ಮೈಸೂರಿಗೆ ಇಂದು ಮಾಯಾವತಿ; ರಾಜ್ಯದಲ್ಲಿ ನಡೆಯುವ ಬಿಎಸ್‌ಪಿಯ ಏಕೈಕ ಸಮಾವೇಶ

ಶುಕ್ರವಾರ, ಏಪ್ರಿಲ್ 19, 2019
27 °C

ಮೈಸೂರಿಗೆ ಇಂದು ಮಾಯಾವತಿ; ರಾಜ್ಯದಲ್ಲಿ ನಡೆಯುವ ಬಿಎಸ್‌ಪಿಯ ಏಕೈಕ ಸಮಾವೇಶ

Published:
Updated:

ಮೈಸೂರು: ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ವರಿಷ್ಠರಾದ ಮಾಯಾವತಿ ಏಪ್ರಿಲ್ 10ರಂದು ಮಧ್ಯಾಹ್ನ 12.30ಕ್ಕೆ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ನಡೆಸುವರು.

ಪ್ರಸಕ್ತ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಡೆಯುವ ಬಿಎಸ್‌ಪಿಯ ಏಕೈಕ ಸಮಾವೇಶ ಇದೇ ಆಗಿರುವುದರಿಂದ ಈ ಸಮಾವೇಶ ಹೆಚ್ಚಿನ ಮಹತ್ವ ಪಡೆದಿದೆ.

ಈಗಾಗಲೇ ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿರುವ ಮಾಯಾವತಿ ಸಮಾವೇಶದಲ್ಲಿ ಭಾಗವಹಿಸಿದ ನಂತರ ಸಂಜೆ 4.30ಕ್ಕೆ ಇಲ್ಲಿಂದ ವಿಮಾನದ ಮೂಲಕ ಚೆನ್ನೈಗೆ ಹೊರಡಲಿದ್ದಾರೆ. ‌

ಈ ಕಾರ್ಯಕ್ರಮದಲ್ಲಿ ಸುಮಾರು 15ರಿಂದ 20 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.

ಮಂಗಳವಾರ ಬಿಜೆಪಿ ಸಮಾವೇಶ ನಡೆದಿರುವ ವೇದಿಕೆಯಲ್ಲಿಯೇ ಬಿಎಸ್‌ಪಿ ಸಮಾವೇಶವೂ ನಡೆಯುತ್ತಿರುವುದು ವಿಶೇಷ ಎನಿಸಿದೆ. ಇಡೀ ಮೈದಾನವನ್ನು ಸ್ವಚ್ಛಗೊಳಿಸಲು ಸಮಯ ಬೇಕಾಗಿರುವುದರಿಂದ ಹಾಗೂ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸಲಿರುವುದರಿಂದ 11ಕ್ಕೆ ನಿಗದಿಯಾಗಿದ್ದ ಸಮಾವೇಶ ಮಧ್ಯಾಹ್ನದ ಹೊತ್ತಿಗೆ ಆರಂಭವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೈಲಿನಲ್ಲಿಯೇ ಕಾರ್ಯಕರ್ತರನ್ನು ಕರೆದುಕೊಂಡು ಬರಲು ಪಕ್ಷದ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಉಳಿದಂತೆ, ಚಾಮರಾಜನಗರದಿಂದ ಸುಮಾರು 45 ಬಸ್‌ಗಳು ಹಾಗೂ ರೈಲುಗಳಲ್ಲಿ ಕಾರ್ಯಕರ್ತರು ಬರಲಿದ್ದಾರೆ.

ರಾಜ್ಯದ ಎಲ್ಲ 28 ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳು ವೇದಿಕೆ ಮೇಲೆ ಆಸೀನರಾಗಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇವರೊಂದಿಗೆ ಪಕ್ಷದ ವರಿಷ್ಠರಾದ ಮಾಯಾವತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರಾದ ಸತೀಶ್‌ಚಂದ್ರ ಮಿಶ್ರಾ, ಮತ್ತೊಬ್ಬ ರಾಜ್ಯಸಭಾ ಸದಸ್ಯ ಡಾ.ಅಶೋಕಸಿದ್ಧಾರ್ಥ, ಪಕ್ಷದ ರಾಜ್ಯ ಉಸ್ತುವಾರಿ ಎಂ.ಎಲ್.ತೋಮರ್, ಶಾಸಕ ಎನ್.ಮಹೇಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ.

ಕೇಸರಿಯಿಂದ ನೀಲಿ ಬಣ್ಣಕ್ಕೆ ವೇದಿಕೆ!

ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಇಡೀ ವೇದಿಕೆ ಹಾಗೂ ಮೈದಾನದಲ್ಲಿ ಕೇಸರಿ ಬಣ್ಣ ರಾರಾಜಿಸಿತ್ತು. ಇದೀಗ ಬುಧವಾರ ನಡೆಯಲಿರುವ ಸಮಾವೇಶದಲ್ಲಿ ಇದು ನೀಲಿ ಬಣ್ಣಕ್ಕೆ ತಿರುಗಲಿದೆ. ರಾತ್ರಿಯಿಡಿ ವೇದಿಕೆಯ ವಿನ್ಯಾಸ ಬದಲಿಸುವ ಕಾರ್ಯ ನಡೆಯಲಿದೆ.

ಒಂದೇ ಒಂದು ಕೇಸರಿ ಧ್ವಜ ಕಾಣದ ಹಾಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ, ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಕುಡಿದು ಎಸೆದ ನೀರಿನ ಬಾಟಲಿಗಳು, ಪ್ಲಾಸ್ಟಿಕ್‌ ಕವರ್‌ಗಳನ್ನು ಸ್ವಚ್ಛಗೊಳಿಸಬೇಕಿದೆ. ನಂತರವಷ್ಟೇ ಸಮಾವೇಶ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !