ಭಾನುವಾರ, ಡಿಸೆಂಬರ್ 8, 2019
25 °C

ಬ್ರೇಕಪ್ ಆದರೇನಂತೆ...?

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Deccan Herald

ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದಾಗ ಇಬ್ಬರು ಯುವತಿಯರ ಮಾತುಗಳು ಬೇಡ ಬೇಡ ಎಂದರೂ ಕಿವಿಯ ಮೇಲೆ ಬಿದ್ದವು. ಹಲವು ತಿಂಗಳುಗಳ ನಂತರ ಈ ಸ್ನೇಹಿತೆಯರು ಪರಸ್ಪರ ಭೇಟಿಯಾಗಿದ್ದರು ಎಂಬ ವಿಷಯ ಅವರ ಮಾತುಗಳಿಂದ ತಿಳಿಯಿತು. ಆಗ ಒಬ್ಬ ಯುವತಿ ತನ್ನ ಗೆಳತಿಗೆ ‘ಏ ನಿನ್ನ ಲವರ್ ಹೇಗಿದ್ದಾನೆ. ಅದೇ ಸೋಡಾಬುಡ್ಡಿ’ ಎಂದು ಕೇಳಿದಳು. ಅದಕ್ಕವಳು ‘ಅಯ್ಯೋ ಬ್ರೇಕಪ್‌ ಆಗೋಯ್ತು ಕಣೆ’ ಎಂದು ಮುಖವನ್ನು ಸೊಟ್ಟಗೆ ಮಾಡಿ ಗಗನದತ್ತ ಮುಖ ಮಾಡಿದಳು. ‘ಅಯ್ಯೋ ಅದಕ್ಕ್ಯಾಕೆ ಆ ತರಹ ಮುಖ ಮಾಡಿಕೊಳ್ತೀಯಾ. ಆ ಸೋಡಾಬುಡ್ಡಿ ನಿನಗೆ ಸೂಟ್ ಆಗಲ್ಲ. ಬೇರೆ ಯಾರನ್ನಾದರೂ ಹುಡುಕಿಕೊಂಡರೆ ಆಯ್ತು ಬಿಡು’ ಎಂದು ಸಮಾಧಾನಪಡಿಸಿದಳು.

ಹೌದು, ಇಂದು ಯುವ ಸಮುದಾಯವನ್ನು ಈ ‘ಬ್ರೇಕಪ್’ ಎಂಬುದು ಇನ್ನಿಲ್ಲದಂತೆ ಕಾಡುತ್ತಿದೆ. ತೀರಾ ಹತ್ತಿರವಾಗಿ, ಪ್ರೀತಿಯೂ ಬೆಳೆದ ಮೇಲೆ ಸಂಬಂಧದಲ್ಲಿ ಬಿರುಕು ಮೂಡಿದಾಗ ‘ನಾನೊಂದು ತೀರ ನೀನೊಂದು ತೀರಾ’ ಎಂದು ದೂರವಾಗುವುದನ್ನೇ ಬ್ರೇಕಪ್ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಬ್ರೇಕಪ್ ಆಗುವಂತಹ ಅನುಭವಗಳು ಬಹುತೇಕ ಎಲ್ಲ ಯುವಕ ಯುವತಿಯರ ಬದುಕಿನಲ್ಲಿ ಘಟಿಸುತ್ತಿವೆ.

ಏಕೆ ಹೀಗೆ?: ಡಾ.ರಾಜಕುಮಾರ್ ಅಭಿನಯದ ‘ಒಲವೇ ಜೀವನ ಸಾಕ್ಷಾತ್ಕಾರ’ ಎಂಬ ಹಾಡಿನ ಪ್ರೇಮಜೀವನಕ್ಕೆ ಒಂದು ಅದ್ಭುತ ಉದಾಹರಣೆ. ಒಂದು ದೊಡ್ಡ ಆದರ್ಶ. ಆದರೆ, ಈಗ ಇವೆಲ್ಲವೂ ಮೂಲೆಗುಂಪಾಗಿದೆ. ಸಂಬಂಧಗಳ ನಡುವೆ ಒಂದು ಸಣ್ಣ ಭಿನ್ನಾಭಿಪ್ರಾಯಗಳು ಬಂದರೂ ಆ ಸಂಬಂಧವನ್ನೇ ಕಡಿದುಕೊಳ್ಳುವಂತಹ ಮನಸ್ಥಿತಿಗಳು ಹೆಚ್ಚುತ್ತಿವೆ. ಸಹನೆ ಎಂಬುದು ಮರೆಯಾಗುತ್ತಿದೆ. ಇದುವೇ ಬ್ರೇಕಪ್‌ಗೆ ಪ್ರಧಾನ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.‌

ಬ್ರೇಕಪ್‌ ಆಗುವುದಕ್ಕೆ ಮೊದಲೇ ಈ ಸಂಬಂಧ ಉಳಿಯದು ಎಂಬ ಅಂಶ ಇಬ್ಬರಿಗೂ ಮುಗುಮ್ಮಾಗಿಯೇ ಗೊತ್ತಾಗುತ್ತಿರುತ್ತದೆ. ಕಳುಹಿಸುವ ಮೆಸೇಜ್‌ಗಳ ಪ್ರಮಾಣ ಕಡಿಮೆಯಾಗುತ್ತದೆ. ಜತೆಯಲ್ಲಿ ಕಾಲ ಕಳೆಯುವ ಸಮಯವೂ ಕ್ಷೀಣಿಸುತ್ತದೆ.

‘ನಿನ್ನ ಜತೆ ಜಗಳವಾಡುವುದಕ್ಕೆ ನನಗೆ ಟೈಂ ಇಲ್ಲ’ ಎಂಬ ಅಸಡ್ಡೆಯ ಮಾತುಗಳು ಕೇಳಿ ಬರುತ್ತವೆ. ಮುಂದೊಂದು ದಿನ ಪರಸ್ಪರ ಮಾತನಾಡದೇ ದಿನಗಳನ್ನು ದೂಡುತ್ತಾರೆ.

ಬ್ರೇಕಪ್‌ ಆದಾಗ ಸಂಗಾತಿಯನ್ನು ವಿಪರೀತವಾಗಿ ಹಚ್ಚಿಕೊಂಡ ಮನಸ್ಸು ಕಳವಳಕ್ಕೀಡಾಗುತ್ತದೆ. ವ್ಯಾಘ್ರಗೊಳ್ಳುತ್ತದೆ. ಊಟ ನಿದ್ದೆ ಯಾವುದೂ ಬೇಕು ಎನಿಸುವುದಿಲ್ಲ. ಹೋಗಿ ಕ್ಷಮೆ ಕೇಳೋಣ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳೋಣ ಎಂದು ಮನಸ್ಸು ಹಾತೊರೆದರೂ ಅದಕ್ಕೆ ಒಣಜಂಭ, ಬಿಗುಮಾನ, ಸ್ವಾಭಿಮಾನ, ಅಹಂಗಳು ಸರಪಳಿ ಹಾಕಿ ಬಂಧಿಸಿಡುತ್ತವೆ. ದಿನದ ಒಂದಲ್ಲ ಒಂದು ಹೊತ್ತಿನಲ್ಲಿ ಆ ಸಂಬಂಧವನ್ನು ನೆನೆದು ಒಳ ಮನಸ್ಸು ಮರುಗುತ್ತದೆ. ಕೆಲವೊಮ್ಮೆ ವಿಪರೀತವಾದ ಭಾವನೆಗಳನ್ನು ಹೊಂದಿರುವವರು ಆತ್ಮಹತ್ಯೆಯ ಹಾದಿಯನ್ನು ಅನುಸರಿಸುತ್ತಾರೆ.

ಆದರೆ, ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾರ ಬದುಕಿಗೂ ಯಾರೂ ಅನಿವಾರ್ಯ ಅಲ್ಲ. ಯಾರಿಲ್ಲದೇ ಇದ್ದರೂ ಬದುಕು ತನ್ನ ಪಾಡಿಗೆ ತಾನು ನಡೆಯುತ್ತದೆ. ಯಾರ ಮೇಲೆಯೂ ಅತೀಯಾದ ಅವಲಂಬನೆ ಸಲ್ಲ ಎಂಬ ನಿಯಮವನ್ನು ತಮಗೆ ತಾವೇ ಹಾಕಿಕೊಳ್ಳಬೇಕು. ಯಾವುದೇ ಸಂಬಂಧ ಬ್ರೇಕಪ್ ಆದ ಮೇಲೆ ಖಿನ್ನತೆಗೆ ಜಾರದಂತೆ ಮನಸ್ಸನ್ನು ನೋಡಿಕೊಳ್ಳಬೇಕು.

ಬ್ರೇಕಪ್ಪ ಆದರೆ ಏನಂತೆ? ಎಂಬ ಉದಾಸೀನ ಪ್ರವೃತ್ತಿಯೂ ಒಳ್ಳೆಯದಲ್ಲ. ಒಂದು ಸಂಬಂಧ ಬ್ರೇಕಪ್ ಆದ ಮೇಲೆ ಮತ್ತೊಂದು ಸಿಗುತ್ತದೆ ಎಂಬ ಆಶಾಭಾವನೆ ತಪ್ಪಲ್ಲ. ಆದರೆ, ಅದನ್ನೇ ಒಂದು ಪ್ರವೃತ್ತಿಯನ್ನಾಗಿಸುವುದು ಸರ್ವಥಾ ಸರಿಯಲ್ಲ. ಆದಷ್ಟೂ ಸಂಬಂಧಗಳು ಬ್ರೇಕಪ್ ಆಗದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಬೇಕು. ಒಂದು ವೇಳೆ ಕೈ ಮೀರಿ ಬ್ರೇಕಪ್ ಆದರೆ, ದೂರ ಸರಿಯುತ್ತಿರುವ ಸಂಗಾತಿಯನ್ನು ಒತ್ತಾಯಿಸದೇ ಸಂತಸದಿಂದಲೇ ಬೀಳ್ಕೊಡಬೇಕು. ಒಂದಷ್ಟು ದಿನ ಮನಸ್ಸು ಖಾಲಿ ಖಾಲಿ ಎಂದೆನಿಸುತ್ತದೆ. ಆದರೆ, ಆ ಖಾಲಿ ಪ್ರದೇಶ ತನ್ನಿಂದ ತಾನೆ ತುಂಬುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು