ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇದಿನಿ ಮಠದಲ್ಲಿ ಪಟ್ಟಾಧಿಕಾರ ಮಹೋತ್ಸವ

ಸಾವಿರಾರು ಮಂದಿ ಭಾಗಿ, ನಾಡಿನ ಹೆಸರಾಂತ ಸ್ವಾಮೀಜಿಗಳ ಹಾರೈಕೆ
Last Updated 27 ಮೇ 2019, 19:29 IST
ಅಕ್ಷರ ಗಾತ್ರ

ತಲಕಾಡು: ಇಲ್ಲಿನ ಮೇದಿನಿ ಮಠದಲ್ಲಿ ಸೋಮವಾರ ಸಂಭ್ರಮವೋ ಸಂಭ್ರಮ. ಮಠದ ಶಿವಲಿಂಗಸ್ವಾಮೀಜಿ ಅವರ ನೇತೃತ್ವದಲ್ಲಿ ನೂತನ ವಟು ಸಂಜಯಕುಮಾರ್ ಅವರಿಗೆ ಪಟ್ಟಾಧಿಕಾರ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಇದಕ್ಕೆ ನಾಡಿನ ಶರಣ ಪರಂಪರೆಯ ಹಲವು ಪ್ರಮುಖ ಮಠಗಳ ಸ್ವಾಮೀಜಿಗಳು ಸಾಕ್ಷಿಯಾದರು.

ಶಿವಶಂಕರ್ ಮತ್ತು ಉಮಾ ದಂಪತಿಯ ಪುತ್ರ ಸಂಜಯಕುಮಾರ್ ಅವರನ್ನು ಮೇದಿನಿ ಮಠದ ಶಿವಲಿಂಗಸ್ವಾಮೀಜಿ ಕಿರಿಯಶ್ರೀಗಳನ್ನಾಗಿ ವಿಧ್ಯುಕ್ತವಾಗಿ ಸ್ವೀಕರಿಸಿದರು. ಬಿದರಚೌಕಿಮಠದ ಗುರುಸಿದ್ಧಸ್ವಾಮೀಜಿ, ವೀರಪ್ಪ ಒಡೆಯರ ಹುಂಡಿಯ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹಣಕೊಳ ಶ್ರೀಮಠದ ಚಿದ್ಘನ ಶಿವಾಚಾರ್ಯಸ್ವಾಮೀಜಿ ಹಾಗೂ ಹರಳೂರಿನ ಶಿವಕುಮಾರಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

ನಂಜನಗೂಡಿನ ಕಂಬಳೇಶ್ವರ ಕ್ಷೇತ್ರದ ಮಲ್ಲನಮೂಲೆ ಮಠದ ಚನ್ನಬಸವಸ್ವಾಮೀಜಿ ನಸುಕಿನಲ್ಲಿಯೇ ಷಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ‘ಪಟ್ಟಾಧಿಕಾರ ಮಹೋತ್ಸವ ಮತ್ತು ಸಿದ್ಧಗಂಗೆ ಮಠದ ಶಿವಕುಮಾರಸ್ವಾಮೀಜಿ ಅವರ ಪುಣ್ಯ ಸಂಸ್ಮರಣೋತ್ಸವ ಹಾಗೂ ಧಾರ್ಮಿಕ ಸಭೆ’ಗೆ ಚಾಲನೆ ನೀಡಿದರು.

ಮುಡುಕನಪುರದ ಹಲವಾರ ಮಠದ ಷಡಕ್ಷರದೇಶಿಕೇಂದ್ರ ಸ್ವಾಮೀಜಿ, ಬಿ.ಜಿ.ಪುರದ ಹೊರಮಠದ ಚಂದ್ರಶೇಖರಸ್ವಾಮೀಜಿ ಹಾಗೂ ಕುಂದೂರು ಬೆಟ್ಟದ ಮಠದ ನಂಜುಂಡಸ್ವಾಮೀಜಿ ನೇತೃತ್ವದಲ್ಲಿ ನೂತನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವೊಪೇತವಾಗಿ ನಡೆಯಿತು.

ಮಠದ ಪರಂಪರೆ ಉಳಿಸುವೆ– ಕಿರಿಯ ಸ್ವಾಮೀಜಿ:ಪಟ್ಟಾಧಿಕಾರ ಸ್ವೀಕರಿಸಿ ಮಾತನಾಡಿದ ಕಿರಿಯ ಸ್ವಾಮೀಜಿ ಸಂಜಯಕುಮಾರ್‌, ‘ನಿಮ್ಮಗಳ ಮುಡಿಗೆ ಹೂ ತಾರೆನಲ್ಲದೇ, ಹುಲ್ಲು ತಾರೆನು’ ಎಂದು ವಚನವಿತ್ತರು.

‘ಅತಿ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂಬುದರ ಅರಿವು ನನಗಿದೆ. ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಭರವಸೆಗಳಿಗೆ ನಾನು ಮೋಸ ಮಾಡುವುದಿಲ್ಲ’ ಎಂದು ವಾಗ್ದಾನ ನೀಡಿದರು.

ಹಿರಿಯ ಸ್ವಾಮೀಜಿ ಅವರಿಗೆ ಹಣ ಸಂಪಾದನೆಯೊಂದೇ ದೊಡ್ಡದಾಗಿದ್ದರೆ, ಇಂದು ಇಲ್ಲಿ ಕೇವಲ ಕುರ್ಚಿಗಳಷ್ಟೇ ಇರುತ್ತಿದ್ದವು. ಅವರ ಸೇವಾ ಕೈಂಕರ್ಯದಿಂದಾಗಿಯೇ ಇಂದು ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದಾರೆ ಎಂದು ಹೇಳಿದರು.

ಬಸವೇಶ್ವರ ಕಲಾಸಂಘದ ಕಲಾವಿದರು ‘ಪ್ರಭುಲಿಂಗಲೀಲೆ’ ಐತಿಹಾಸಿಕ ನಾಟಕ ಪ್ರದರ್ಶಿಸಿದರು. ಪಿ.ರಘು ಕಿನಕಹಳ್ಳಿ, ಮಹದೇವಸ್ವಾಮಿ ಅಲಳ್ಳಿ, ಮಲ್ಲಿಕಾರ್ಜುನಸ್ವಾಮಿ ಬಾನಹಳ್ಳಿ ಮತ್ತು ತಂಡದವರಿಂದ ‘ಶಿವಭಜನೆ’ ನೆರವೇರಿತು.

ವಿವಿಧ ಮಠಗಳ ಮಠಾಧೀಶರು, ಮುಖಂಡರು ಸಮಾರಂಭದಲ್ಲಿ ಭಾಗಿಯಾದರು. 2 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT