ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 133 ಕೋಟಿ ಆಸ್ತಿ ತೆರಿಗೆ ಸಂಗ್ರಹ

2018–19ರ ಸಾಲಿನಲ್ಲಿ ಪಾಲಿಕೆಯಿಂದ ನಿರೀಕ್ಷೆಗೂ ಮೀರಿದ ಗುರಿ ಸಾಧನೆ
Last Updated 10 ಏಪ್ರಿಲ್ 2019, 20:02 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆ 2018–19ರ ಸಾಲಿನಲ್ಲಿ ₹ 133 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದ್ದು, ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ.

2018ರ ಏಪ್ರಿಲ್‌ನಿಂದ 2019ರ ಮಾರ್ಚ್‌ವರೆಗೆ ಆಸ್ತಿ ತೆರಿಗೆ ರೂಪದಲ್ಲಿ ₹ 124 ಕೋಟಿ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಇಟ್ಟುಕೊಂಡಿತ್ತು. ಸುಮಾರು ₹ 10 ಕೋಟಿಯಷ್ಟು ಅಧಿಕ ತೆರಿಗೆ ಸಂಗ್ರಹವಾಗಿದೆ. ಪಾಲಿಕೆ 2017–18ರ ಸಾಲಿನಲ್ಲಿ ₹ 102 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿತ್ತು.

2019ರ ಮಾರ್ಚ್‌ 31ರ ವರೆಗೆ ಆಸ್ತಿ ತೆರಿಗೆ, ಹಿಂದಿನ ಬಾಕಿ ಮತ್ತು ಇತರ ಮೂಲಗಳಿಂದ ಒಟ್ಟು ₹ 210 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿತ್ತು. ಇದರಲ್ಲಿ ಆಸ್ತಿ ತೆರಿಗೆ ರೂಪದಲ್ಲಿ ₹ 133 ಕೋಟಿ ಸಂಗ್ರಹಿಸಲಾಗಿದೆ ಎಂದು ಪಾಲಿಕೆ ಉಪ ಆಯುಕ್ತ (ಕಂದಾಯ) ಟಿ.ಬಿ.ಕುಮಾರ ನಾಯಕ್‌ ತಿಳಿಸಿದರು.

ಆಸ್ತಿ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪುವ ನಿಟ್ಟಿನಲ್ಲಿ ಪಾಲಿಕೆ ತೆರಿಗೆ ಸಂಗ್ರಹ ಅಭಿಯಾನ ನಡೆಸಿತ್ತು. ಎಲ್ಲ ಒಂಬತ್ತು ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ತೆರಿಗೆ ವಸೂಲಾತಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ತೆರಿಗೆ ಪಾವತಿಸದ ಆಸ್ತಿಗಳನ್ನು ಜಪ್ತಿ ಮಾಡಿ ತೆರಿಗೆ ಬಾಕಿ ವಸೂಲಿ ಮಾಡಿಕೊಳ್ಳಲಾಗುವುದು ಎಂದು ಪಾಲಿಕೆ ಎಚ್ಚರಿಸಿತ್ತು. ಪ್ರತಿ ವಲಯದಲ್ಲಿ ತೆರಿಗೆ ಪಾವತಿಸದ ಪ್ರಮುಖ 100 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿ, ಪಾಲಿಕೆ ಅಧಿಕಾರಿಗಳು ಅವರ ಮನೆ ಹಾಗೂ ಕಚೇರಿಗಳಿಗೆ ತೆರಳಿ ತೆರಿಗೆ ವಸೂಲಿಗೆ ಕ್ರಮ ಕೈಗೊಂಡಿದ್ದರು.

ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ ಮನೆಗಳು, 30 ಸಾವಿರ ವಾಣಿಜ್ಯ ಮಳಿಗೆಗಳು, ಕಟ್ಟಡಗಳು ಮತ್ತು 200ರಷ್ಟು ಅಪಾರ್ಟ್‌ಮೆಂಟ್‌ಗಳಿವೆ. ಆದರೆ ಎಲ್ಲ ಆಸ್ತಿಗಳಿಂದ ತೆರಿಗೆ ಸಂಗ್ರಹಿಸಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ.

ಪಾಲಿಕೆಗೆ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಬೇಕಾದ ಆದಾಯದ ಪ್ರಮುಖ ಮೂಲ ಆಸ್ತಿ ತೆರಿಗೆ. ತೆರಿಗೆ ಸಂಗ್ರಹಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯರು ಪ್ರತಿ ಕೌನ್ಸಿಲ್‌ ಸಭೆಗಳಲ್ಲಿ ಒತ್ತಾಯಿಸುತ್ತಿದ್ದರು.

157 ಕೋಟಿ ನಿರೀಕ್ಷೆ: 2019–20ರ ಬಜೆಟ್‌ನಲ್ಲಿ ಪಾಲಿಕೆಯು ಈ ಸಾಲಿನಲ್ಲಿ ₹ 157 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಇಟ್ಟುಕೊಂಡಿದೆ. ಕಳೆದ ವರ್ಷದಂತೆ ಈ ಬಾರಿಯೂ ನಿಗದಿತ ಗುರಿ ಸಾಧಿಸಲು ವಿವಿಧ ಕ್ರಮಗಳು, ಅಭಿಯಾನ ಕೈಗೊಳ್ಳಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT