ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹಣ್ಣು, ತರಕಾರಿ ಮಾರುಕಟ್ಟೆಯೋ ಕಸದ ಮಾರುಕಟ್ಟೆಯೋ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಕಿರು ಮಾರುಕಟ್ಟೆಗಳ ಅವ್ಯವಸ್ಥೆ
Last Updated 22 ಫೆಬ್ರುವರಿ 2021, 4:33 IST
ಅಕ್ಷರ ಗಾತ್ರ

ಮೈಸೂರು: ಆ ಕಟ್ಟಡಗಳ ಮೇಲೆ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಣ್ಣು ಮತ್ತು ತರಕಾರಿ ಮಾರುಕಟ್ಟೆ’ ಎಂಬ ಹೆಸರಿದೆ. ಆದರೆ, ಒಳ ಪ್ರವೇಶಿಸುತ್ತಿದ್ದಂತೆ ಕಸದ ಮಾರುಕಟ್ಟೆಯೋ ಎಂಬಂತೆ ಭಾಸವಾಗುತ್ತದೆ. ಕೆಲವೆಡೆ ಈ ಕಟ್ಟಡಗಳ ಆವರಣದ ಒಳಗೆ ಪ್ರವೇಶಿಸಲು ಪೊದೆ, ಕುರುಚಲು ಗಿಡಗಳೇ ಅಡ್ಡಿಯಾಗುತ್ತವೆ. ಆದರೆ, ಇವೂ ಸಹ ಮಾರುಕಟ್ಟೆಗಳು...

ಹೌದು... ಇವು ನಗರದ ಸುತ್ತಲಿನ ಪ್ರಮುಖ ಸ್ಥಳಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ನಿರ್ಮಿಸಿರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳ ದುಸ್ಥಿತಿ. ಮೈಸೂರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಮಾರುಕಟ್ಟೆಗಳು ಒಮ್ಮೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸಿಯೇ ಇಲ್ಲ ಎಂಬುದು ಅಲ್ಲಿನ ಸ್ಥಿತಿಗತಿ ಕಂಡರೆ ವೇದ್ಯವಾಗುತ್ತದೆ.

ಬೀದಿಬದಿ ವ್ಯಾಪಾರಿಗಳಿಗೆ, ರೈತರಿಗೆ, ಗ್ರಾಹಕರಿಗೆ ನೆರವಾಗಬೇಕಿದ್ದ ಈ ಮಾರುಕಟ್ಟೆಗಳು ಈಗ ವ್ಯರ್ಥವಾಗಿ ಉಳಿದಿವೆ. ಈ ಪೈಕಿ ಒಂದೆರಡು ಮಾರುಕಟ್ಟೆಗಳು ಮಾತ್ರ ಉದ್ದೇಶವನ್ನು ಈಡೇರಿಸುತ್ತಿವೆ. ಉಳಿದವುಗಳು ಮದ್ಯವ್ಯಸನಿಗಳ, ಭಿಕ್ಷುಕರ, ಬೀದಿ
ನಾಯಿಗಳ ಆವಾಸ ಸ್ಥಾನಗಳಾಗಿವೆ. ಗ್ರಾಹಕರ ಮತ್ತು ಮಧ್ಯವರ್ತಿಗಳ ಕೊಂಡಿಯಾಗಬೇಕಿದ್ದ ಈ ಮಾರುಕಟ್ಟೆ
ಗಳು ನಿರ್ವಹಣೆ ಮಾಡಬೇಕಾದವರ ಕೊಂಡಿಯನ್ನೇ ಕಳಚಿಕೊಂಡಿವೆ.

ನೆಲೆ ಇಲ್ಲದವರ ನೆಲೆ: ಶಾರದಾದೇವಿ ನಗರ ಬಳಿಯ ತಿಬ್ಬಾದೇವಿ ವೃತ್ತದ ಹೈಟೆನ್ಷನ್‌ ಲೈನ್‌ ಪಕ್ಕದಲ್ಲೇ ಇರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಭಿಕ್ಷುಕರು, ಬೀದಿನಾಯಿಗಳು ತಮ್ಮ ನೆಲೆಯನ್ನಾಗಿಸಿಕೊಂಡಿದ್ದಾರೆ. 48 ವ್ಯಾಪಾರಿ ಕಟ್ಟೆಗಳಿದ್ದು, ಕೆಳಭಾಗದಲ್ಲಿ ವಸ್ತುಗಳನ್ನು ಇರಿಸಿಕೊಳ್ಳಲು ಮಾಡಿರುವ ಜಾಗದಲ್ಲಿ ಭಿಕ್ಷುಕರ ಬಟ್ಟೆ, ವಸ್ತುಗಳು ಬಿದ್ದಿವೆ. ಇನ್ನು ಕೆಲವು ಕಡೆ ಮದ್ಯದ ಖಾಲಿ ಬಾಟಲಿಗಳು, ಪ್ಯಾಕೆಟ್‌ಗಳು ಬಿದ್ದಿವೆ. ಇಂಥ ಜಾಗದಲ್ಲೇ ಕೆಲ ದಿನಗಳ ಹಿಂದೆ ಬೆಂಕಿ ಹಾಕಿರುವ ಕುರುಹೂ ಇದೆ.

‘ಹೊರ ಆವರಣದಲ್ಲಿ ಬೆಳೆದಿದ್ದ ಹುಲ್ಲನ್ನು ಇತ್ತೀಚೆಗೆ ಸ್ವಚ್ಛಗೊಳಿಸಿ ರಾಶಿ ಹಾಕಿದ್ದಾರೆ. ಈ ಮಾರುಕಟ್ಟೆಯಲ್ಲಿ ಒಂದು ದಿನವೂ ವ್ಯಾಪಾರ ನಡೆದಿರುವ ಬಗ್ಗೆ ನನಗೆ ಗೊತ್ತಿಲ್ಲ. ಬಳಕೆಯೇ ಆಗದೆ ಇರುವುದರಿಂದ ಅವ್ಯವಸ್ಥೆ ಇದೆ. ಸಂಬಂಧಪಟ್ಟವರೂ ಕಟ್ಟಡ ನಿರ್ಮಾಣವಾದ ಬಳಿಕ ಕಾಳಜಿ ವಹಿಸಿಲ್ಲ. ಇಲ್ಲಿ ಅತಿ ಹೆಚ್ಚು ಮನೆಗಳು ಇದ್ದು ವ್ಯಾಪಾರ ಕೇಂದ್ರವೂ ಅಕ್ಕಪಕ್ಕದಲ್ಲಿವೆ. ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದರೆ ಇದು ಉತ್ತಮ ಕೊಡುಗೆಯಾಗುತ್ತಿತ್ತು’ ಎನ್ನುತ್ತಾರೆ ಚದುರಂಗ ರಸ್ತೆ ನಿವಾಸಿ ಉದಯ ಕುಮಾರ್‌.

ಪೊದೆ ಬಳ್ಳಿಗಳಿಂದ ಆವೃತ: ಕುವೆಂಪು ನಗರ ಬಸ್‌ ಡಿಪೋದ ಹಿಂಭಾಗದ ಅರವಿಂದ ನಗರದಲ್ಲಿರುವ ಮಾರುಕಟ್ಟೆಗೆ ಪ್ರವೇಶಿಸುವುದೇ ಕಷ್ಟ. ಗೇಟ್‌ ಮುರಿದಿದೆ. ಗೇಟ್‌ ಅನ್ನೇ ಪೊದೆ, ಬಳ್ಳಿಗಳು ಮುಚ್ಚಿವೆ. ಈ ಮಾರುಕಟ್ಟೆಯನ್ನು ತಮ್ಮ ನೆಲೆಯಾಗಿಸಿಕೊಂಡವರು ಸದಾ ಹೋಗಿ ಬರುವುದರಿಂದ ದಾರಿ ಸವೆದಿದೆ. ಮಾರುಕಟ್ಟೆಯ ಸುತ್ತ ಇರುವ ರಸ್ತೆಯಲ್ಲಿ ಓಡಾಡುವಾಗ ಈ ಕಟ್ಟಡವೇ ಕಾಣದಷ್ಟು ಪೊದೆಗಳು ಬೆಳೆದಿವೆ. ಪರಿಣಾಮವಾಗಿ ಇದೊಂದು ಕಸ ಹಾಕುವ ಸ್ಥಳವಾಗಿ ಬದಲಾಗಿದೆ ಎನ್ನುವುದಕ್ಕೆ ಇಲ್ಲಿ ಕಸದ ರಾಶಿಯ ಪುರಾವೆ ಇದೆ.

‘ಸುಮಾರು 8 ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣವಾಗಿದೆ. ಅಂದಿನಿಂದ ಇಂದಿನವರೆಗೆ ಒಂದು ದಿನವೂ ಇಲ್ಲಿ ವ್ಯಾಪಾರ ನಡೆದಿಲ್ಲ. ದೀಪ, ನೀರು, ಶೌಚಾಲಯ ಮೊದಲಾದ ಮೂಲಸೌಕರ್ಯವನ್ನೇ ಕಲ್ಪಿಸದೆ ವ್ಯಾಪಾರ ಮಾಡಿ ಎಂದರೆ ಯಾರು ಬರುತ್ತಾರೆ. ತರಕಾರಿ ಇಲ್ಲಿ ತಂದಿಟ್ಟು ಎಲ್ಲ ಕೆಲಸಕ್ಕೆ ಮನೆಗೆ ಓಡಿಹೋಗಲು ಆಗುತ್ತದೆಯೇ?’ ಎಂದು ಕುವೆಂಪುನಗರದ ಮುರಳಿ ಅಸಮಾಧಾನ ವ್ಯಕ್ತಪಡಿಸಿದರು.

ಕಸದ ತೊಟ್ಟಿಗೆ ಸ್ಥಳಾವಕಾಶ: ವಿಜಯನಗರ 2ನೇ ಹಂತದ 6ನೇ ಅಡ್ಡರಸ್ತೆಯಲ್ಲಿರುವ ಈ ಮಾರುಕಟ್ಟೆಯ ಪರಿಸ್ಥಿತಿಯೇ ಭಿನ್ನ. ಮಾರುಕಟ್ಟೆಯ ಆವರಣವೇ ಅಧಿಕೃತವಾಗಿ ಕಸದ ತೊಟ್ಟಿಯಂತಾಗಿದೆ. ಪಾಲಿಕೆಯ ಕಸದ ತೊಟ್ಟಿಯನ್ನೇ ಇಲ್ಲಿ ಇರಿಸಲಾಗಿದೆ. ತೊಟ್ಟಿ
ಯಲ್ಲಿರುವ ಕಸವನ್ನು ನಾಯಿಗಳು, ದನಕರುಗಳು ಎಳೆದಾಡುವುದು ಇಲ್ಲಿ ಸಾಮಾನ್ಯವಾಗಿದೆ. ಕಸದ ತೊಟ್ಟಿ ಇಟ್ಟಿದ್ದರೂ ಸಾರ್ವಜನಿಕರು ಆವರಣದಲ್ಲೇ ಕಸ ಎಸೆದು ಹೋಗುತ್ತಾರೆ.

ಜನಸಂಚಾರ ಸ್ಥಳದಿಂದ ದೂರ: ನಗರದ 1ನೇ ವಾರ್ಡ್‌ನ ಹೆಬ್ಬಾಳ 1ನೇ ಹಂತದ ಹುಡ್ಕೊ ಎಲ್‌ಐಜಿ ಬಡಾವಣೆಯ ಲಕ್ಷ್ಮೀಕಾಂತ ನಗರದಲ್ಲಿರುವ ಮಾರುಕಟ್ಟೆ ವ್ಯವಸ್ಥಿತವಾಗಿ ನಿರ್ಮಾಣವಾಗಿದೆ. ಮಾರುಕಟ್ಟೆಯ ಆವರಣವೂ ವಿಶಾಲವಾಗಿದ್ದು, ವ್ಯಾಪಾರಿಗಳು ಮನಸ್ಸು ಮಾಡಿದರೆ ಒಳ್ಳೆಯ ಅವಕಾಶ ಇದೆ. ಆದರೆ, ಇದರ ಸದುಪಯೋಗವೇ ಆಗುತ್ತಿಲ್ಲ. ಆವರಣ ಬೇಲಿ ಕೆಲವೆಡೆ ಶಿಥಿಲಗೊಂಡಿದೆ. ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯಕ್ಕೆ ಬಾಗಿಲೇ ಇಲ್ಲ. ಆವರಣದ ಕೆಲವು ಪ್ರದೇಶವನ್ನು ಇತ್ತೀಚೆಗೆ ಸ್ವಚ್ಛಗೊಳಿಸಿರುವಂತೆ ಕಂಡು ಬರುತ್ತಿದೆ. ಅಲ್ಲಲ್ಲಿ ಕಸದ ರಾಶಿ, ಮದ್ಯದ ಖಾಲಿ ಬಾಟಲಿಗಳು, ಬೀಡಿ, ಸಿಗರೇಟಿನ ತುಂಡುಗಳೂ ಬಿದ್ದಿವೆ.

ಮುಡಾದಿಂದ ನಿರ್ಮಿಸಿರುವ ಮಾರುಕಟ್ಟೆಯಲ್ಲಿ ನಾವು ವ್ಯಾಪಾರ ಆರಂಭಿಸಿದರೆ ಅಲ್ಲಿಗೆ ಯಾರು ಬರುತ್ತಾರೆ? ನಮಗೆ ನಷ್ಟ ಉಂಟಾದರೆ ಅದನ್ನು ಭರಿಸುವವರು ಯಾರು? ಈ ಕಾರಣದಿಂದಾಗಿ ನಾವು ಅಲ್ಲಿ ವ್ಯಾಪಾರ ಮಾಡುತ್ತಿಲ್ಲ. ಬರೇ ತರಕಾರಿ ಖರೀದಿಸಲು ಮುಖ್ಯ ರಸ್ತೆಯಿಂದ ಒಳ ರಸ್ತೆಯಲ್ಲಿ ಹುಡುಕಿಕೊಂಡು ಹೋಗಲಾಗುತ್ತದೆಯೇ. ಅಲ್ಲದೆ, ಈ ಮಾರುಕಟ್ಟೆ ಎಲ್ಲಿದೆ ಎಂದು ಹುಡುಕುವುದೂ ಕಷ್ಟ’ ಎಂದು ವ್ಯಾಪಾರಿ ಸೋಮಶೇಖರ ವ್ಯವಸ್ಥೆಯ ಬಗ್ಗೆ ಕಿಡಿಕಾರಿದರು.

ಹಾಡಹಗಲೇ ಮದ್ಯವ್ಯಸನಿಗಳಿಗೆ ಆಸರೆ, ಇಸ್ಪೀಟ್ ಆಟ: ನಗರದ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ ಇರಬೇಕಾದ ವ್ಯಾಪಾರಿಗಳಿಗಿಂತ ಹೆಚ್ಚು ಮದ್ಯವ್ಯಸನಿಗಳು, ಭಿಕ್ಷುಕರು, ದುಶ್ಚಟಗಳಲ್ಲಿ ನಿರತರಾದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆವರಣದ ಸುತ್ತ ಗಲೀಜು ಇದ್ದು, ಕಸ ಕಡ್ಡಿಗಳು ರಾಶಿ ಬಿದ್ದಿವೆ. ನಡು ಮಧ್ಯಾಹ್ನವೇ ಮಾರುಕಟ್ಟೆ ಪ್ರಾಂಗಣದಲ್ಲಿ ಮದ್ಯಪಾನ ಮಾಡುತ್ತಾ, ಇಸ್ಪಿಟ್‌ ಆಡುತ್ತಾ, ಜಗಳ ಮಾಡಿಕೊಂಡು ಇರುವುದು ಕಂಡುಬಂತು. ಪಕ್ಕದಲ್ಲೇ ಆಟೊ ನಿಲ್ದಾಣ, ಮುಖ್ಯ ರಸ್ತೆ ಇದೆ.

ಸಂಜೆಯಾದರೆ ಪುಂಡರು- ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗಿದೆ. ಬೆಳಿಗ್ಗೆ ಎದ್ದರೆ ಸಾಕಷ್ಟು ಮದ್ಯದ ಬಾಟಲಿಗಳ ದರ್ಶನವಾಗುತ್ತದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದಶಕಗಳ ಹಿಂದೆ ನಿರ್ಮಿಸಿದ್ದ ಕಿರು ಮಾರುಕಟ್ಟೆಗಳು ಹಾಳುಕೊಂಪೆಯಂತಾಗಿದೆ. ಕಿರು ಮಾರುಕಟ್ಟೆಗಳಲ್ಲಿ ಸ್ಥಳಾವಕಾಶ ಕಡಿಮೆ. ಅಲ್ಲಿ ವ್ಯಾಪಾರ ಮಾಡಲು, ನಮ್ಮ ವಸ್ತುಗಳನ್ನು ಇರಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವುದು ವ್ಯಾಪಾರಿಗಳ ಅಳಲು.

ವ್ಯಾಪಾರಿಗಳು, ಸಾರ್ವಜನಿಕರು ಹೀಗಂತಾರೆ...

ವಿನ್ಯಾಸವೇ ಪೂರಕವಾಗಿಲ್ಲ

ರೈತರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಆಗಲಿ ಎಂದು ವಿವಿಧ ಕಡೆ ಕಿರು ಮಾರುಕಟ್ಟೆಯೇನೋ ನಿರ್ಮಾಣ ಮಾಡಿದರು. ಆದರೆ, ಇನ್ನಷ್ಟು ಸೌಲಭ್ಯಗಳನ್ನೂ ಕಲ್ಪಿಸಬೇಕಿತ್ತು. ಸಮರ್ಪಕ ನಿರ್ವಹಣೆ, ವ್ಯಾಪಾರಿಗಳನ್ನು ಮನವೊಲಿಸಲು ಸಾಧ್ಯವಾಗದೆ ಇದ್ದುದರಿಂದ ವಹಿವಾಟು ಆರಂಭವಾಗಲಿಲ್ಲ. ಮಾರುಕಟ್ಟೆ ಸ್ವರೂಪ ಹಾಗೂ ವಿನ್ಯಾಸವೂ ನಮಗೆ ಪೂರಕವಾಗಿಲ್ಲ. ಗ್ರಾಹಕರೇ ಬರದಂಥ ಕಡೆ ನಿರ್ಮಾಣವಾಗಿದೆ

-ಶಿವಯ್ಯ, ತರಕಾರಿ ವ್ಯಾಪಾರಿ

ಜನ ಬರದ ಕಡೆ ಮಾರುಕಟ್ಟೆ

ವ್ಯಾಪಾರ ನಡೆಯುವ ಸ್ಥಳದಲ್ಲಿಯೇ ಮಾರುಕಟ್ಟೆಯನ್ನು ನಿರ್ಮಾಣ ಮಾಡಬೇಕು. ಅದರ ಹೊರತು ಎಲ್ಲೋ ಒಂದು ಕಡೆ ಜಾಗ ಸಿಕ್ಕಿದೆ ಎಂದು ನಿರ್ಮಾಣ ಮಾಡಿದರೆ ಆಗುತ್ತದೆಯೇ?. ಆ ರೀತಿ ಮಾಡಿದರೆ ಇಂದಿನ ಪರಿಸ್ಥಿತಿಯೇ ಉಂಟಾಗುತ್ತದೆ. ನಾವೆಲ್ಲ ಮುಖ್ಯ ರಸ್ತೆಯಲ್ಲೇ ವ್ಯಾಪಾರ ನಡೆಸುತ್ತೇವೆ. ನಮಗೆ ಉತ್ತಮ ವ್ಯಾಪಾರ ಆಗುತ್ತದೆ

-ಸೋಮಶೇಖರ್‌, ವ್ಯಾಪಾರಿ

ಹಣ ಮಾಡಿಕೊಂಡು ಹೋದರು

ಮದ್ಯಪಾನ ಮಾಡುವವರಿಗೆ, ಭಿಕ್ಷುಕರಿಗೆ ಒಳ್ಳೆಯ ಜಾಗ ಮಾಡಿಕೊಟ್ಟಿದ್ದಾರೆ. ಕಟ್ಟಡ ಕಟ್ಟಿಸಿ ಅವರು ಹಣ ಮಾಡಿಕೊಂಡು ಹೋದರು. ಸಾರ್ವಜನಿಕರ ತೆರಿಗೆ ಹಣ ಈ ರೀತಿ ವ್ಯರ್ಥ ಆಯಿತು. ಸಮಾಜದ ಬಗ್ಗೆ, ವ್ಯಾಪಾರಿಗಳ ಬಗ್ಗೆ ಉತ್ತರದಾಯಿತ್ವ ಇದ್ದವರು ಇಂಥ ಕೆಲಸ ಮಾಡುತ್ತಾರೆಯೇ?

-ಮುರಳಿ, ಕುವೆಂಪುನಗರ

ಕಾಳಜಿಯೇ ಇಲ್ಲ

ಮಾರುಕಟ್ಟೆಯಲ್ಲಿ ಒಂದು ದಿನವೂ ವ್ಯಾಪಾರ ನಡೆದಿರುವ ಬಗ್ಗೆ ನನಗೆ ಗೊತ್ತಿಲ್ಲ. ಬಳಕೆಯೇ ಆಗದೆ ಇರುವುದರಿಂದ ಅವ್ಯವಸ್ಥೆ ಹೆಚ್ಚಾಗಿದೆ. ಸಂಬಂಧಪಟ್ಟವರೂ ಈ ಕಟ್ಟಡ ನಿರ್ಮಾಣವಾದ ಬಳಿಕ ಕಾಳಜಿ ವಹಿಸಿಲ್ಲ. ಇಲ್ಲಿ ಅತಿ ಹೆಚ್ಚು ಮನೆಗಳು ಇದ್ದು ವ್ಯಾಪಾರ ಕೇಂದ್ರವೂ ಅಕ್ಕಪಕ್ಕದಲ್ಲಿವೆ.

-ಜಯಂತಿ, ಶಾರದಾದೇವಿನಗರ

ಸೂಕ್ತ ವ್ಯವಸ್ಥೆಗೆ ಕ್ರಮ: ಎಚ್‌.ವಿ.ರಾಜೀವ್‌

ಈ ಅವ್ಯವಸ್ಥೆ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಅವು ಸದುಪಯೋಗ ಆಗಲಿವೆ ಎಂದು ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ತಿಳಿಸಿದರು.

ಕಿರು ಮಾರುಕಟ್ಟೆಗಳನ್ನು ವ್ಯಾಪಾರ ನಡೆಯುವಂಥ ಸ್ಥಳದಲ್ಲೇ ನಿರ್ಮಿಸಿದ್ದರೆ ವ್ಯಾಪಾರವಾಗುತ್ತಿತ್ತು. ವ್ಯಾಪಾರಿಗಳು ಬಾರರೇ ಇರುವುದರಿಂದ ಪುಂಡ–ಪೋಕರಿಗಳು ಬಂದು ಅನೈತಿಕ ಚಟುವಟಿಕೆಗಳನ್ನು ಮಾಡುತ್ತಾರೆ. ನಾನು ಆರಂಭದಲ್ಲೇ ಈ ಬಗ್ಗೆ ಪರಿಶೀಲನೆ ನಡೆಸಿದ್ದೆ. ಕುಂಬಾಕೊಪ್ಪಲಿನಲ್ಲಿ ಮಾತ್ರ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಏಕೆಂದರೆ ಅದನ್ನು ವ್ಯಾಪಾರ ನಡೆಯುವಂಥ ಮುಖ್ಯ ರಸ್ತೆ ಪಕ್ಕದಲ್ಲೇ ನಿರ್ಮಿಸಿದ್ದಾರೆ. ವ್ಯಾಪಾರಿಗಳನ್ನು ಮಾರುಕಟ್ಟೆಗಳಿಗೆ ಸ್ಥಳಾಂತರ ಮಾಡಲು ಪ್ರಯತ್ನಿಸಿದೆವು. ಆದರೆ, ಅದು ಸಾಧ್ಯವಾಗಲಿಲ್ಲ ಎಂದರು.

ಮಾರುಕಟ್ಟೆ ಇರುವ ಸ್ಥಳಕ್ಕೆ ಗ್ರಾಹಕರು ಬರುವುದಿಲ್ಲ. ಈಗ ನಾವು ವ್ಯಾಪಾರ ಮಾಡುವ ಸ್ಥಳದಿಂದ ಮಾರುಕಟ್ಟೆಯ ಸ್ಥಳಕ್ಕೆ ಹೋಗಿ ವ್ಯಾಪಾರ ಮಾಡಿದರೆ ನಾವು ಹಿಂದೆ ಇದ್ದ ಸ್ಥಳದಲ್ಲಿ ಬೇರೆಯವರು ಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಆಗ ನಮಗೆ ಎರಡೂ ಕಡೆಯೂ ವ್ಯಾಪಾರ ಇಲ್ಲದಂತಾಗುತ್ತದೆ ಎಂದು ನಿರಾಕರಿಸಿದ್ದರು. ವ್ಯಾಪಾರಕ್ಕಾಗಿಯೇ ಸ್ಥಳಾವಕಾಶ ಒದಗಿಸಿದ್ದ ಬಗ್ಗೆ ವ್ಯಾಪಾರಿಗಳು, ಗ್ರಾಹಕರೂ ಯೋಚನೆ ಮಾಡಿಲ್ಲ. ಈ ಬಗ್ಗೆ ಪರ್ಯಾಯ ಯೋಜನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇವೆ. ಕೆಲವು ದಿನಗಳ ಬಳಿಕ ಅನುಕೂಲ ಆಗಲಿದ್ದು, ಈ ಬಗ್ಗೆ ಗಮನ ಹರಿಸಲಾಗುವುದು. ಎಂಜಿನಿಯರ್‌ಗಳ ಜತೆ ತೆರಳಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT