ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದಿಂದ ಸಿಗದಿದ್ದು ಮಾರ್ವಾಡಿಗಳಿಂದ ಸಿಕ್ಕಿತೇ?’

ಮೀಸಲಾತಿ ಕುರಿತಂತೆ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್
Last Updated 24 ಆಗಸ್ಟ್ 2019, 15:46 IST
ಅಕ್ಷರ ಗಾತ್ರ

ಮೈಸೂರು: ‘ಸಾರ್ವಜನಿಕ ವಲಯದಲ್ಲಿ ದೊರಕದ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯು, ಮಾರ್ವಾಡಿಗಳಿಂದ ದೊರಕುತ್ತದೆ ಎಂಬುದು ಭ್ರಮೆ’ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಶನಿವಾರ ನಡೆದ ‘ನೂರು ವರ್ಷಗಳ ಮೀಸಲಾತಿಯ ನಡಿಗೆ... ಒಂದು ಪರಿವೀಕ್ಷಣೆ’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಿಎಸ್‌ಎನ್‌ಎಲ್‌, ಏರ್ ಇಂಡಿಯಾ ಸದ್ಯದಲ್ಲೇ ಮಾರಾಟವಾಗಲಿವೆ. ನವರತ್ನಗಳಲ್ಲಿ ಒಂದಾದ ಒಎನ್‌ಜಿಸಿ ಖಾಸಗೀಕರಣಗೊಳ್ಳಲಿದೆ. ಸಾರ್ವಜನಿಕ ವಲಯದ ಈ ಉದ್ಯಮಗಳ ಉಳಿವಿಗೆ ಹೋರಾಟ ರೂಪಿಸುವ ಬದಲು, ಎರಡು ದಿನ ನಡೆದ ವಿಚಾರ ಸಂಕಿರಣದಲ್ಲಿ ಖಾಸಗಿ ಕ್ಷೇತ್ರದಲ್ಲಿನ ಮೀಸಲಾತಿ ವಿಚಾರವೇ ಹೆಚ್ಚೆಚ್ಚು ಪ್ರಸ್ತಾಪವಾಗಿದೆ. ಅಂಬಾನಿ, ಅದಾನಿ ಬಳಿ ನೀವು ಮೀಸಲಾತಿ ಪಡೆಯುತ್ತೀರಾ’ ಎಂದು ರವಿವರ್ಮಕುಮಾರ್ ಖಾರವಾಗಿ ಪ್ರಶ್ನಿಸಿದರು.

‘ಮಾಹಿತಿ ಮುಚ್ಚಿಡುವುದು ದೇಶದಲ್ಲಿ ಹೆಚ್ಚಿದೆ. ಇದೀಗ ಜೈಲು ಪಾಲಾಗಿರುವ ಕಾಂಗ್ರೆಸ್ ಮುಖಂಡ ಚಿದಂಬರಂ ಅಧಿಕಾರದಲ್ಲಿದ್ದಾಗ, ಜನಗಣತಿಯಲ್ಲಿ ಜಾತಿ ಗಣತಿ ನಡೆಸುವುದು ಬೇಡ ಎಂದು ಹಟ ಹಿಡಿದಿದ್ದರು. 2011–13ರವರೆಗೆ, ಆಗಿನ ಕೇಂದ್ರ ಸರ್ಕಾರ ನಡೆಸಿದ ಶೈಕ್ಷಣಿಕ–ಸಾಮಾಜಿಕ–ಆರ್ಥಿಕ ಸ್ಥಿತಿಗತಿಯ ಸಮೀಕ್ಷೆಯನ್ನು ಬ್ರಾಹ್ಮಣ ಸಚಿವ ಜೈರಾಂ ರಮೇಶ್‌ ಮುಚ್ಚಿಟ್ಟರು.

₹ 250 ಕೋಟಿ ವ್ಯಯಿಸಿ, ನಾಲ್ಕೂವರೆ ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜು ಆಯೋಗದ ಮೂಲಕ ನಡೆಸಿದ ಜಾತಿ ಜನಗಣತಿ ಸಹ ರಾಜ್ಯದಲ್ಲಿ ಇದೂವರೆಗೂ ಬಹಿರಂಗಗೊಂಡಿಲ್ಲ. ಸದಾಶಿವ ಆಯೋಗದ ವರದಿಯನ್ನೂ ಮುಚ್ಚಿಡಲಾಗಿದೆ. ದಲಿತರು, ಹಿಂದುಳಿದವರನ್ನು ವಂಚಿಸಲೆಂದೇ ಈ ವರದಿಗಳನ್ನು ಮುಚ್ಚಿಡಲಾಗಿದೆ’ ಎಂದು ದೂರಿದರು.

ಮೊದಲ ಪರಿಕಲ್ಪನೆ: ‘ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೊಳೆತಿದ್ದು, ಅನುಷ್ಠಾನಗೊಂಡಿದ್ದು ಮೈಸೂರು ಸಂಸ್ಥಾನದಲ್ಲೇ ಮೊದಲು’ ಎಂದು ರವಿವರ್ಮಕುಮಾರ್ ಹೇಳಿದರು.

‘ಆಡಳಿತದಲ್ಲಿ ಬ್ರಾಹ್ಮಣೇತರರು ಇರಬೇಕು ಎಂಬ ಆಶಯದಿಂದ ಮೈಸೂರಿನ ಮಹಾರಾಜರು 1874ರಲ್ಲೇ ಮೀಸಲಾತಿ ಜಾರಿಗೊಳಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ದೃಢ ಸಂಕಲ್ಪದಿಂದ ಮಿಲ್ಲರ್ ಆಯೋಗ ನೇಮಿಸಿ, ಸಮಿತಿ ನೀಡಿದ ವರದಿಯನ್ನು ತೀವ್ರ ಪ್ರತಿರೋಧದ ನಡುವೆಯೂ ತಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿದರು.

ಭಾರತದ ಸಂವಿಧಾನ ರಚನೆಯ ಸಂದರ್ಭ ಇದು ಪರಿಣಾಮಕಾರಿ ಅಂಶವಾಗಿ ಸಾಹುಕಾರ್ ಟಿ.ಚೆನ್ನಯ್ಯ ಅವರಿಂದ ಬಿಂಬಿತಗೊಂಡು, ಅಂಬೇಡ್ಕರ್ ಮೂಲಕ ಸಂವಿಧಾನದಲ್ಲೇ ಅಡಕಗೊಂಡಿತು’ ಎಂದು ತಿಳಿಸಿದರು.

ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಕಲಾ ನಿಕಾಯದ ಡೀನ್ ಪ್ರೊ.ಎಂ.ಮಹಾದೇವ, ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ, ಪ್ರಾಧ್ಯಾಪಕ ಜೆ.ಸೋಮಶೇಖರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT