ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಉಪನ್ಯಾಸಕರಿಂದ ಪ್ರತಿಭಟನೆ

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯ
Last Updated 28 ನವೆಂಬರ್ 2019, 13:42 IST
ಅಕ್ಷರ ಗಾತ್ರ

ಮೈಸೂರು: ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಉಪನ್ಯಾಸಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಯೋಗಾನಂದ ಮಾತನಾಡಿ, ‘ಕಳೆದ ಎರಡು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಕೂಡಲೇ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

2016ರ ಏಪ್ರಿಲ್‌ ತಿಂಗಳಿನಲ್ಲಿ ಮೌಲ್ಯಮಾಪನ ಬಹಿಷ್ಕರಿಸಿ ನಡೆಸಿದ ಹೋರಾಟದ ಸಮಯದಲ್ಲಿ ನೀಡಿದ ಯಾವೊಂದು ಭರವಸೆಯನ್ನೂ ಸರ್ಕಾರ ಇದುವರೆಗೆ ಈಡೇಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2ನೇ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕು. 2008ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿರುವ ₹ 500 ‘ಎಕ್ಸ್‌ಗ್ರೇಷಿಯಾ’ವನ್ನು ಮೂಲವೇತನದಲ್ಲಿ ವಿಲೀನಗೊಳಿಸಬೇಕು. ಈಗಾಗಲೇ ನೀಡಿರುವ ಹಣವನ್ನು ಮರುಪಾವತಿಸಬೇಕು ಎಂಬ ಆದೇಶವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿರುವ ಉಪನ್ಯಾಸಕರಿಗೆ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕು, ಉಪನ್ಯಾಸಕರ ಕಾರ್ಯಭಾರದ ಕುರಿತು ಉನ್ನತಮಟ್ಟದ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಂ.ಎಂ.ಮಹದೇವ, ಪ್ರಧಾನ ಕಾರ್ಯದರ್ಶಿ ಎ.ಸಿ.ಮಂಜೇಗೌಡ, ಕೋಶಾಧ್ಯಕ್ಷ ನಾಗಭೂಷಣ ಆರಾಧ್ಯ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

ಸಂವಿಧಾನ ಉಳಿಸಲು ಕರೆ

ದೇಶದ ಸಂವಿಧಾನ ಉಳಿಸಬೇಕು ಮತ್ತು ಗೌರವಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಪುರಭವನದ ಆವರಣದಲ್ಲಿ ಗುರುವಾರ ಜಾಗೃತಿ ಸಭೆ ನಡೆಯಿತು.

ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಮಾತನಾಡಿ, ‘ಅನರ್ಹರಿಗೆ ಚುನಾವಣಾ ಟಿಕೆಟ್ ನೀಡುವ ಮೂಲಕ ಬಿಜೆಪಿ ಸಂವಿಧಾನವನ್ನೇ ಅಣಕಿಸುತ್ತಿದೆ’ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಮಹಾರಾಷ್ಟ್ರದಲ್ಲಿ ನಗೆಪಾಟಲೀಗೀಡಾಗಿದೆ. ಇನ್ನಾದರೂ, ಬಿಜೆಪಿ ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ಅವರು ಆಗ್ರಹಿಸಿದರು.

ಅಜಿತ್‌ ಪವಾರ್ ಮೇಲಿನ ಭ್ರಷ್ಟಾಚಾರ ಪ್ರಕರಣವನ್ನು ಕೈಬಿಟ್ಟದ್ದಂತೂ ಬಿಜೆಪಿ ತನ್ನ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂಬುದಕ್ಕೆ ಸಾಕ್ಷಿ. ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇಕಿಲ್ಲ ಎಂದು ಹೇಳಿದರು.

ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪಾಲಿಕೆ ಸದಸ್ಯರಾದ ಲೋಕೇಶ್ ಪಿಯಾ, ಶೋಭಾ ಸುನೀಲ್, ಬ್ಲಾಕ್ ಅಧ್ಯಕ್ಷರುಗಳಾದ ಶ್ರೀಧರ್, ಜಿ.ಸೋಮಶೇಖರ್, ಮುಖಂಡರಾದ ಎಚ್.ಎ.ವೆಂಕಟೇಶ್, ಪ್ರಕಾಶ್, ಪ್ರಭುಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT