ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಎಂದೆಂದೂ ನಶಿಸದು–ಕಳವಾಗದು: ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಮಹಾ ಶತಾವಧಾನ್ ಸಮಾರಂಭ
Last Updated 18 ಆಗಸ್ಟ್ 2019, 13:29 IST
ಅಕ್ಷರ ಗಾತ್ರ

ಮೈಸೂರು: ‘ಅಧಿಕಾರ ಹೋಗಬಹುದು. ದುಡ್ಡು ಕಳವಾಗಬಹುದು. ಆದರೆ ಸಂಪಾದಿಸಿದ ಜ್ಞಾನ ಎಂದೆಂದೂ ನಶಿಸದು. ವಿದ್ಯೆಯನ್ನು ಯಾರೊಬ್ಬರೂ ಕಳವು ಮಾಡಲಾಗದು’ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಮೈಸೂರಿನ ಶ್ರೀ ಸುಮತಿನಾಥ್ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘ ಮತ್ತು ಶತಾವಧಾನ್ ಸಮಿತಿ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಮಹಾ ಶತಾವಧಾನ್ ಸಮಾರಂಭ ಉದ್ಘಾಟಿಸಿದ ಸ್ವಾಮೀಜಿ, ‘ಹಣ ಗಳಿಕೆ ಸುಲಭ. ಆದರೆ ವಿದ್ಯೆ ಸಂಪಾದನೆ ಕಷ್ಟಕರವಾದುದು. ಜ್ಞಾನ ಶ್ರದ್ಧೆಯಿಂದ ಪ್ರಾಪ್ತವಾಗುವುದು. ತಂದೆ–ತಾಯಿಯ ಸಂಸ್ಕಾರದಿಂದ ದೊರೆಯುವಂತದ್ದು’ ಎಂದರು.

‘ವಿದ್ಯೆಗೆ ಪ್ರಾಧಾನ್ಯತೆ ಕೊಟ್ಟರೆ, ಜೀವನಕ್ಕೂ ಆದ್ಯತೆ ಕೊಟ್ಟಂತಾಗುತ್ತದೆ. ಅಷ್ಟಾವಧಾನ, ಶತಾವಧಾನ, ಸಹಸ್ರಾವಧಾನ ಪಾಂಡಿತ್ಯದ ಪ್ರದರ್ಶನವಲ್ಲ. ಸರಸ್ವತಿಯ ದರ್ಶನವಿದು. ಎಲ್ಲರಿಗೂ ಜ್ಞಾನ ದೊರಕಲಿ ಎಂದು ನಡೆಸುವ ಸಂಸ್ಕಾರ ಕಾರ್ಯಕ್ರಮವಿದು. ಆವಧಾನ ನಡೆಸುವ ಶಕ್ತಿ ಎಲ್ಲರಿಗೂ ಇರಲ್ಲ. ಸರಸ್ವತಿಯ ಕೃಪೆ, ಏಕಾಗ್ರತೆಯಿಂದ ಸಾಧಿಸುವ ಸಿದ್ಧಿಯಿದು. ಆವಧಾನದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸಿಗುವ ಉತ್ತರ ಜೀವನಕ್ಕೆ ಆದರ್ಶವಾಗಬೇಕು. ಅಳವಡಿಕೆಯಾಗಬೇಕು’ ಎಂದು ಹೇಳಿದರು.

ಮುನಿಶ್ರೀ ನಯಚಂದ್ರ ಸಾಗರ್ ಸುರಿಜೀ, ಮುಂಬಯಿ ಹೈಕೋರ್ಟ್‌ ನ್ಯಾಯಮೂರ್ತಿ ಕಮಲ್‌ ಕಿಶೋರ್‌, ಮೈಸೂರು ಜೈನ ಸಂಘದ ಅಧ್ಯಕ್ಷ ಬಿ.ಎ.ಕೈಲಾಸ್‌ಚಂದ್ ಜೈನ್ ಇತರರಿದ್ದರು.

ಮಹಾಶತಾವಧಾನ್ ಕುರಿತಂತೆ...

ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಜೈನ ಮುನಿ ನಯಚಂದ್ರ ಸಾಗರ್ ಸುರಿಜೀ ಅವರ ಶಿಷ್ಯ, ಮುನಿಶ್ರೀ ಚಂದ್ರಪ್ರಭ ಚಂದ್ರ ಸಾಗರ್‌ಜೀ ಮಹಾಶತಾವಧಾನ್ ನಡೆಸಿಕೊಟ್ಟರು.

ನಾಲ್ಕು ತಾಸು ನಡೆದ ಮಹಾಶತಾವಧಾನ್‌ನಲ್ಲಿ ವಿಜ್ಞಾನ, ಗಣಿತ, ಧರ್ಮ, ಆಧ್ಯಾತ್ಮ, ತತ್ವಜ್ಞಾನ, ಚರಿತ್ರೆ, ಸುಪ್ರಸಿದ್ಧ ನಾಣ್ಣುಡಿಗಳು, ಜೈನ ಶ್ಲೋಕಗಳು, ಸ್ಥಳಗಳು, ನದಿಗಳು, ವಿವಿಧ ದೇಶಗಳ ಕರೆನ್ಸಿ ಸೇರಿದಂತೆ ಮತ್ತಿತರ ವಿಷಯದಲ್ಲಿ ನಾದ ಮಂಟಪದಲ್ಲಿ ನೆರದಿದ್ದ ಮೂರು ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ, 200 ಜನರು ಮುನಿಶ್ರೀಗೆ ಒಂದಾದ ಮೇಲೆ ಒಂದರಂತೆ ಪ್ರಶ್ನೆ ಕೇಳಿದರು.

ಧ್ಯಾನಸ್ಥರಾಗಿ ಎಲ್ಲ ಪ್ರಶ್ನೆಗಳನ್ನು ಆಲಿಸಿದ ಮುನಿಶ್ರೀ ಚಂದ್ರಪ್ರಭ ಚಂದ್ರ ಸಾಗರ್‌ಜೀ ಕ್ರಮವಾಗಿ 1ರಿಂದ 200 ಪ್ರಶ್ನೆಗಳಿಗೆ ಉತ್ತರಿಸಿದರು. ಬಳಿಕ 200ರಿಂದ 1ನೇ ಪ್ರಶ್ನೆಗೂ ಉಲ್ಟಾ ಉತ್ತರ ಹೇಳುವ ಮೂಲಕ ತಮ್ಮ ಸ್ಮರಣ ಶಕ್ತಿ ಪ್ರದರ್ಶಿಸಿದರು. ಉತ್ತರ ಹೇಳುವ ನಡುವೆ ಸಭಿಕರು ಮಧ್ಯೆ ಮಧ್ಯೆ ಕೇಳಿದ ಪ್ರಶ್ನೆ–ವಿಚಾರಗಳಿಗೂ ಮುನಿಶ್ರೀ ಉತ್ತರಿಸಿದರು.

2014ರಲ್ಲಿ ಮುಂಬೈನಲ್ಲಿ ಶತಾವಧಾನ ನಡೆಸಿಕೊಟ್ಟು 100 ಪ್ರಶ್ನೆಗಳಿಗೂ ಅನುಕ್ರಮವಾಗಿ ಉತ್ತರಿಸಿದ್ದ ಇವರು, 2018ರಲ್ಲಿ ಬೆಂಗಳೂರಿನಲ್ಲಿ ಮಹಾಶತಾವಧಾನ್ ನಡೆಸಿಕೊಟ್ಟಿದ್ದರು. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಮಹಾ ಶತಾವಧಾನ ನಡೆಸಿಕೊಟ್ಟರು.

‘200 ಪ್ರಶ್ನೆಗೆ ಕ್ರಮಾನುಸಾರ ಉತ್ತರ ನೀಡುವುದು ಆಧ್ಯಾತ್ಮವು ಹೌದು, ವಿಜ್ಞಾನವೂ ಹೌದು. ಸಮಾಜದಲ್ಲಿ ಹಲವರು ಶತಾವಧಾನಕ್ಕೆ ಪ್ರಯತ್ನ ಪಟ್ಟಿದ್ದರೂ ಪೂರ್ಣ ಮಾಡಿದವರು ಕಡಿಮೆ. ಮಹಾಶತಾವಧಾನ್‌ ಪೂರ್ಣಗೊಳಿಸುವುದು ಬಹುದೊಡ್ಡ ಸಾಧನೆ. ಇದಕ್ಕೆ ಏಕಾಗ್ರತೆ ಮುಖ್ಯ. ಏಕಾಗ್ರತೆ ಇದ್ದರೆ ಈ ಸಾಧನೆ ಮಾಡಬಹುದು. ಏಕಾಗ್ರತೆ ಇಲ್ಲದಿದ್ದರೆ ಸಾಧನೆ ಸಾಧ್ಯವಾಗದು. ಶತಾವಧಾನದಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಏಕಾಗ್ರತೆ ಹೆಚ್ಚುವ ಮೂಲಕ ವ್ಯಕ್ತಿತ್ವ ವಿಕಸನವಾಗಲಿದೆ’ ಎಂದು ಮುನಿಶ್ರೀ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT