ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು, ಹಲಸಿಗೆ ಮುಗಿಬಿದ್ದ ಜನತೆ

ಕರ್ಜನ್‌ ಪಾರ್ಕ್‌ನಲ್ಲಿ ಶುರುವಾಗಿದೆ ಐದು ದಿನಗಳ ಪ್ರದರ್ಶನ, ಮಾರಾಟ
Last Updated 24 ಮೇ 2019, 20:17 IST
ಅಕ್ಷರ ಗಾತ್ರ

ಮೈಸೂರು: ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಕರ್ಜನ್‌ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಮಾವು ಮತ್ತು ಹಲಸು ಮೇಳಕ್ಕೆ ನಾಗರಿಕರು ಮುಗಿಬಿದ್ದರು.

ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಮಾಗಿಸಿದಹಣ್ಣುಗಳನ್ನು ಬಳಸುವಂತೆ ಇಲಾಖೆಯು ಪ್ರಚಾರ ಕೈಗೊಂಡಿದ್ದು, ಈ ಮೇಳದಲ್ಲೂ ಇದೇ ವಿಷಯವನ್ನು ಮುಂದಿಟ್ಟುಕೊಂಡು ಮಳಿಗೆಗಳನ್ನು ತೆರೆಯಲಾಗಿದ್ದು, ಹತ್ತಾರು ವಿಧದ ತಳಿಗಳ ಮಾವಿನ ಹಣ್ಣುಗಳು ಬಾಯಿಯಲ್ಲಿ ನೀರೂರಿಸುತ್ತಿವೆ.

ಮೇಳಕ್ಕೆ ಶುಕ್ರವಾರ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಮಾತನಾಡಿ, ರೈತರಿಗೆ ಮಾರುಕಟ್ಟೆ ಒದಗಿಸುವುದು ನಮ್ಮ ಮುಖ್ಯ ಆಶಯ. ಜತೆಗೆ ಗುಣಮಟ್ಟದ ಹಾಗೂ ಬೇರೆ ಬೇರೆ ತಳಿಯ ಮಾವಿನ ಹಣ್ಣನ್ನು ಒಂದೇ ಸೂರಿನಲ್ಲಿ ಗ್ರಾಹಕರಿಗೆಸಿಗುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ. ಗ್ರಾಹಕರು ಮಾವಿನ ಸಹಜ ರುಚಿಯನ್ನುಅನುಭವಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎ.ಬಿ.ಸಂಜಯ್ ಮಾತನಾಡಿ, ಮೇಳದಲ್ಲಿ ಒಟ್ಟು 42 ಮಳಿಗೆಗಳನ್ನು ತೆರೆಯಲಾಗಿದ್ದು, 18 ಮಳಿಗೆಗಳನ್ನು ಜಿಲ್ಲೆಯ ರೈತರಿಗೆ ನೀಡಲಾಗಿದೆ. ಮಿಕ್ಕಂತೆ ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರದಿಂದಲೂ ರೈತರು ಮಾವು ಪ್ರದರ್ಶಿಸಿ, ಮಾರಾಟ ಮಾಡಲಿದ್ದಾರೆ. ರತ್ನಗಿರಿ, ಅಲ್ಫಾನ್ಸೊ, ಬಾದಾಮಿ, ಬಗನಪಲ್ಲಿ, ರಸಪುರಿ, ಮಲಗೋಬಾ, ತೋತಾಪುರಿ, ಮಲ್ಲಿಕಾ, ನೀಲಂ, ದಶೇರಿ ಇಲ್ಲಿರುವ ಪ್ರಮುಖ ತಳಿಗಳು ಎಂದು ಮಾಹಿತಿ ನೀಡಿದರು.

ಮುಗಿಬಿದ್ದರು: ಖಾಸಗಿ ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ದರದಲ್ಲಿ ಮಾವು ಸಿಗುತ್ತಿರುವ ಕಾರಣದಿಂದ ಗ್ರಾಹಕರು ಮೇಳಕ್ಕೆ ಮೊದಲ ದಿನವೇ ಮುಗಿಬಿದ್ದರು. ಹಾಪ್‌ಕಾಮ್ಸ್ ಹಾಗೂ ಎಪಿಎಂಸಿ ದರದಕ್ಕಿಂತಲೂ ಕಡಿಮೆ ದರವಿದೆ. ಬಾದಾಮಿ, ಅಲ್ಫಾನ್ಸೊಗೆ ಕೆ.ಜಿ.ಗೆ ₹ 55, ರಸಪುರಿ ₹ 40, ಮಲಗೋಬಾ ₹ 50, ಸೆಂಧೂರ ₹30, ತೋತಾಪುರಿ ₹ 20, ಬಗನಪಲ್ಲಿ ₹ 40, ದಶೇರಿ ₹ 50, ಅಮ್ರಪಾಲಿ ₹ 60, ಸಕ್ಕರೆಗುತ್ತಿ ₹ 65, ರಾಜೇಶ್ವರಿ ₹ 35 ಬೆಲೆ ಇದೆ.

ಹಲಸಿನ ಬೆಲೆಯೂ ಇಲ್ಲಿ ಕಡಿಮೆಯೇ ಇದೆ. ಕೆ.ಜಿ.ಗೆ ₹ 35 ಇದೆ. ಸಣ್ಣ ಗಾತ್ರದ 5 ತೊಳೆಗೆ ₹ 10, ದೊಡ್ಡಗಾತ್ರದ 4 ತೊಳೆಗೆ ₹ 10 ನಿಗದಿ ಮಾಡಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಡಿಮೆ ಬೆಲೆಗೆ ಮಾರಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಸಹಾಯಕ ನಿರ್ದೇಶಕಿ ಹಬೀಬಾ ನಿಷಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಸಾಯನಿಕ ಮುಕ್ತ: ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಹಣ್ಣನ್ನು ಮಾಗಿಸಿದರೆ ರೋಗ ಬರುವುದು ಕಟ್ಟಿಟ್ಟ ಬುತ್ತಿ. ಹಾಗಾಗಿ, ಇಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿ, ಹಣ್ಣುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ತಿಳಿಸಿದರು.

ಇದರ ಬದಲಿಗೆ ಶಿಲೀಂದ್ರ ಉತ್ಪನ್ನವಾದ ‘ಇಥಲೀನ್’ ದ್ರಾವಣ ಬಳಸಬಹುದು. ಇದು ನೈಸರ್ಗಿಕವಾಗಿ ಹಣ್ಣನ್ನು ಮಾಗುವಂತೆ ಮಾಡುತ್ತದೆ. ಆರೋಗ್ಯಕ್ಕೂ ತೊಂದರೆಯಾಗದು ಎಂದು ಮಾಹಿತಿ ನೀಡಿದರು.

ಮೇ 28ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7ರವರೆಗೂ ಈ ಮೇಳ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT