ಶುಕ್ರವಾರ, ನವೆಂಬರ್ 22, 2019
20 °C

ಲಿಂಗ ತಾರತಮ್ಯದ ಆಚರಣೆ ಬದಿಗಿಟ್ಟ ವಿವಾಹ

Published:
Updated:

ಮೈಸೂರು: ಲಿಂಗ ತಾರತಮ್ಯ ಮಾಡುವಂತಹ ಧಾರ್ಮಿಕ ವಿಧಿವಿಧಾನಗಳನ್ನು ದೂರ ಇಟ್ಟು ಹೆಣ್ಣು ಮತ್ತು ಗಂಡು ಸಮಾನರು ಎಂಬ ಸಿದ್ಧಾಂತದಂತೆ ಯುವ ಜೋಡಿಯೊಂದು ಇಲ್ಲಿ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ವಿದೇಶಿ ವರ ರೆನೆ ವ್ಯಾನ್ ಬೋಗೆರ್ಟ್ ಅವರಿಗೆ ಕನ್ನಡ ಪದಗಳನ್ನು ಕಲಿಸಿ, ಭಾರತೀಯ ಸಂಪ್ರದಾಯದಂತೆ ಮದುವೆ ಮಾಡಿದ್ದು ವಿಶೇಷ ಎನಿಸಿತು.

ಇದು ವಕೀಲರು ಮತ್ತು ಹೋರಾಟಗಾರರು ಆದ ಸುಮನಾ ಮತ್ತು ರಾಮ ರವೀಂದ್ರ ಪುತ್ರಿ ಅನು ಎಸ್.ನೆಟ್ಟರ್ ಹಾಗೂ ನೆದರ್‌ಲ್ಯಾಂಡ್‌ನ ರೆನೆ ವ್ಯಾನ್ ಬೋಗೆರ್ಟ್ ಅವರ ವಿವಾಹದಲ್ಲಿ ಕಂಡು ಬಂತು.

ಮಾಂಗಲ್ಯ ಧಾರಣೆ, ಗಂಡನ ಕೈ ಹಿಡಿದು ಅವನ ಹಿಂದೆ ನಡೆಯುವುದು ಸೇರಿದಂತೆ ಲಿಂಗ ತಾರತಮ್ಯ ಇರುವ ಆಚರಣೆಗಳನ್ನು ಈ ವಿವಾಹ ಸಂಪೂರ್ಣವಾಗಿ ಬದಿಗಿರಿಸಿತು. ಪ್ರಕೃತಿಯ ಸಾಕ್ಷಿಯ ಮುಂದೆ ಮದುವೆಯಾಗುವ ಮೂಲಕ ವಿಶಿಷ್ಟ ಸಂಪ್ರದಾಯಕ್ಕೊಂದು ನಾಂದಿ ಹಾಡಿತು.‌

ಎಲ್‌ಎಲ್‌ಎಂ ವ್ಯಾಸಂಗ ಮಾಡಲು ಅನು ಅವರು ನೆದರ್‌ಲ್ಯಾಂಡ್‌ಗೆ ಹೋಗಿದ್ದಾಗ ರೆನೆ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರ ಪರಿಚಯ ಸ್ನೇಹವಾಗಿ ಶುರುವಾಗಿ ಪ್ರೀತಿಯಾಗಿ ಮಾರ್ಪಟ್ಟಿದೆ. ಮಾರ್ಟಗೇಜ್ ಬ್ಯಾಂಕಿಂಗ್ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ರೆನೆ ಹಾಗೂ ಅನು ದಾಂಪತ್ಯಕ್ಕೆ ಕಾಲಿರಿಸಲು ಆಗಲೇ ನಿರ್ಧರಿಸಿದ್ದರು. ನಂತರ, ರೆನೆ ಅವರಿಗೆ ಕನ್ನಡ ಕಲಿಸಿದ ಅನು ಅವರನ್ನು ವಿಧಿವತ್ತಾಗಿ ಮದುವೆಯಾಗಲು ಇಲ್ಲಿಗೆ ಕರೆತಂದರು. ಬಳಿಕ ಚರ್ಚಿಸಿ ಲಿಂಗ ತಾರತಮ್ಯ ಇಲ್ಲದ ಭಾರತೀಯ ಆಚರಣೆಗಳುಳ್ಳ ಪದ್ಧತಿಯಲ್ಲಿ ಮದುವೆ ನೆರವೇರಿಸಲಾಯಿತು ಎಂದು ಅನು ಅವರ ತಾಯಿ ಸುಮನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)