ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ಉದ್ಘಾಟನೆ

13 ಎಕರೆ ಪ್ರದೇಶದಲ್ಲಿ ನಿರ್ಮಾಣ, ಏ. ರಿಂದ ಹಾಲಿಗೆ ಪ್ರೋತ್ಸಾಹಧನ ₹ 6ಕ್ಕೆ ಏರಿಕೆ
Last Updated 2 ಮಾರ್ಚ್ 2019, 4:15 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಆಲನಹಳ್ಳಿಯಲ್ಲಿ 6 ಲಕ್ಷ ಲೀಟರ್ ಸಾಮರ್ಥ್ಯದ ನೂತನ ಮೆಗಾ ಡೇರಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಉದ್ಘಾಟಿಸಿದರು. ಬಜೆಟ್‌ನಲ್ಲಿ ಘೋಷಿಸಿದಂತೆ ಹಾಲಿಗೆ ಪ್ರೋತ್ಸಾಹಧನವನ್ನು ಏಪ್ರಿಲ್ 1ರಿಂದ ₹ 5ರಿಂದ ₹ 6ಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದರು.

ಒಟ್ಟು ₹ 183 ಕೋಟಿ ಯೋಜನೆಯಲ್ಲಿ ಮೊದಲ ಹಂತದಲ್ಲಿ ₹ 124 ಕೋಟಿ ವೆಚ್ಚದಲ್ಲಿ ಡೇರಿಯನ್ನು ನಿರ್ಮಿಸಲಾಗಿದೆ. ಇನ್ನು ₹ 50 ಕೋಟಿ ವೆಚ್ಚದಲ್ಲಿ ಹಾಲಿನ ಪುಡಿ ಉತ್ಪಾದನಾ ಕೇಂದ್ರ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ರೂಪಿಸಲಾಯಿತು. ಆದರೆ, ಹಣ ನೀಡಿರಲಿಲ್ಲ. ನಂತರ ಬಂದ ಸರ್ಕಾರಗಳು ಈ ಕಡೆ ಗಮನ ಕೊಡಲಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಎಂಎಫ್, ಎನ್‌ಡಿಆರ್‌ಎಫ್, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಹಲವೆಡೆಗಳಿಂದ ಹಣ ಸಂಗ್ರಹಿಸಿ ಡೇರಿ ನಿರ್ಮಿಸಲಾಯಿತು ಎಂದು ತಿಳಿಸಿದರು.

ಸಾಲ ಮನ್ನಾ ಯೋಜನೆಯಲ್ಲಿ 40 ಲಕ್ಷಕ್ಕೂ ಹೆಚ್ಚು ರೈತರು ಫಲಾನುಭವಿಗಳಿದ್ದಾರೆ. ಇವರಲ್ಲಿ 10.46 ಲಕ್ಷ ಮಂದಿ ರೈತರ ಸಾಲಮನ್ನಾ ಮಾಡಲಾಗಿದೆ. ₹ 45 ಸಾವಿರ ಕೋಟಿ ಹಣ ಬಿಡುಗಡೆ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಹಂತ ಹಂತವಾಗಿ ಅರ್ಹ ಎಲ್ಲ ಫಲಾನುಭವಿಗಳ ಸಾಲವನ್ನು ಮನ್ನಾ ಮಾಡಲಾಗುವುದು ಎಂದರು.

ನಂತರ, ಅವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ತಲಾ ಒಬ್ಬರಿಗೆ ಸಾಂಕೇತಿಕವಾಗಿ ಋಣಮುಕ್ತ ಪ್ರಮಾಣಪತ್ರ ವಿತರಿಸಿದರು. ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು.

ಸ್ವಾಗತ ಭಾಷಣ ಮಾಡುತ್ತಿದ್ದ ಜಿ.ಟಿ.ದೇವೇಗೌಡ ಅವರ ಹಿಂದೆ ನಿಂತ ಕುಮಾರಸ್ವಾಮಿ ಮಾತನಾಡಬಹುದಾ ಎಂದು ಕೇಳಿದರು. ಅದಕ್ಕೆ ದೇವೇಗೌಡ, ‘ಸ್ವಲ್ಪ ಹೊತ್ತು ಕುಳಿತಿರಿ. ನಂತರ ಮಾತನಾಡುವಿರಂತೆ’ ಎಂದರು. ಬಳಿಕ ತಮ್ಮ ಸ್ಥಳದಲ್ಲಿ ಕುಮಾರಸ್ವಾಮಿ ಹೋಗಿ ಕುಳಿತರು.

ಸಚಿವರಾದ ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ, ಸಂಸದ ಧ್ರುವನಾರಾಯಣ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್, ಶಾಸಕರಾದ ಸಿ.ಅನಿಲ್‌ಕುಮಾರ್, ಅಶ್ವಿನ್‌ಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಮೈಮುಲ್‌ ಅಧ್ಯಕ್ಷ ಕೆ.ಜಿ.ಮಹೇಶ್ ಅಳಗಂಜಿ ಇದ್ದರು.

ಗೊಂದಲ ಸೃಷ್ಟಿಸಿದ ಹೇಳಿಕೆಗಳು
ಮೈಸೂರು:
ಏ.1ರಿಂದ ಪ್ರತಿ ಲೀಟರ್ ಹಾಲಿಗೆ 50 ಪೈಸೆ ಸೇರಿಸಿ 6 ರೂಪಾಯಿ 50 ಪೈಸೆಯಷ್ಟು ಪ್ರೋತ್ಸಾಹಧನ ನೀಡಲಾಗುವುದು ಎಂದು ಸಚಿವ ಜಿ.ಟಿ.ದೇವೇಗೌಡ ಮೊದಲಿಗೆ ಪ್ರಕಟಿಸಿದರು.

ಆದರೆ, ನಂತರ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿ ಲೀಟರ್ ಹಾಲಿಗೆ ₹ 5‌ರಷ್ಟು ಇದ್ದ ಪ್ರೋತ್ಸಾಹಧನವನ್ನು ₹ 6ಕ್ಕೆ ಹಚ್ಚಿಸಲಾಗಿದೆ ಎಂದು ಹೇಳಿದರು.

ಇವರಿಬ್ಬರ ಈ ಹೇಳಿಕೆಗಳು ಜನರಲ್ಲಿ ಗೊಂದಲಗಳನ್ನು ಸೃಷ್ಟಿಸಿದವು. ಆದರೆ, ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಕುಮಾರಸ್ವಾಮಿ ಪ್ರೋತ್ಸಾಹಧನವನ್ನು ₹ 5ರಿಂದ ₹ 6ಕ್ಕೆ ಹೆಚ್ಚಿಸಿದ್ದರು.

ನಾಡಗೀತೆ ಅರ್ಧಕ್ಕೆ ಮೊಟಕು
ಕಾರ್ಯಕ್ರಮದಲ್ಲಿ ನಾಡಗೀತೆಯು ತಾಂತ್ರಿಕ ಕಾರಣಗಳಿಂದ ಅರ್ಧಕ್ಕೆ ಮೊಟಕುಗೊಂಡಿತು. ಎರಡೂವರೆ ಗಂಟೆಗಳಷ್ಟು ತಡವಾಗಿ ಆರಂಭವಾದ ಈ ಕಾರ್ಯಕ್ರಮದಲ್ಲಿ ತರಾತುರಿಯಲ್ಲಿ ಕುಮಾರಸ್ವಾಮಿ ಉದ್ಘಾಟನೆ ಮುಗಿಸಿ ಮುಂದಿನ ಕಾರ್ಯಕ್ರಮಕ್ಕೆ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT