ಮಂಗಳವಾರ, ಅಕ್ಟೋಬರ್ 27, 2020
22 °C
ಪಿರಿಯಾಪಟ್ಟಣ ಪುರಸಭೆ: ಅಧಿಕಾರಕ್ಕಾಗಿ ಚುರುಕುಗೊಂಡ ಬಲ ರಾಜಕೀಯ

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಿರಿಯಾಪಟ್ಟಣ: ಮೀಸಲಾತಿಯ ವಿವಾದ ಹೈಕೋರ್ಟ್ ಮೆಟ್ಟಿಲೇರಿ ದ್ದರಿಂದ 25 ತಿಂಗಳಿನಿಂದ ನನೆಗುದಿಗೆ ಬಿದ್ದಿದ್ದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರವು ಗುರುವಾರ ಹೊಸದಾಗಿ ಮೀಸಲಾತಿ ಪ್ರಕಟಗೊಳಿಸಿದ್ದು ಅಧ್ಯಕ್ಷ - ಉಪಾಧ್ಯಕ್ಷರ ಆಕಾಂಕ್ಷಿಗಳು ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಇಲ್ಲಿಯ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಪ್ರಥಮ ಬಾರಿಗೆ ಪುರಸಭಾ ಚುನಾವಣೆ ನಡೆದು 2 ವರ್ಷ ಕಳೆದರೂ ಅಧಿಕಾರ ಭಾಗ್ಯ ಸಿಕ್ಕಿರಲಿಲ್ಲ. ಈಗ ಅಧ್ಯಕ್ಷ ಸ್ಥಾನ ಬಿಸಿಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ)ಗೆ ನಿಗದಿಯಾಗಿದೆ.

ಒಟ್ಟು 23 ಮಂದಿ ಸದಸ್ಯರನ್ನು ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್ ಪಕ್ಷದಿಂದ 14 ಸದಸ್ಯರು ಆಯ್ಕೆಯಾಗುವ ಮೂಲಕ ಸ್ಪಷ್ಟ ಬಹುಮತ ದೊರೆತಿದ್ದು, ಒಬ್ಬರು ಪಕ್ಷೇತರ ಮತ್ತು 8 ಮಂದಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ಸದಸ್ಯ ಆಕಾಂಕ್ಷಿಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೇರಲೇಬೇಕೆಂಬ ಪೈಪೋಟಿ ತೆರೆಮರೆಯಲ್ಲಿ ಶುರುವಾಗಿದೆ.

ಪರಿಷ್ಕೃತ ಮೀಸಲಾತಿಯ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನವು ಬಿಸಿಎ ವರ್ಗಕ್ಕೆ ಮೀಸಲಾಗಿದ್ದು ಪುರುಷ ಮತ್ತು ಮಹಿಳಾ ಸದಸ್ಯರಿಗೆ ಅವಕಾಶವಿರುವುದರಿಂದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಸತತ ಮೂರು ಬಾರಿ ಆಯ್ಕೆಯಾಗಿರುವ ವಾರ್ಡ್ ನಂ. 6 ರ ಮಂಜುನಾಥ್ ಸಿಂಗ್ ಹೆಸರು ಮುಂಚೂಣಿಯಲ್ಲಿದ್ದರೆ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ವಾರ್ಡ್ ನಂ. 13 ರ ಮಹೇಶ್ ಮತ್ತು ವಾರ್ಡ್ ನಂ. 01 ರ ಪ್ರಕಾಶ್ ಸಿಂಗ್ ಹೆಸರುಗಳು ಸಹ ಕೇಳಿ ಬರುತ್ತಿವೆ.

ಪುರುಷ ಆಕಾಂಕ್ಷಿಗಳಿಗೆ ಪೈಪೋಟಿ ನೀಡಲೆಂದೇ ಮಹಿಳೆಯರು ಸಹ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದು ಎರಡನೇ ಬಾರಿಗೆ ಆಯ್ಕೆಯಾಗಿರುವ ನಾಗರತ್ನಾ, ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಶ್ವೇತಾ, ರೂಹಿಲ್ಲಾಖಾನಂ, ನೂರ್ ಜಹಾನ್, ಆಶಾ, ಪುಷ್ಪಾ ಸೇರಿದಂತೆ ಮಹಿಳಾ ಸದಸ್ಯರ ಪತಿಯರು ತಮ್ಮ ಪತ್ನಿಯರಿಗೆ ಅಧ್ಯಕ್ಷೆ ಪಟ್ಟ ಕಟ್ಟಲು ಪಕ್ಷದ ತಮ್ಮ ಬೆಂಬಲಿಗರ ಮೂಲಕ ಶಾಸಕರಿಗೆ ಒತ್ತಡ ಹೇರಲು ಆರಂಭಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೂ ಹೆಚ್ಚಿದ ಪೈಪೋಟಿ: ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಜೆಡಿಎಸ್ ಪಕ್ಷದಿಂದ 8 ಮಹಿಳೆಯರು ಈ ಬಾರಿ ಜಯಗಳಿಸಿದ್ದು ವಾರ್ಡ್ 02 ರ ಸುವರ್ಣಾ, 4 ರ ರೂಹಿಲ್ಲಾಖಾನಂ, 8ರ ಪಿ.ಕೆ.ಆಶಾ, 9 ರ ಪುಷ್ಪಲತಾ, 17 ರ ನಾಗರತ್ನಾ, 18 ರ ಭಾರತಿ, 20 ರ ಶ್ವೇತಾ, 23 ರ ನೂರ್‌ಜಹಾನ್ ಅವರು ರೇಸಿನಲ್ಲಿದ್ದಾರೆ.

ಅಧ್ಯಕ್ಷ ಸ್ಥಾನ ಕೈತಪ್ಪಿದರೆ ಉಪಾಧ್ಯಕ್ಷ ಹುದ್ದೆಗೂ ಸೈ ಎನ್ನುತ್ತಾ ಪ್ರಯತ್ನ ಮುಂದುವರಿಸಲು ನಾಗರತ್ನಾ ಸಿದ್ಧವಾಗಿದ್ದಾರೆ.

ಶಾಸಕರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಹೇಳುವ ಅಭ್ಯರ್ಥಿಗಳು ಪರೋಕ್ಷವಾಗಿ ಅಧಿಕಾರ ಪಡೆಯಲು ತಮ್ಮ ಬೆಂಬಲಿಗರ ಮೂಲಕ ಸಾಕಷ್ಟು ಕಸರತ್ತು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಮುಂದಿದೆ ಸವಾಲು: ಯಾರೇ ಅಧಿಕಾರಕ್ಕೆ ಬಂದರೂ ತಮ್ಮ ಆಡಳಿತ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಉತ್ತಮ ಕೆಲಸಗಳನ್ನು ಮಾಡುವ ಅನಿವಾರ್ಯತೆ ಎದುರಾಗಿದೆ. ಒಳಚರಂಡಿ ಕಾಮಗಾರಿಯಿಂದಾಗಿ ಈಗಾಗಲೇ ಪಟ್ಟಣದ ಎಲ್ಲ ರಸ್ತೆಗಳು ಹದಗೆಟ್ಟಿದ್ದು ಅವುಗಳನ್ನು ಸುಸ್ಥಿತಿಗೆ ತರುವ ಜವಾಬ್ದಾರಿ ಇದೆ.

ಪುರಸಭೆಯ ಪ್ರಥಮ ಅಧ್ಯಕ್ಷ– ಉಪಾಧ್ಯಕ್ಷರ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ನಾಗರಿಕರಲ್ಲಿ ಮೂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.