ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಆನೆಗಳನ್ನು ನಡೆಸಿಕೊಂಡು ಬನ್ನಿ: ವಿಶ್ವನಾಥ್- ಸೋಮಶೇಖರ್ ಕಾವೇರಿದ ಚರ್ಚೆ

Last Updated 6 ಆಗಸ್ಟ್ 2022, 11:05 IST
ಅಕ್ಷರ ಗಾತ್ರ

ಮೈಸೂರು: 'ದಸರಾದಲ್ಲಿ ಭಾಗವಹಿಸಲಿರುವ ಆನೆಗಳನ್ನು ವೀರನಹೊಸಳ್ಳಿಯಿಂದ ಮೈಸೂರಿಗೆ ನಡೆಸಿಕೊಂಡೇ ಬರಬೇಕು' ಎಂದು ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಆಗ್ರಹಿಸಿದರು. ಈ ವಿಚಾರದಲ್ಲಿ ಅವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನಡುವೆ ಕಾವೇರಿದ ಚರ್ಚೆ ನಡೆಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ದಸರಾ ಮಹೋತ್ಸವ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಶ್ವನಾಥ್, 'ನಾಡಹಬ್ಬ ದಸರಾ ಮಹೋತ್ಸವಕ್ಕೆ ಗಜಪಯಣ ಕೇಂದ್ರ ಬಿಂದು ಆಗಿದೆ. ದಸರಾ ಶುರುವಾಯಿತು ಎನ್ನುವುದು ಗಜಪಯಣದಿಂದಲೇ ಇಡೀ ರಾಜ್ಯಕ್ಕೆ ಗೊತ್ತಾಗುತ್ತದೆ. ಆದರೆ, ನೀವು ಆನೆಗಳಿಗೆ ಪೂಜೆ ಮಾಡಿ ಅವುಗಳನ್ನು ವೀರನಹೊಸಳ್ಳಿಯಿಂದ ಮೈಸೂರಿಗೆ ಲಾರಿಗಳಲ್ಲಿ ಸಾಗಿಸುತ್ತೀರಿ. ಇದರಿಂದ ಗಜ ಪಯಣದ ಉದ್ದೇಶವೇ ಸಫಲವಾಗುವುದಿಲ್ಲ. ನಡೆಸಿಕೊಂಡು ಬರಲು ಇರುವ ಸಮಸ್ಯೆಯಾದರೂ ಏನು' ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಡಾ.ವಿ.ಕರಿಕಾಳನ್, 'ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆನೆಗಳನ್ನು ನಿತ್ಯ 15 ಕಿ.ಮೀ. ಮಾತ್ರವೇ ನಡೆಸಬೇಕು. ರಕ್ಷಣೆಯ ದೃಷ್ಟಿಯಿಂದ ಜನನಿಬಿಡ ರಸ್ತೆಯಲ್ಲಿ ನಡೆಸಿಕೊಂಡು ಬರುವಂತಿಲ್ಲ. ವೀರನಹೊಸಳ್ಳಿಯಿಂದ ಮೈಸೂರಿಗೆ 72 ಕಿ.ಮೀ. ಆಗುತ್ತದೆ. ಆ.10ರಂದು ಅರಮನೆ ಬಳಿ ಆನೆಗಳನ್ನು ಸ್ವಾಗತಿಸುವ ಕಾರ್ಯಕ್ರಮ ನಿಗದಿ ಆಗಿರುವುದರಿಂದ, ಆ ಸಮಯಕ್ಕೆ ತಲುಪಲು ಆನೆಗಳನ್ನು ನಿತ್ಯ 26 ಕಿ.ಮೀ. ನಡೆಸಬೇಕಾಗುತ್ತದೆ' ಎಂದು ಸಮಜಾಯಿಷಿ ನೀಡಿದರು.

ಇದರಿಂದ ಸಿಟ್ಟಾದ ವಿಶ್ವನಾಥ್, 'ಸಬೂಬು ಹೇಳುವುದು ‌ಬೇಡ. ಅದನ್ನು ಕೇಳಲು ಯಾರೂ ಸಿದ್ಧವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ಇಲ್ಲೇ ಇದ್ದಾರೆ. ಈಗಲೇ ಸಂಬಂಧಿಸಿದ ಅಧಿಕಾರಿಗಳ ‌ಜತೆ ಸಮಾಲೋಚನೆ ನಡೆಸಿ‌ ಇಲ್ಲೇ ನಿರ್ಧರಿಸಿದರೆ ಉತ್ತಮ. ಇಲ್ಲದಿದ್ದರೆ ಗಜ ಪಯಣದ ವೇಳೆ ನಾನು ರಸ್ತೆಯಲ್ಲಿ ಮಲಗಿ ಪ್ರತಿರೋಧ ದಾಖಲಿಸುತ್ತೇನೆ' ಎಂದು ಬೆದರಿಕೆ ಒಡ್ಡಿದರು.

ಮಧ್ಯಪ್ರವೇಶಿಸಿದ ಶಾಸಕ ತನ್ವೀರ್ ಸೇಠ್, 'ಈಗಾಗಲೇ ಗಜ ಪಯಣದ ಹಾಗೂ ಬರಮಾಡಿಕೊಳ್ಳುವ ದಿನಾಂಕ ತೀರ್ಮಾನವಾಗಿದೆ. ಆನೆಗಳನ್ನು ನಡೆಸಿಕೊಂಡು ಬರುವ ವಿಷಯವನ್ನು ಮುಂದಿನ‌ ವರ್ಷಕ್ಕೆ ಇಟ್ಟುಕೊಳ್ಳಬಹುದು' ಎಂದು ಸಲಹೆ ನೀಡಿದರು.

ಇದನ್ನು ಒಪ್ಪದ ವಿಶ್ವನಾಥ್, 'ಆನೆಗಳನ್ನು ಸ್ವಾಗತಿಸುವುದನ್ನು ಎರಡು‌ ದಿನ ಮುಂದೂಡಬಹುದು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ' ಎಂದು ವಾದಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ, 'ಜಿಲ್ಲಾಧಿಕಾರಿ ಹಾಗೂ ಡಿಸಿಎಫ್ ಮೇಲೆ ಒತ್ತಡ ಹೇರಲಾಗದು. ಅದರಿಂದ ಪ್ರಯೋಜನ ಆಗುವುದಿಲ್ಲ. ಅರಣ್ಯ ಸಚಿವರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು. ಹಿರಿಯ ಅಧಿಕಾರಿಗಳು ಇಲ್ಲದೇ ಇಂತಹ ತೀರ್ಮಾನ ಮಾಡಲಾಗದು' ಎಂದು ಸಮರ್ಥಿಸಿಕೊಂಡರು. ಆದರೂ ವಿಶ್ವನಾಥ್ ಸಮಾಧಾನಗೊಳ್ಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT