ಸೋಮವಾರ, ನವೆಂಬರ್ 18, 2019
23 °C

ಚಾಮುಂಡಿಬೆಟ್ಟ | 27ರಂದು ಮಹಿಷ ದಸರಾ

Published:
Updated:
Prajavani

ಮೈಸೂರು: ಅಹಿಂದ ಸಂಘಟನೆಗಳ ವತಿಯಿಂದ 6ನೇ ವರ್ಷದ ‘ಮಹಿಷ ದಸರಾ ಹಾಗೂ ಮೂಲನಿವಾಸಿಗಳ ನಾಗಬೌದ್ಧರ ಮಹಾಸಮ್ಮೇಳನ’ವನ್ನು ಸೆ. 27ರಂದು ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಚಾಮುಂಡಿಬೆಟ್ಟಕ್ಕೆ ಬುದ್ದ, ಭೀಮ, ಅಶೋಕ ಹಾಗೂ ಮಹಿಷರಥಗಳ ಮೂಲಕ ಮೆರವಣಿಗೆ ಸಾಗಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರಗುರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರಿನಲ್ಲಿ ಪರಾಕ್ ಕೂಗುವಾಗ ‘ಮಹಿಷಮಂಡಲಾಧೀಶ್ವರ’ ಎಂದು ಹೇಳುತ್ತಾರೆ. ಇದು ಹಿಂದೆ ಮಹಿಷನ ನಾಡಾಗಿತ್ತು ಎಂದು ಯದುವಂಶದವರು ಒಪ್ಪಿಕೊಂಡಿರುವುದಕ್ಕೆ  ದ್ಯೋತಕ ಎಂದರು.

ಚಾಮುಂಡಿ ವೈದಿಕರು ಸೃಷ್ಟಿಸಿದ ದುಷ್ಟ ಶಕ್ತಿ. ಮಹಿಷ ಅಸಲಿ ಪಾತ್ರ. ವೈದಿಕರು ಹೊಟ್ಟೆಪಾಡಿಗಾಗಿ ಚಾಮುಂಡೇಶ್ವರಿ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಹೇಳಿದರು.

ಕೆಟ್ಟ ವ್ಯಕ್ತಿಯ ಹೆಸರನ್ನು ರಾಜ್ಯಗಳಿಗೆ ಇಡುವುದಿಲ್ಲ. ಮಹಿಷ ಉತ್ತಮ ವ್ಯಕ್ತಿಯಾಗಿದ್ದರಿಂದಲೇ ಆತನ ಹೆಸರನ್ನು ನಾಡಿಗೆ ಇಡಲಾಗಿದೆ. ಚಾಮುಂಡಿಬೆಟ್ಟದಲ್ಲಿ ಮಹಿಷನ ಪ್ರತಿಮೆ ಬದಲು ಬೌದ್ಧ ಭಿಕ್ಕು ಮಹಿಷನ ಪ್ರತಿಮೆ ನಿರ್ಮಿಸಬೇಕು. ಮಹಿಷ ದಸರಾವನ್ನು ಸರ್ಕಾರವೇ ಆಚರಿಸಬೇಕು ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಒತ್ತಾಯಿಸಿದರು.

ಕಾರ್ಯಕ್ರಮಕ್ಕೆ ಅಶೋಕಪುರಂ ಅಭಿಮಾನಿ ಬಳಗ, ಭಾರತ್ ಮೂಲನಿವಾಸಿಗಳ ಟ್ರಸ್ಟ್, ದ್ರಾವಿಡ ಮಹಾಸಭಾ, ದಲಿತ ವೆಲ್‍ಫೇರ್ ಟ್ರಸ್ಟ್, ಕರ್ನಾಟಕ ಬುದ್ದಧಮ್ಮ ಸಮಿತಿ, ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ದಲಿತ ಸಂಘರ್ಷ ಸಮಿತಿ ಮೈಸೂರು ಶಾಖೆ, ದಲಿತ ಸಂಘಟನೆಗಳ ಒಕ್ಕೂಟ, ಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಮೈಸೂರು, ಕರ್ನಾಟಕ ದಲಿತ ವೇದಿಕೆ, ಪ್ರಜಾ ಪರಿವರ್ತನಾ ವೇದಿಕೆ, ಎ.ವಿ.ಎಸ್.ಎಸ್ ಸೇರಿದಂತೆ ತಾಲ್ಲೂಕಿನ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಸಹಯೋಗ ನೀಡಿವೆ ಎಂದು ಮುಖಂಡ ಪುರುಷೋತ್ತಮ ತಿಳಿಸಿದರು.

ಪ್ರತಿಕ್ರಿಯಿಸಿ (+)