ಭಾನುವಾರ, ಡಿಸೆಂಬರ್ 15, 2019
17 °C

ಮಿನಿಯೇಚರ್ ಮ್ಯೂಸಿಯಂ ಕನಸು...

ಎನ್. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಅರಮನೆ ನಗರಿಯಲ್ಲಿರುವ ಕೆಲ ಪಾರಂಪರಿಕ ಕಟ್ಟಡಗಳು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ನಿರ್ವಹಣೆಯ ಕೊರತೆಯಿಂದ ವಿನಾಶದತ್ತ ಮುಖ ಮಾಡಿವೆ. ಮೈಸೂರಿನ ಅಸ್ಮಿತೆಯ ಭಾಗವಾದ, ಇಲ್ಲಿನ ಪರಂಪರೆಯ ಕುರುಹುಗಳಾಗಿ ಉಳಿದಿರುವ ಪುರಾತನ ಕಟ್ಟಡಗಳ ಮಿನಿಯೇಚರ್ (ತದ್ರೂಪ) ಗಳನ್ನು ನಿರ್ಮಿಸಿ ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನದಲ್ಲಿ ಯುವ ಕಲಾವಿದ ಮಹೇಶ್ವರ ಎನ್. ತೊಡಗಿದ್ದಾರೆ.

ಪಾರಂಪರಿಕ ಕಟ್ಟಡಗಳ ಮಿನಿಯೇಚರ್ ವಸ್ತುಸಂಗ್ರಹಾಲಯವನ್ನು ನಾಲ್ಕೈದು ಎಕರೆ ಪ್ರದೇಶದಲ್ಲಿ ನಿರ್ಮಿಸುವ ಕನಸು ಕಂಡಿದ್ದಾರೆ. ಅದಕ್ಕಾಗಿ ಬೇಕಾದ ವಿಸ್ತೃತ ಯೋಜನಾ ವರದಿಯನ್ನೂ ಸಿದ್ಧಪಡಿಸಿರುವ ಅವರು, ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

‘ಮೈಸೂರಿನಲ್ಲಿ 700ಕ್ಕೂ ಹೆಚ್ಚಿನ ಪಾರಂಪರಿಕ ಕಟ್ಟಡಗಳಿದ್ದವು. ಆದರೆ, ಈಗ ಉಳಿದಿರುವ ಕಟ್ಟಡಗಳ ಸಂಖ್ಯೆ 417. ಈ ಕಟ್ಟಡಗಳ ಪೈಕಿ ಕೆಲವೊಂದನ್ನು ವಿವಿಧ ಕಾರಣಗಳಿಗಾಗಿ ಕೆಡವಲಾಗುತ್ತಿದೆ. ಮುಂದಿನ 20 ವರ್ಷಗಳಲ್ಲಿ, 100 ವರ್ಷ ದಾಟಿದ ಪ್ರಮುಖ ಪಾರಂಪರಿಕ ಕಟ್ಟಡಗಳನ್ನು ಹೊರತುಪಡಿಸಿದರೆ ಉಳಿದ ಕಟ್ಟಡಗಳನ್ನು ನೋಡಲು ಸಿಗುವುದಿಲ್ಲ. ಆ ಕಟ್ಟಡಗಳ ಜಾಗದಲ್ಲಿ ಕಾಂಪ್ಲೆಕ್ಸ್, ಮಾಲ್ ಅಥವಾ ಮಲ್ಟಿಪ್ಲೆಕ್ಸ್‌ಗಳು ತಲೆ ಎತ್ತಿರುತ್ತವೆ. ಹೀಗಾಗಿ, ಇತಿಹಾಸ ಹಾಗೂ ಪರಂಪರೆಯನ್ನು ಸಾರುವ ಇಂತಹ ಕಟ್ಟಡಗಳ ಮಿನಿಯೇಚರ್‌ಗಳನ್ನು ಸಿದ್ಧಪಡಿಸಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡುವುದು ನನ್ನ ಉದ್ದೇಶ’ ಎಂದು ತಿಳಿಸುತ್ತಾರೆ ಮಹೇಶ್ವರ.

ಈ ಯೋಜನೆಗೆ ಅಂದಾಜು ₹100 ಕೋಟಿ ವೆಚ್ಚವಾಗಬಹುದು. ಮೈಸೂರಿನಲ್ಲಿರುವ 417 ಪಾರಂಪರಿಕ ಕಟ್ಟಡಗಳ ಮಾದರಿಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಆಯಾ ಕಟ್ಟಡದ ಸುತ್ತಲಿನ ಪ್ರದೇಶ, ರಸ್ತೆಯನ್ನೂ ಒಳಗೊಂಡಿರುತ್ತದೆ. ಇಲ್ಲಿಗೆ ಭೇಟಿ ನೀಡುವ ಜನರಿಗೆ ಆಯಾ ಪಾರಂಪರಿಕ ಕಟ್ಟಡದ ರಸ್ತೆಯಲ್ಲೇ ನಡೆದ ಅನುಭವ ಆಗುವಂತೆ ರೂಪಿಸಲಾಗುತ್ತದೆ. ಇದಲ್ಲದೆ, ಮಕ್ಕಳಿಗಾಗಿ ಮನರಂಜನಾ ಚಟುವಟಿಕೆಗಳು, ಆಹಾರ ಮಳಿಗೆಗಳು, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಪಾರ್ಕಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ. ಈ ಯೋಜನೆಯನ್ನು ಪೂರ್ಣಗೊಳಿಸಬೇಕಾದರೆ ಐದು ವರ್ಷಗಳಾದರೂ ಬೇಕಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಇದಲ್ಲದೆ, ಈ ಕಟ್ಟಡಗಳಿಗೆ ಬೆಳಕಿನ ವಿನ್ಯಾಸವನ್ನೂ ಮಾಡಲಾಗುತ್ತದೆ. ಅಂಬಾವಿಲಾಸ ಅರಮನೆಗೆ ವಿದ್ಯುತ್‍ ದೀಪಾಲಂಕಾರ ಮಾಡುವಂತೆ ಮಿನಿಯೇಚರ್‌ಗೂ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುತ್ತದೆ. ಈ ತಂದ್ರೂಪವನ್ನೂ ವಾರದ ನಿರ್ದಿಷ್ಟ ದಿನದಂದು ವಿದ್ಯುತ್ ದೀಪಗಳಿಂದ ಬೆಳಗಿಸಲಾಗುತ್ತದೆ. ಹಗಲಿನ ವೇಳೆ ನೀಲಿ ಆಕಾಶವಿದ್ದರೆ, ರಾತ್ರಿ ವೇಳೆ ಬೆಳಕಿನ ಚಿತ್ತಾರದ ಮೂಲಕ ಜನರ ಮನತಣಿಸುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದರು.

‘ಈ ಯೋಜನೆಯ ಪ್ರಸ್ತಾವವನ್ನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲು ಮುಂದಾಗಿದ್ದೆ. ಆದರೆ, ಸಿದ್ದರಾಮಯ್ಯ ಅವರ ಕಾರ್ಯದೊತ್ತಡದಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಈ ಯೋಜನೆ ಬಗ್ಗೆ ಇನ್ಫೊಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ವಿವರಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ’ ಎಂದು ಹೇಳಿದರು.

ಮಹೇಶ್ವರ ಹಿನ್ನೆಲೆ: ಮೈಸೂರು ಹೆಬ್ಬಾಳದ ನಿವಾಸಿ ನಟರಾಜು ಮತ್ತು ಸೌಭಾಗ್ಯ ದಂಪತಿ ಪುತ್ರ ಮಹೇಶ್ವರ. ಅವರು ಮಿನಿಯೇಚರ್ ಅಥವಾ ಚಿತ್ರಕಲೆಗೆ ಸಂಬಂಧಿಸಿದಂತೆ ಯಾವುದೇ ಕೋರ್ಸ್ ಮಾಡಿಲ್ಲ. ಬಾಲ್ಯದಲ್ಲಿ ಸಹೋದರನೊಟ್ಟಿಗೆ ಆಟವಾಡುತ್ತಿದ್ದ ವೇಳೆ ಮಣ್ಣಿನಲ್ಲಿ ವಿವಿಧ ಗೊಂಬೆ ತಯಾರಿಸುವುದು, ಬೆಂಕಿಪೊಟ್ಟಣದ ಕಡ್ಡಿಗಳಿಂದ ಮನೆ ಕಟ್ಟುತ್ತಿದ್ದರು. ಆನಂತರ ಈ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿರುವ ಅವರು 2007ರಲ್ಲಿ ಬಿಎಸ್‌ಎಫ್‌ಗೆ ಸೇರಿ ಜಮ್ಮು ಮತ್ತು ಕಾಶ್ಮೀರದಲ್ಲಿ 3 ವರ್ಷಗಳವರೆಗೆ ದೇಶ ಸೇವೆ ಮಾಡಿದ್ದರು. ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ 2010ರಲ್ಲಿ ಬಿಎಸ್‌ಎಫ್‌ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆನಂತರ ವಿವಿಧೆಡೆ ಕೆಲಸ ಮಾಡಿದ್ದ ಅವರು 2011ರಲ್ಲಿ  ಬೆಂಗಳೂರಿನ ಮಿನಿಯೇಚರ ಮಾಡೆಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು. 2 ವರ್ಷಗಳವರೆಗೆ ಕೆಲಸ ಮಾಡಿದ್ದರು. ಆದರೆ, ಆ ಕಂಪನಿ ತಮಿಳುನಾಡಿಗೆ ಸ್ಥಳಾಂತರಗೊಂಡಿತು. ಹೀಗಾಗಿ, ತಾವೇ ಸ್ವತಃ ಮಿನಿಯೇಚರ್ ತಯಾರಿಕೆಯಲ್ಲಿ ತೊಡಗಿದರು.

ಗಮನ ಸೆಳೆಯುವ ಮಿನಿಯೇಚರ್‌ಗಳು: ಮಹೇಶ್ವರ ಅವರು 20ಕ್ಕೂ ಹೆಚ್ಚಿನ ಕಟ್ಟಡದ ಮಾದರಿಗಳನ್ನು ನಿರ್ಮಿಸಿದ್ದಾರೆ. ಮೈಸೂರು ಪೊಲೀಸ್ ಕಮಿಷನರ್ ಕಚೇರಿ, ಮೈಸೂರು ಪೊಲೀಸ್ ಭವನ, ಹೈಕೋರ್ಟ್, ಬೆಂಗಳೂರಿನ ಅಪಾರ್ಟ್‌ಮೆಂಟ್, ಇಂಟರ್‌ನ್ಯಾಷನಲ್ ಸ್ಕೂಲ್, ಆಸ್ಪತ್ರೆಯ ಮಾದರಿಗಳು ಅವರ ಕೈಚಳಕದಲ್ಲಿ ಪಡಿಮೂಡಿವೆ.  ಮೈಸೂರು ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮೈಸೂರು ನಗರ ಸಂಚಾರ ಪೊಲೀಸರು ತೆರೆದಿರುವ ಮಳಿಗೆಯಲ್ಲಿ ಮಹೇಶ್ವರ ನಿರ್ಮಿಸಿರುವ ‘ಪೊಲೀಸ್ ಭವನ’ದ ಮಾದರಿಯನ್ನು ಪ್ರದರ್ಶಿಸಲಾಗಿದ್ದು, ಜನಮೆಚ್ಚುಗೆ ಪಡೆದಿದೆ. ಜತೆಗೆ ಅರಣ್ಯ ಇಲಾಖೆಗೆ ಸ್ತಬ್ಧಚಿತ್ರವನ್ನೂ ನಿರ್ಮಿಸಿ ಕೊಟ್ಟಿದ್ದಾರೆ. 

ಮಿನಿಯೇಚರ್‌ಗಳ ತಯಾರಿಕೆಯಲ್ಲದೆ, ಚಲನಚಿತ್ರ ಹಾಗೂ ಜಾಹೀರಾತುಗಳಿಗೂ ಕಲಾ ನಿರ್ದೇಶನ ಮಾಡಿದ್ದಾರೆ. ‘ಹರಿಶಡ್ವರ್ಗ’, ‘ಆಪರೇಷನ್ ಅಲಮೇಲಮ್ಮ’, ‘ನೋಡಿಸ್ವಾಮಿ ಇವನು ಇರೋದೆ ಹೀಗೆ’ ಸೇರಿದಂತೆ ಅನೇಕ ಚಲನಚಿತ್ರಗಳು ಹಾಗೂ 70ಕ್ಕೂ ಹೆಚ್ಚು ಜಾಹೀರಾತುಗಳಿಗೆ ಕಲಾ ನಿರ್ದೇಶನ ಮಾಡಿದ್ದಾರೆ. ಸನ್‍ಪ್ಯೂರ್, ಮೈಸೂರು ಸಿಲ್ಕ್, ಲೂನಾರ್ಸ್, ಬಾಷ್ ಕಂಪನಿಯ  ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ಇದಲ್ಲದೆ, ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗಿರುವ ಅನುಭವಗಳನ್ನು ಆಧರಿಸಿ ಸಿನಿಮಾ ನಿರ್ದೇಶನ ಮಾಡುವ ತವಕದಲ್ಲಿ ಮಹೇಶ್ವರ ಇದ್ದಾರೆ.

 

ಪ್ರತಿಕ್ರಿಯಿಸಿ (+)