿಯೆ ತೀರಾ ನೀರಸವಾಗಿತ್ತು.

ಹಲವು ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಮಧ್ಯಾಹ್ನದವರೆಗೂ ಲಾಕ್‌ಡೌನ್‌ ತೆರವಾಗಿದೆ ಎಂಬ ಭಾವ ಮೂಡದ ವಾತಾವರಣ ನಗರದ ಹಲವೆಡೆ ಇತ್ತು.

ನಗರ ಬಸ್‌ ನಿಲ್ದಾಣದಲ್ಲೂ ಬಸ್‌ ಸಂಚಾರ ವಿರಳವಾಗಿತ್ತು. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ದಾಣಗಳತ್ತ ಸುಳಿಯಲಿಲ್ಲ. ಬಿಕೊ ಎನ್ನುವ ವಾತಾವರಣವೇ ಇತ್ತು. ಆಟೊ ಸಂಚಾರ ಇದ್ದರೂ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ. ಇದರಿಂದ ಆಟೊ ಚಾಲಕರು ಗಂಟೆಗಟ್ಟಲೆ ನಿಂತಲ್ಲೇ ನಿಲ್ಲಬೇಕಾಯಿತು.

ಮಧ್ಯಾಹ್ನದ ವೇಳೆ ಸುರಿದ ಮಳೆಯು ಜನರು ಮನೆಯಲ್ಲೇ ಉಳಿಯುವಂತೆ ಮಾಡಿತು. ವ್ಯಾಪಾರ ಇಲ್ಲದೇ ಹಲವು ಅಂಗಡಿಗಳ ಮಾಲೀಕರು ಬಾಗಿಲು ಮುಚ್ಚಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು