ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಎಂ.ಜಿ ರಸ್ತೆ ಮಾರುಕಟ್ಟೆ: ಜನರ ಪಾಡು ಮೂರಾಬಟ್ಟೆ...

Last Updated 2 ಡಿಸೆಂಬರ್ 2019, 10:45 IST
ಅಕ್ಷರ ಗಾತ್ರ

ಮೈಸೂರು: ಒಂದೆಡೆ ಕಸದ ರಾಶಿ. ಕೊಳೆತ ತರಕಾರಿಗಳ ದುರ್ವಾಸನೆ. ಅಡ್ಡಾದಿಡ್ಡಿ ಓಡಾಡುವ ಬೀಡಾಡಿ ದನಗಳು. ಒಡೆದಿರುವ ಸ್ಲ್ಯಾಬ್‌ಗಳು, ನಾಪತ್ತೆಯಾಗಿರುವ ಡಿವೈಡರ್‌, ಎಲ್ಲೆಂದರಲ್ಲಿ ನಿಂತಿರುವ ವಾಹನಗಳು...

ಇದು ಸ್ವಚ್ಛನಗರಿಯ ಆಯಕಟ್ಟಿನ ಪ್ರದೇಶದಲ್ಲಿರುವ, ಎಂ.ಜಿ.ರಸ್ತೆಯ ಮಾರುಕಟ್ಟೆ ಸ್ಥಿತಿ.

ಅಗ್ರಹಾರ ಕಡೆಯಿಂದ ಮಾಲ್ ಆಫ್ ಮೈಸೂರು ಕಡೆಗೆ ಹೋಗುವ ಎಂ.ಜಿ.ರಸ್ತೆಯಲ್ಲಿರುವ ಮಾರುಕಟ್ಟೆಯ ಬಳಿ ಪ್ಲಾಸ್ಟಿಕ್, ಕೊಳೆತ ತರಕಾರಿಗಳು, ಬಾಳೆ ಎಲೆಗಳು ಹಾಗೂ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ನಿತ್ಯವೂ ಸಾವಿರಾರು ಗ್ರಾಹಕರು, ವ್ಯಾಪಾರಿಗಳು, ರೈತರು ಬರುವ ಈ ಸ್ಥಳ ಅಧ್ವಾನಗಳ ಆಗರವಾಗಿದೆ.

ವಾಹನ ನಿಲ್ದಾಣವಾದ ರಸ್ತೆ: ಇಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಮಾರುಕಟ್ಟೆಗೆ ಮೈಸೂರಿನ ಸುತ್ತಮುತ್ತಲಿನ ಭಾಗಗಳಿಂದ ತರಕಾರಿಗಳನ್ನು ಹೊತ್ತು ತಂದ ಆಟೊ, ಪಿಕ್‌ಅಪ್‌, ಸಣ್ಣ ಗೂಡ್ಸ್‌ ವಾಹನಗಳು ಹಾಗೂ ಗ್ರಾಹಕರೂ ವಾಹನಗಳನ್ನು ರಸ್ತೆಯಲ್ಲೇ ನಿಲುಗಡೆ ಮಾಡುತ್ತಾರೆ. ಇದರಿಂದ ಇಡೀ ರಸ್ತೆಯೇ ವಾಹನ ನಿಲ್ದಾಣದಂತೆ ಭಾಸವಾಗುತ್ತದೆ. ಅಲ್ಲದೇ ಈ ಮಾರ್ಗ ಕಿಷ್ಕಿಂದೆಯಾಗಿ ಪರಿಣಮಿಸಿದೆ.

ಬೀಡಾಡಿ ದನಗಳ ಹಾವಳಿ: ಆಹಾರವನ್ನರಸಿ ಮಾರುಕಟ್ಟೆಗೆ ಲಗ್ಗೆಯಿಡುವ ಬೀಡಾಡಿ ದನಗಳು, ಬಿಸಾಡಿದ್ದ ಕೊಳೆತ ತರಕಾರಿ, ಹಣ್ಣುಗಳು, ಬಾಳೆ ಎಲೆ, ಸೊಪ್ಪುಗಳನ್ನು ತಿನ್ನುತ್ತಾ ರಸ್ತೆಯ ಮಧ್ಯೆಯೇ ನಿಲ್ಲುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆಗ್ಗಿಂದಾಗೆ ಅಪಘಾತಗಳೂ ಸಂಭವಿಸಿವೆ.

ಅನೈರ್ಮಲ್ಯದ ಆಗರ: ನಗರದ ಪ್ರಮುಖ ಪ್ರದೇಶದಲ್ಲಿ ಇರುವ ಈ ಮಾರುಕಟ್ಟೆಯಲ್ಲಿ ಸ್ವಚ್ಛತೆಯದ್ದೇ ಸಮಸ್ಯೆಯಾಗಿದೆ. ಪ್ರತಿನಿತ್ಯ ಮಾರಾಟವಾಗದೆ ಉಳಿಯುವ ತರಕಾರಿಗಳ ವಿಲೇವಾರಿಗೆ ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ರೈತರು ಮತ್ತು ವ್ಯಾಪಾರಿಗಳು ಉಳಿದ ತರಕಾರಿಗಳನ್ನು ಮಾರುಕಟ್ಟೆ ಆವರಣ, ರಸ್ತೆ ಬದಿಯಲ್ಲೇ ಸುರಿಯುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆ ಸದಾ ದುರ್ವಾಸನೆ ಬೀರುತ್ತಿದೆ.

ಸಾರ್ವಜನಿಕ ಶೌಚಾಲಯವಿದ್ದರೂ ಅನೇಕರು ಇಲ್ಲಿ ಬಯಲಿಗೇ ಹೋಗುತ್ತಾರೆ. ರಸ್ತೆ ಬದಿಯ ಕಾಪೌಂಡ್‌ಗೆ ಮೂತ್ರ ಮಾಡುವುದರಿಂದ ರಸ್ತೆಯೆಲ್ಲ ಸದಾ ಗಬ್ಬೆದ್ದು ನಾರುತ್ತಿರುತ್ತದೆ.

ಮಳೆ ಬಂದರೆ ಕೆಸರುಗದ್ದೆ: ಮಳೆ ಬಂದರಂತೂ ಎಂ.ಜಿ ರಸ್ತೆಯ ಮಾರುಕಟ್ಟೆ ಕೆಸರುಗದ್ದೆಯಾಗುತ್ತದೆ. ವ್ಯಾಪಾರಿಗಳು ಮತ್ತು ಗ್ರಾಹಕರು ನಿತ್ಯದ ವಹಿವಾಟು ನಡೆಸಲು ಇಲ್ಲಿ ಸಾಹಸ ಪಡಬೇಕು. ಆವರಣದಲ್ಲಿ ವಿಲೇವಾರಿಯಾಗದೆ ಬಿದ್ದಿರುವ ತರಕಾರಿ ತ್ಯಾಜ್ಯದ ಜತೆ ಮಳೆ ನೀರು ಸೇರಿ ಇಡೀ ಪ್ರದೇಶ ರಾಡಿಯಾಗುತ್ತದೆ.

ಗೂಡ್ಸ್‌ ವಾಹನಗಳು ಮಾರುಕಟ್ಟೆ ಯೊಳಗೆ ಸಂಚರಿಸುವ ಹಾದಿಯಲ್ಲಿ ಕೆಸರು ತುಂಬಿಕೊಂಡಿರುತ್ತದೆ. ಸಣ್ಣ ವಾಹನಗಳ (ಗೂಡ್ಸ್‌ ಆಟೊ) ಚಕ್ರಗಳು ಕೆಸರಿನಲ್ಲಿ ಹೂತು ಹೋಗುವ ಕಾರಣ ಚಾಲಕರಿಗೆ ಸವಾಲಾಗಿ ಪರಿಣಮಿಸುತ್ತದೆ. ತುಂತುರು ಮಳೆ ಬಂದರೂ ಈ ಮಾರುಕಟ್ಟೆ ಆವರಣ ಗದ್ದೆಯಂತಾಗುತ್ತದೆ. ಮಳೆಗಾಲ ಮುಗಿದರೂ ಇತ್ತೀಚಿನ ದಿನಗಳವರೆಗೂ ಮಳೆಯಾಗುತ್ತಿರುವ ಕಾರಣ ನಿತ್ಯದ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ.

ಎಂ.ಜಿ.ರಸ್ತೆಯಲ್ಲಿನ ವಸ್ತು ಪ್ರದರ್ಶನ ಪ್ರಾಧಿಕಾರದ ಕಾಂಪೌಂಡ್ ಪಕ್ಕ ಹಾಗೂ ಮಾರುಕಟ್ಟೆಯ ಮುಂಭಾಗದಲ್ಲಿ ಮಳೆಯ ನೀರು ಸರಾಗವಾಗಿ ಹರಿಯಲು ಚರಂಡಿಯನ್ನು ನಿರ್ಮಿಸಿ, ಸ್ಲ್ಯಾಬ್ ನಿಂದ ಮುಚ್ಚಲಾಗಿತ್ತು. ಇಂದು ಸ್ಲ್ಯಾಬ್‍ಗಳು ಅಲ್ಲಲ್ಲಿ ಒಡೆದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಪಾದಚಾರಿಗಳು ಎಚ್ಚರ ತಪ್ಪಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ಜತೆಗೆ ಚರಂಡಿಯಲ್ಲಿ ಪ್ಲಾಸ್ಟಿಕ್, ಕೊಳೆತ ತರಕಾರಿ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು, ಮಳೆ ಬಂತೆಂದರೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ.

ಡಿವೈಡರ್ ನಾಪತ್ತೆ: ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯ ಮಧ್ಯೆ ಡಿವೈಡರ್ ನಿರ್ಮಿಸಲಾಗಿತ್ತು. ಆದರೆ, ಅದು ಕಿತ್ತುಬಂದಿದ್ದು ಎಲ್ಲೆಡೆ ಕಬ್ಬಿಣ ಹೊರಚಾಚಿಕೊಂಡಿದೆ. ದಿನನಿತ್ಯ ಮಾರುಕಟ್ಟೆಗೆ ತರಕಾರಿಗಳನ್ನು ಹೊತ್ತುತರುವ ವಾಹನ ಚಾಲಕರು ಮಾರುಕಟ್ಟೆ ಡಿವೈಡರ್ ಮೇಲೆಯೇ ವಾಹನಗಳನ್ನು ತಿರುಗಿಸುವುದರಿಂದ ಡಿವೈಡರ್‌ ಇದ್ದರೂ ಇಲ್ಲದಂತೆಯೇ ಆಗಿದೆ.

ಮಾರುಕಟ್ಟೆ ಜಾಗದಲ್ಲಿ 2009ರಲ್ಲಿ ಪಿ.ಮಣಿವಣ್ಣನ್ ಜಿಲ್ಲಾಧಿಕಾರಿ ಯಾಗಿದ್ದಾಗ ವ್ಯಾಪಾರಿಗಳಿಗೆ ₹25 ಲಕ್ಷ ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಟ್ಟಿದ್ದರು. ಆದರೆ, ಈ ಜಾಗದ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿಗೆ ಸ್ಥಳಾಂತರಗೊಳ್ಳಲು ಸಾಧ್ಯವಾಗಲಿಲ್ಲ. ಈಗ ಆ ಮಳಿಗೆಗೆಳು ಪಾಳುಬಿದ್ದಿದ್ದು, ಬೀಡಾಡಿ ದನಗಳ ಹಾಗೂ ನಾಯಿಗಳ ಆಶ್ರಯತಾಣವಾಗಿದೆ.

ವ್ಯಾಪಾರಿಗಳ ಹಿತ ಕ್ಕಾಗಿ ಸಹಕಾರ ಸಂಘ: ದಲಿತ ಸಂಘರ್ಷ ಸಮಿತಿ ಮಾರುಕಟ್ಟೆಯನ್ನು ನಿರ್ವಹಣೆ ಮಾಡುತ್ತಿದ್ದು, ಸಿದ್ಧಾರ್ಥ ತರಕಾರಿ ಬೆಳೆಯುವ ರೈತರು ಮತ್ತು ಮಾರಾಟಗಾರರ ವಿವಿಧೋದ್ದೇಶ ಸಹಕಾರ ಸಂಘವನ್ನೂ ಸ್ಥಾಪಿಸಲಾಗಿದೆ. ಅದರ ಮೂಲಕ ವ್ಯಾ‍‍ಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಸದ್ಯ 500 ವ್ಯಾಪಾರಿಗಳು ಇದರ ಸದಸ್ಯರಾಗಿದ್ದು, ಎಲ್ಲರಿಗೂ ಗುರುತಿನ ಚೀಟಿಗಳನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT