ಸೋಮವಾರ, ಸೆಪ್ಟೆಂಬರ್ 27, 2021
21 °C

ಸಂದೇಶ್‌ ನಾಗರಾಜು– ಮರಿತಿಬ್ಬೇಗೌಡ ನಡುವೆ ವಾಗ್ವಾದ: ಮುಡಾ ಸಭೆ ಅರ್ಧಕ್ಕೆ ಮೊಟಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಗೃಹ ನಿರ್ಮಾಣ ಸಹಕಾರ ಸಂಘಗಳ ಬಡಾವಣೆಗಳಿಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಸದಸ್ಯರ ನಡುವೆ ವಾಗ್ವಾದ ನಡೆದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸಭೆ ಅರ್ಧಕ್ಕೆ ಮೊಟಕುಗೊಂಡಿತು.

ನೂತನ ಅಧ್ಯಕ್ಷ ಎಚ್‌.ಎನ್‌.ವಿಜಯ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮೊದಲ ಸಭೆ ಒಂದು ಹಂತದವರೆಗೆ ಸುಸೂತ್ರವಾಗಿ ನಡೆಯಿತು. ಆದರೆ, ಗೃಹ ನಿರ್ಮಾಣ ಸಂಘಗಳ ಬಡಾವಣೆಗಳ ವಿಷಯ ಬಂದೊಡನೆ ಸದಸ್ಯರ ನಡುವೆ ಕಾವೇರಿದ ಚರ್ಚೆ, ವಾಗ್ವಾದ ಶುರುವಾಯಿತು.

ಸರ್ಕಾರ 2010ರಲ್ಲಿ ಸರ್ಕಾರ ಸುಮಾರು 1,250 ಎಕರೆ ಡಿನೋಟಿಫೈ ಮಾಡಿತ್ತು. ಇದರಲ್ಲಿ ಏಳು ಗೃಹ ನಿರ್ಮಾಣ ಸಂಘಗಳಿಗೆ ಸೇರಿದ 140 ಎಕರೆ ಪ್ರದೇಶವೂ ಒಳಗೊಂಡಿದೆ.

ಹಲವು ವರ್ಷಗಳಿಂದ ಈ ಪ್ರಕರಣ ಹಾಗೆಯೇ ಉಳಿದುಕೊಂಡಿದೆ. ಈ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದರು.

ಆದರೆ, ವಿಧಾನಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಒಳಗೊಂಡಂತೆ ಕೆಲವು ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ತರಾತುರಿಯಲ್ಲಿ ಅನುಮೋದನೆ ನೀಡುವುದು ಬೇಡ. 15–20 ದಿನಗಳ ಕಾಲಾವಕಾಶ ತೆಗೆದುಕೊಂಡು ಕೂಲಂಕುಷ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳೋಣ ಎಂದು ಸಂದೇಶ್‌ ನಾಗರಾಜ್‌ ಹೇಳಿದರು. ಇತರ ಸದಸ್ಯರು ಈ ಅಭಿಪ್ರಾಯಕ್ಕೆ ದನಿಗೂಡಿಸಿದರು.

ಆದರೆ ಮರಿತಿಬ್ಬೇಗೌಡ ಅವರು ಇದೇ ಸಭೆಯಲ್ಲಿ ಅಂತಿಮ ನಿರ್ಧಾರ ಆಗಬೇಕು ಎಂದು ಪಟ್ಟುಹಿಡಿದರು. ಇದರಿಂದ ಸಂದೇಶ್‌ ನಾಗರಾಜು ಅವರು ಏರುದನಿಯಲ್ಲಿ ಪ್ರತ್ಯುತ್ತರ ಕೊಟ್ಟರು. ಆ ಬಳಿಕ ಕೆಲಹೊತ್ತು ಇಬ್ಬರ ನಡುವೆ ಮಾತಿನ ಸಮರ ನಡೆಯಿತು.

‘ವೈಯಕ್ತಿಕ ವಿಚಾರ ಎತ್ತಿಕೊಂಡು ಇಬ್ಬರೂ ಪರಸ್ಪರ ವಾಗ್ವಾದ ನಡೆಸಿದರು. ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ಇತರ ಸದಸ್ಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಆ ಬಳಿಕ ಸಭೆಯನ್ನು ಮೊಟಕುಗೊಳಿಸಿ ಮೇ 20ಕ್ಕೆ ಮುಂದೂಡಲಾಯಿತು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರೊಬ್ಬರು ತಿಳಿಸಿದರು.

‘ಸಭೆಯಲ್ಲಿ ಈ ರೀತಿಯ ಮಾತಿನ ಚಕಮಕಿ, ವಾಗ್ವಾದ ಸಹಜ. ಕೆಲವೊಂದು ವಿಚಾರಗಳಲ್ಲಿ ಒಬ್ಬರು ಹೇಳಿರುವುದು ಇನ್ನೊಬ್ಬರಿಗೆ ಆಗುವುದಿಲ್ಲ. ಆದ್ದರಿಂದ ಕಾವೇರಿದ ಚರ್ಚೆ ನಡೆಯಿತು. ಅದನ್ನು ಬಿಟ್ಟು ಹೆಚ್ಚಿನದ್ದೇನೂ ನಡೆದಿಲ್ಲ’ ಎಂದು ಸಂದೇಶ್‌ ನಾಗರಾಜು ಪ್ರತಿಕ್ರಿಯಿಸಿದ್ದಾರೆ.

ವಿವಿಧ ವಿಷಯಗಳ ಬಗ್ಗೆ ಚರ್ಚೆ: ಸಭೆಯ ಆರಂಭದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಖಾಲಿ ಉಳಿದಿರುವ ಸಿಎ ನಿವೇಶನೆಗಳ ಹಂಚಿಕೆ, ಹೊಸ ಬಡಾವಣೆಗಳ ನಿರ್ಮಾಣದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರಾದ ಎಸ್.ಎ.ರಾಮದಾಸ್, ಎಲ್ ನಾಗೇಂದ್ರ, ತನ್ವಿರ್ ಸೇಠ್, ಹರ್ಷವರ್ಧನ್ ವಿಧಾನ ಪರಿಷತ್ ಸದಸ್ಯರಾದ ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ಮುಡಾ ಆಯುಕ್ತ ಕಾಂತರಾಜು, ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಪಾಲಿಕೆ ಪ್ರತಿನಿಧಿ ಎಸ್‌ಬಿಎಂ ಮಂಜು ಹಾಗೂ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು