ಬುಧವಾರ, ಸೆಪ್ಟೆಂಬರ್ 29, 2021
20 °C
ಮಳೆಗಾಲದಲ್ಲಿ ರಸ್ತೆ ಕೆಸರುಮಯ, ರೈತರಿಗೆ ಕೂರಲೂ ಸ್ಥಳವಿಲ್ಲ; ಮರದ ನೆರಳೇ ಶೆಡ್‌

ಮೈಸೂರು: ಅವ್ಯವಸ್ಥೆ ತಾಣ; ಎಂ.ಜಿ.ರಸ್ತೆ ಮಾರುಕಟ್ಟೆ

ರಮೇಶ ಕೆ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇದು ಸುಮಾರು ಎರಡು ದಶಕದಿಂದ ಇರುವ ಮಾರುಕಟ್ಟೆ. 600ಕ್ಕೂ ಹೆಚ್ಚು ರೈತರು ಹಾಗೂ ವ್ಯಾಪಾರಿಗಳ ಆಶ್ರಯ ತಾಣ. ನಿತ್ಯ ಏನಿಲ್ಲವೆಂದರೂ ₹20 ಲಕ್ಷ ವಹಿವಾಟು ನಡೆಯುತ್ತದೆ. ಆದರೆ ಇದು ನಡೆಯುವುದು ರಸ್ತೆ ಬದಿಯ ಮೈದಾನದಲ್ಲಿ. ಇಷ್ಟನ್ನು ಹೇಳಿದ ಬಳಿಕ ನಿಮ್ಮ ಊಹೆ ಸರಿ. ಇದು ಎಂಜಿ ರಸ್ತೆ ಮಾರುಕಟ್ಟೆ.

ಗುಂಡ್ಲುಪೇಟೆ, ನಂಜನಗೂಡು, ಎಚ್.ಡಿ.ಕೋಟೆ, ಜಯಪುರ ಭಾಗದ ರೈತರು ಗೂಡ್ಸ್‌ ವಾಹನಗಳಲ್ಲಿ ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಹಿಂದಿನ ದಿನ ಮಧ್ಯ ರಾತ್ರಿಯೇ ತರುತ್ತಾರೆ. ಇಡೀ ಮೈದಾನವೇ ವಾಹನ ನಿಲ್ದಾಣದಂತೆ ಭಾಸವಾಗುತ್ತದೆ.

ಮಹಾತ್ಮನ ಹೆಸರಿನ ರಸ್ತೆಯಲ್ಲಿರುವ ಈ ಮಾರುಕಟ್ಟೆ ಸುಸಜ್ಜಿತವಾಗಿಲ್ಲ ಎಂದರೆ ಸಮಸ್ಯೆಗಳು ಹೇಗಿವೆ ಎಂದು ಗೊತ್ತಾಗುವುದಿಲ್ಲ. ಮಳೆಗಾಲ ಬಂದರೆ ಮಾರುಕಟ್ಟೆಯ ರಸ್ತೆಗಳು ಕೆಸರು ಗದ್ದೆಯಾಗುತ್ತವೆ. ಬೈಕ್‌ ಸವಾರರು ಪರದಾಡುತ್ತಾರೆ. ಜನರ ನಡುವೆ ಬೀಡಾಡಿ ಹಸುಗಳೂ ನುಗ್ಗುತ್ತವೆ. ಸೊಪ್ಪು ಮಾರುವ ಮಹಿಳೆಯರಿಗೆ ಮರದ ನೆರಳೇ ಆಸರೆ. ಮೋರಿ ಪಕ್ಕದಲ್ಲೇ ಶೌಚಾಲಯವಿದೆ. ಅಲ್ಲೇ ವ್ಯಾಪಾರ. ಎಲ್ಲೆಂದರಲ್ಲಿ ಕಸ, ವ್ಯಾಪಾರದ ಸ್ಥಳದಲ್ಲೇ ವಾಹನಗಳ ಓಡಾಟ, ಮಳೆ ಬಂದರಂತೂ ನಿಲ್ಲಲೂ ಸ್ಥಳವಿಲ್ಲದ ಪರಿಸ್ಥಿತಿ.

ನಗರದ ಪ್ರಮುಖ ಪ್ರದೇಶದಲ್ಲಿರುವ ಮಾರುಕಟ್ಟೆಯಲ್ಲಿ ಸ್ವಚ್ಛತೆಯದ್ದೇ ಸಮಸ್ಯೆ. ಮಾರಾಟವಾಗದೆ ಉಳಿಯುವ ತರಕಾರಿಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಸಾರ್ವಜನಿಕ ಶೌಚಾಲಯವಿದ್ದರೂ ಅನೇಕರಿಗೆ ಬಯಲೇ ಶೌಚಾಲಯ. ರೈತರಿಗೆ ತಂಗುದಾಣವಿಲ್ಲ, ಹೀಗಾಗಿ ಮರಗಳೇ ಆಸರೆ. ಕುಡಿಯುವ ನೀರಿಗೂ ಪರದಾಟ ನಿಂತಿಲ್ಲ. ಮಾರುಕಟ್ಟೆ ಪಕ್ಕದಲ್ಲೇ ಇರುವ ರಾಜಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ವಿಷಜಂತುಗಳ ಹಾವಳಿಯೂ ಉಂಟು. ವ್ಯಾಪಾರಿಗಳಿಗೆ ಮೂಗು ಮುಚ್ಚಿಕೊಂಡೇ ವಹಿವಾಟು ನಡೆಸುವ ಅನಿವಾರ್ಯ. ಅಧಿಕಾರಿಗಳು, ಜನಪ್ರತಿ ನಿಧಿಗಳಿಗೆ ಇವರಿಂದ ನಿತ್ಯ ಹಿಡಿಶಾಪ.

‘ರೈತರ ಸಗಟು ಮಾರಾಟ ಹಾಗೂ ದಲಿತ ಸಂಘರ್ಷ ಸಮಿತಿಯವರ ಚಿಲ್ಲರೆ ಮಾರಾಟವೆರಡಕ್ಕೂ ಮೈದಾನವೇ ಕೇಂದ್ರ. ಹಸಿಕಸ ಹಾಗೂ ಒಣಕಸ ಬೇರ್ಪಡಿಸಿ ಕೊಡಲು ಸಮಿತಿಗೆ ಸೂಚಿಸಲಾಗಿದೆ. ರಾತ್ರಿ 2 ಗಂಟೆಯ ಹೊತ್ತಿಗೆ ಬರುವ ರೈತರು ಬೆಳಿಗ್ಗೆ 8 ಗಂಟೆವರೆಗೆ ವ್ಯಾಪಾರ ಮಾಡುತ್ತಾರೆ. 10 ಗಂಟೆವರೆಗೂ ಕಸ ಸಂಗ್ರಹವಾಗುತ್ತದೆ. ಅಲ್ಲಿನ ಕಸ ಸಂಗ್ರಹಕ್ಕೆ ವಿಶೇಷ ತಂಡವನ್ನೂ ರಚಿಸಲಾಗಿದೆ. ಪ್ರತ್ಯೇಕ ವಾಹನವೂ ಹೋಗುತ್ತದೆ. ಸ್ವಚ್ಛತೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ.ನಾಗರಾಜು ‍ಪ್ರತಿಕ್ರಿಯಿಸಿದರು.

‘ತರಕಾರಿ ಮಾರುವ 495 ಹಾಗೂ ಸೊಪ್ಪು ಮಾರುವ 150 ವ್ಯಾಪಾರಿಗಳಿ ದ್ದಾರೆ. ಸ್ವಂತ ಖರ್ಚಿನಿಂದ ರಸ್ತೆಗೆ ಕಲ್ಲು, ಮಣ್ಣು ಹಾಕಿಸಿದೆವು. ವ್ಯಾಪಾರಿಗಳ ನೆರವಿನಿಂದಲೇ ಕಸ ಸಂಗ್ರಹಿಸುತ್ತೇವೆ’ ಎಂದು ಮಾರಾಟಗಾರರ ಸಹಕಾರ ಸಂಘದ ನಿರ್ದೇಶಕ ಎಚ್‌.ನಾಗರಾಜ್‌ ದೂರಿದರು.

ರೈತರಿಂದ ನೇರ ಮಾರಾಟ: ವಸ್ತು ಪ್ರದರ್ಶನ ಮೈದಾನದಲ್ಲಿ ವ್ಯಾಪಾರ ಮಾಡುತ್ತಿದ್ದ ರೈತರನ್ನು ಕೋವಿಡ್‌ ಕಾರಣದಿಂದ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಚಿಲ್ಲರೆ ವ್ಯಾಪಾರಿಗಳ ಸಮೀಪದಲ್ಲೇ ರೈತರು ತರಕಾರಿ, ಹಣ್ಣು ಹಾಗೂ ಸೊಪ್ಪನ್ನು ಸಗಟು ಬೆಲೆಗೆ ಮಾರುತ್ತಾರೆ. ರೈತರೇ ಮಾರುವ ವ್ಯವಸ್ಥೆ ಇಲ್ಲಿದೆ.

ಜಿಲ್ಲೆಯ ವಿವಿಧೆಡೆಯಿಂದ ರೈತರು ಬರುತ್ತಾರೆ. ದಟ್ಟಣೆ ಹೆಚ್ಚಾಗಿರುತ್ತದೆ. ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲ. ಸರ್ಕಾರ ರೈತರು ಹಾಗೂ ಮಾರಾಟಗಾರರಿಗೆ ಮೂಲಸೌಲಭ್ಯ ಕಲ್ಪಿಸುವ ಅಗತ್ಯವಿದೆ.

ವ್ಯಾಪಾರಿಗಳಿಗೆ ಸಂಘದ ನೆರವು
ಮಾರುಕಟ್ಟೆಯನ್ನು ನಿರ್ವಹಣೆ ಮಾಡುತ್ತಿರುವ ದಲಿತ ಸಂಘರ್ಷ ಸಮಿತಿಯು, ‘ಸಿದ್ಧಾರ್ಥ ತರಕಾರಿ ಬೆಳೆಯುವ ರೈತರು ಮತ್ತು ಮಾರಾಟಗಾರರ ವಿವಿಧೋದ್ದೇಶ ಸಹಕಾರ ಸಂಘ’ವನ್ನು ಸ್ಥಾಪಿಸಿದೆ. ವ್ಯಾ‍‍ಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ₹1 ಲಕ್ಷ ಸಾಲವನ್ನು ನೀಡುತ್ತಿದೆ.

‘ಪಿ.ಮಣಿವಣ್ಣನ್ ಜಿಲ್ಲಾಧಿಕಾರಿಯಾಗಿದ್ದಾಗ ರೈತ ಸಂತೆಗಾಗಿ ಶೆಡ್‌ಗಳನ್ನು ಕಟ್ಟಿಸಲಾಯಿತು. ಆದರೆ, ಜಾಗದ ವಿವಾದ ನ್ಯಾಯಾಲಯದಲ್ಲಿದ್ದು, ಅಲ್ಲಿಗೆ ಸ್ಥಳಾಂತರ ಸಾಧ್ಯವಾಗಲಿಲ್ಲ. ಈಗ ಆ ಮಳಿಗೆಗೆಳು ಪಾಳುಬಿದ್ದಿವೆ’ ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ಎಚ್‌.ನಾಗರಾಜ್‌ ತಿಳಿಸಿದರು.

ಯಾರು ಏನಂತಾರೆ....
ರಸ್ತೆ ದುರಸ್ತಿಪಡಿಸಿ

ಮಾರುಕಟ್ಟೆಯಲ್ಲಿ ಒಂದೇ ಶೌಚಾಲಯ ಇರುವುದರಿಂದ ಕೆಲವೊಮ್ಮೆ ಸಾಲು ನಿಲ್ಲಬೇಕು. ಕೂತು ವ್ಯಾಪಾರ ಮಾಡಲು ಕಟ್ಟೆಯೂ ಇಲ್ಲ. ಮಳೆಗಾಲದಲ್ಲಿ ರಸ್ತೆಗಳೆಲ್ಲಾ ಕೆಸರುಮಯವಾಗುತ್ತವೆ. ಗ್ರಾಹಕರು ಬರೋದಿಲ್ಲ. ಜನಪ್ರತಿನಿಧಿಗಳು ಸೌಕರ್ಯ ಕಲ್ಪಿಸಬೇಕು.
-ಮಹದೇವಮ್ಮ, ವ್ಯಾಪಾರಿ

ದನಗಳ ಕಾಟ ತಪ್ಪಿಸಿ
19 ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇವೆ. ಲ್ಯಾನ್ಸ್‌ಡೌನ್‌ ಕಟ್ಟಡದಲ್ಲಿ ಮಾರುಕಟ್ಟೆ ಇದ್ದಾಗಿನಿಂದ ನಮಗೆ ತರಕಾರಿ ವ್ಯಾಪಾರವೇ ಜೀವನಕ್ಕೆ ಆಧಾರ. ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಶೆಡ್‌ ವ್ಯವಸ್ಥೆ ಮಾಡಿಸಿ ಕೊಡಬೇಕು. ಬೀಡಾಡಿ ದನಗಳ ಕಾಟವೂ ಹೆಚ್ಚಿದೆ.
-ಸ್ವಾಮಿ, ವ್ಯಾಪಾರಿ

ಸೊಳ್ಳೆಗಳ ಕಾಟ
ಪಕ್ಕದಲ್ಲೇ ಮೋರಿ ಇರುವುದರಿಂದ ಸೊಳ್ಳೆ ಕಾಟ ಹೆಚ್ಚಿದೆ. ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಬೇಕು. ಹೆಚ್ಚುವರಿ ಶೌಚಾಲಯ ಕಟ್ಟಿಸಿಕೊಡಬೇಕು. ಕೋವಿಡ್‌ ಲಸಿಕೆ ಹಾಕಿಸಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಅಧಿಕಾರಿಗಳು, ಶಾಸಕರು ಸಹಾಯ ಮಾಡಬೇಕು.
-ಚಂದ್ರಮ್ಮ, ವ್ಯಾಪಾರಿ

ಸ್ವಚ್ಛತೆಗೆ ಆದ್ಯತೆ ನೀಡಿ
ಇಲ್ಲಿ ತಾಜಾ ತರಕಾರಿ ಸಿಗುತ್ತದೆ ಎಂಬ ಕಾರಣಕ್ಕೆ ದೂರದ ಸರಸ್ವತಿ‍ಪುರಂ ನಿಂದ ನಿಯಮಿತವಾಗಿ ಬರುತ್ತೇನೆ. ಆದರೆ ಇಲ್ಲಿನ ಅವ್ಯವಸ್ಥೆ ನೋಡಿದರೆ ಬೇಸರವಾಗುತ್ತದೆ. ಕಾಂಕ್ರಿಟ್ ರಸ್ತೆ ಮಾಡಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.
-ಶ್ರೀನಿವಾಸ ಅಯ್ಯಂಗಾರ್‌, ಗ್ರಾಹಕ

ಶೆಡ್ ವ್ಯವಸ್ಥೆ ಮಾಡಿ
ಹಳ್ಳಿಯಿಂದ ತರಕಾರಿ ಮಾರಲು ಇಲ್ಲಿಗೆ ಬರುತ್ತೇವೆ. ಮಳೆ ಬಂದರೆ ಕೂರಲು ಜಾಗವಿಲ್ಲ. ದೊಡ್ಡ ಮಾರುಕಟ್ಟೆ ಸ್ಥಳದಲ್ಲಿ ಶೆಡ್ ವ್ಯವಸ್ಥೆ ಇಲ್ಲ. ರಾತ್ರಿ 3 ಗಂಟೆಯಿಂದಲೇ ಬರುತ್ತೇವೆ ಬೆಳಕಿನ ವ್ಯವಸ್ಥೆಯೂ ಸರಿಯಿಲ್ಲ. ಮೂಲ ಸೌಲಭ್ಯ ಒದಗಿಸಬೇಕು.
-ಪುಟ್ಟೇಶ್‌, ರೈತ, ಮಲ್ಲರಾಜಯ್ಯನಹುಂಡಿ

***

ರೈತರ ಸಂಖ್ಯೆ ಹೆಚ್ಚಾಗಿರುವುದರಿಂದ ಮಾರುಕಟ್ಟೆ ಆವರಣದಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗುವುದು.
-ಡಾ.ಡಿ.ಜಿ. ನಾಗರಾಜು, ಪಾಲಿಕೆ ಆರೋಗ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.