ಮಾವು ಕಡಿಮೆ ಇಳುವರಿ?

ಶನಿವಾರ, ಏಪ್ರಿಲ್ 20, 2019
31 °C
ಅತಿಯಾದ ಬಿಸಿಲಿನಿಂದ ಉದುರಿದ ಹೂವು, ಹೀಚುಕಾಯಿ

ಮಾವು ಕಡಿಮೆ ಇಳುವರಿ?

Published:
Updated:
Prajavani

ಮೈಸೂರು: ‘ಹಣ್ಣುಗಳ ರಾಜ’ ಎನಿಸಿರುವ ಮಾವಿನ ಹಣ್ಣುಗಳ ಋತು ಆರಂಭವಾಗಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಬೆಳೆಗಾ ರರಿಗೆ ಅತಿಯಾದ ತಾಪ ನಿರಾಸೆ ಉಂಟುಮಾಡಿದೆ.

ಈ ಬಾರಿ ಹೆಚ್ಚಿನ ಕಡೆಗಳಲ್ಲಿ ಮರಗಳು ಉತ್ತಮವಾಗಿ ಹೂಗಳನ್ನು ಬಿಟ್ಟಿದ್ದವು. ಆದರೆ, ಸುಡು ಬಿಸಿಲು ಮತ್ತು ಇತ್ತೀಚೆಗೆ ಸುರಿದ ಒಂದೆರಡು ಮಳೆಗಳಿಂದಾಗಿ ಹೂವು ಮತ್ತು ಹೀಚುಕಾಯಿಗಳು ಉದುರಿವೆ. ಇದರಿಂದ ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಚೆನ್ನಾಗಿ ಹೂ ಬಿಟ್ಟಿದ್ದ ಅವಧಿಯಲ್ಲಿ ಒಂದೆರಡು ದಿನ ಇಬ್ಬನಿಯೂ ಬಿದ್ದಿತ್ತು. ಇದರಿಂದಲೂ ಹೂವುಗಳು ಕಳಚಿಬಿದ್ದಿದ್ದವು. ಅತಿಯಾದ ತಾಪ ಹಾಗೂ ಅಕಾಲಿಕ ಮಳೆಯಿಂದ ಹೂ ಮತ್ತು ಹೀಚುಕಾಯಿ ಸಾಮಾನ್ಯವಾಗಿ ಉದುರುತ್ತವೆ.

ಜಿಲ್ಲೆಯಲ್ಲಿ ಮೈಸೂರು ತಾಲ್ಲೂಕಿನ ಇಲವಾಲ, ಹುಲ್ಲಹಳ್ಳಿ ಅಲ್ಲದೆ ಕೆ.ಆರ್.ನಗರ, ಎಚ್.ಡಿ.ಕೋಟೆ, ನಂಜನಗೂಡು, ಪಿರಿಯಾಪಟ್ಟಣ, ಹುಣಸೂರು, ಬಿಳಿಕೆರೆ, ಹಂಪಾಪುರ ಭಾಗಗಳಲ್ಲಿ ಮಾವು ಬೆಳೆಯಲಾಗುತ್ತದೆ. ಬಾದಾಮಿ, ರಸಪುರಿ, ಸೆಂಧೂರ, ಮಲಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ, ಸಕ್ಕರಗುತ್ತಿ ಮುಂತಾದ ತಳಿಗಳನ್ನು ಜಿಲ್ಲೆಯಲ್ಲಿ ಬೆಳೆಯುವರು.

2017–18ರ ಸಾಲಿನಲ್ಲಿ ಜಿಲ್ಲೆಯಲ್ಲಿ 4,144 ಹೆಕ್ಟೇರ್‌ ಪ್ರದೇಶಗಳಲ್ಲಿ ಮಾವು ಬೆಳೆಯಲಾಗಿದ್ದು, ಒಟ್ಟು 34,701 ಟನ್‌ಗಳಷ್ಟು ಇಳುವರಿ ಲಭಿಸಿತ್ತು ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಎ.ಬಿ.ಸಂಜಯ್‌ ತಿಳಿಸಿದರು. ಹೆಕ್ಟೇರ್‌ಗೆ ಸರಾಸರಿ 8.37 ಟನ್ ಇಳುವರಿ ಲಭಿಸಿತ್ತು.

2018–19ರ ಸಾಲಿನಲ್ಲಿ ಸುಮಾರು 4,136 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿತ್ತು. ವಾರ್ಷಿಕ 40,117 ಟನ್‌ ಉತ್ಪಾದನೆ ಲಭಿಸಬಹುದು ಎಂದು ಅಂದಾಜಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಉತ್ಪಾದನೆಯಾಗುವ ಸಾಧ್ಯತೆಯಿದೆ.

ರಾಸಾಯನಿಕ ಬಳಕೆಗೆ ಕಡಿವಾಣ: ಮೈಸೂರು ನಗರದ ಮಾರುಕಟ್ಟೆಗೆ ಮಾವು ಇನ್ನೂ ದೊಡ್ಡ ಪ್ರಮಾಣದಲ್ಲಿ ಬಂದಿಲ್ಲ. ಸಾಮಾ ನ್ಯವಾಗಿ ಮೇ ಮೊದಲ ವಾರದಲ್ಲಿ ಎಲ್ಲ ತಳಿಗಳ ಮಾವುಗಳು ಲಭ್ಯವಾಗುತ್ತವೆ. ಆ ಬಳಿಕ ಜುಲೈವರೆಗೂ ಮಾರುಕಟ್ಟೆಯಲ್ಲಿ ಹಣ್ಣಿನ ರಾಜನ ‘ಅಬ್ಬರ’ ಇರುತ್ತದೆ.

ನಗರದ ಕೆಲ ವ್ಯಾಪಾರಿಗಳು ಲಾಭ ದಾಸೆಗೆ ಮತ್ತು ಗ್ರಾಹಕರನ್ನು ಸೆಳೆಯಲು ಕ್ಯಾಲ್ಸಿ ಯಂ ಕಾರ್ಬೈಡ್‌ ಒಳಗೊಂಡಂತೆ ವಿವಿಧ ರೀತಿಯ ರಾಸಾಯನಿಕ ಬಳಸಿ ಅವಧಿಗೂ ಮುನ್ನವೇ ಮಾವಿನ ಕಾಯಿ ಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡು ತ್ತಾರೆ. ರಾಸಾಯನಿಕ ಬಳಸಿ ಮಾಗಿಸಿದ ಹಣ್ಣು ಆರೋಗ್ಯಕ್ಕೆ ಹಾನಿಕರ. ಇದರಿಂದ ಎಷ್ಟೋ ಮಂದಿ ಮಾವು ಖರೀದಿಸಲು ಹಿಂಜರಿಯುವರು.

ರಾಸಾಯನಿಕ ಬಳಸುವ ವರ್ತಕರ ಮೇಲೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ಯನ್ನು ಮೈಸೂರು ಮಹಾನಗರ ಪಾಲಿಕೆ ನೀಡಿದೆ. ಕ್ಯಾಲ್ಸಿಯಂ ಕಾರ್ಬೈಡ್‌ ಬದಲು ಎಥಿಲಿನ್‌ ಅನಿಲ ಬಳಸುವಂತೆ ವ್ಯಾಪಾರಿಗಳಿಗೆ ಅರಿವು ಮೂಡಿಸಲಾಗಿದೆ.

‘ಎಥಿಲಿನ್‌ ಅನಿಲ ಬಳಸಿ ಅಥವಾ ನೈಸರ್ಗಿಕವಾಗಿ ಕಾಯಿಗಳನ್ನು ಮಾಗಿಸುವಂತೆ ನಮಗೆ ಅಧಿಕಾರಿಗಳು ಸೂಚಿಸಿದ್ದಾರೆ. ಆದ್ದರಿಂದ ಈ ಬಾರಿ ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಡ್‌ ಬಳಸದಿರಲು ನಿರ್ಧರಿಸಿದ್ದಾರೆ’ ಎಂದು ನಗರದ ಹಣ್ಣಿನ ವ್ಯಾಪಾರಿ ಮುಸ್ತಫಾ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !