ಶುಕ್ರವಾರ, ಅಕ್ಟೋಬರ್ 18, 2019
20 °C
ನಗರದಲ್ಲಿ 3 ಕಡೆಯಿಂದ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು

ಮಹಿಷ ಪ್ರತಿಮೆಗೆ ಮಾಲಾರ್ಪಣೆ ಯತ್ನ: 145 ಮಂದಿ ವಶಕ್ಕೆ

Published:
Updated:
Prajavani

ಮೈಸೂರು: ಮಹಿಷ ದಸರೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಯತ್ನಿಸಿದ 145 ಮಂದಿಯನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶಸ್ವಾಮೀಜಿ ನೇತೃತ್ವದಲ್ಲಿ ಪುರಭವನದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಗುಂಪು, ಚಾಮುಂಡಿಬೆಟ್ಟಕ್ಕೆ ಪ್ರತಿಭಟನಾ ಮೆರವಣಿಗೆ ಹೊರಡಲು ಯತ್ನಿಸಿತು. ಈ ವೇಳೆ ಪೊಲೀಸರು ಇವರನ್ನು ವಶಕ್ಕೆ ತೆಗೆದುಕೊಂಡರು.

ತಾವರೆಕಟ್ಟೆಯಿಂದ ಹೊರಟ ಮತ್ತೊಂದು ಗುಂಪನ್ನು ಹಾಗೂ ಮಹಿಷಾಸುರ ಪ್ರತಿಮೆ ಬಳಿ ಮಾಲಾರ್ಪಣೆ ಮಾಡಲು ನುಗ್ಗಿದ ಮಹಿಷ ದಸರಾ ಆಚರಣಾ ಸಮಿತಿಯ ಸದಸ್ಯರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಈ ವೇಳೆ ಪ್ರತಿಭಟನಕಾರರಿಗೂ ಪೊಲೀಸರಿಗೂ ವಾಗ್ವಾದ ನಡೆಯಿತು. ಮಹಿಷಾಸುರ ಪ್ರತಿಮೆ ಬಳಿ ಪೊಲೀಸ್ ವ್ಯಾನ್ ಏರಲು ಪ‍್ರತಿಭಟನಾಕಾರರು ಒಪ್ಪಲಿಲ್ಲ. ಹೀಗಾಗಿ, ಬಲವಂತವಾಗಿಯೇ ಅವರನ್ನು ಎಳೆದೊಯ್ದು ನಗರ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಇರಿಸಲಾಯಿತು. ಅಲ್ಲಿಯೂ ಕಾರ್ಯಕರ್ತರು ಚೋರನಹಳ್ಳಿ ಶಿವಣ್ಣ, ಪುರುಷೋತ್ತಮ್ ನೇತೃತ್ವದಲ್ಲಿ ಕ್ರಾಂತಿಗೀತೆಗಳನ್ನು ಹಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಒಂದು ಗಂಟೆ ಬಳಿಕ ಬಿಡುಗಡೆ ಮಾಡಲಾಯಿತು.

ದಲಿತ ಸಂಘರ್ಷ ಸಮಿತಿ ಸಂಚಲಕ ಬೆಟ್ಟಯ್ಯ ಕೋಟೆ ಮಾತನಾಡಿ, ‘ಶಾಂತಿಯುತವಾಗಿ ರ‍್ಯಾಲಿ ನಡೆಸಿ, ಮಹಿಷ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಪೊಲೀಸರು ಅವಕಾಶ ಕೊಡುತ್ತಿಲ್ಲ. ಎಲ್ಲ ತಾಲ್ಲೂಕುಗಳಿಂದಲೂ ಸುಮಾರು 5 ಸಾವಿರ ಮಂದಿ ಬರುವ ನಿರೀಕ್ಷೆ ಇತ್ತು. ಆದರೆ, ಪೊಲೀಸರು ಅಲ್ಲಲ್ಲೇ ಎಲ್ಲರನ್ನೂ ತಡೆದಿದ್ದಾರೆ. ಇದೊಂದು ರೀತಿಯ ಸರ್ವಾಧಿಕಾರಿ ವರ್ತನೆ’ ಎಂದು ಕಿಡಿಕಾರಿದರು.

Post Comments (+)