ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟದಲ್ಲಿ ಲಕ್ಷ ಗಿಡ ನೆಡುವ ಯೋಜನೆ

ಅರಣ್ಯ ಇಲಾಖೆಯ ಸಂಪೂರ್ಣ ಸಹಕಾರ: ಸಚಿವ ಆನಂದ್‌ ಸಿಂಗ್‌
Last Updated 16 ಜೂನ್ 2020, 16:09 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿಬೆಟ್ಟದ ಹಸಿರೀಕರಣಕ್ಕೆ ಅರಣ್ಯ ಇಲಾಖೆ ಪೂರ್ಣ ಸಹಕಾರ ನೀಡಲಿದ್ದು, ಹಂತಹಂತವಾಗಿ ಒಂದು ಲಕ್ಷ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಚಾಮುಂಡಿಬೆಟ್ಟದ ಹಸಿರೀಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸಮ್ಮುಖದಲ್ಲಿ ಮಂಗಳವಾರ ನಡೆದ ಸಭೆಯ ಬಳಿಕ ಅವರು ಮಾತನಾಡಿದರು.

‘ಗಿಡಗಳನ್ನು ನೆಟ್ಟು ಅವು ಬೆಳೆಯುವವರೆಗೆ ಮೂರು ವರ್ಷಗಳ ಕಾಲ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು ನಮ್ಮ ಉದ್ದೇಶ. ಈ ಸಂಬಂಧ ಸ್ಥಳೀಯ ಶಾಸಕರು, ಸಂಸದರು ಮತ್ತು ಅಧಿಕಾರಿಗಳ ಜತೆ ಕುಳಿತು ಚರ್ಚೆ ಮಾಡಿದ್ದೇವೆ’ ಎಂದರು.

ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಚಾಮುಂಡಿಬೆಟ್ಟದಲ್ಲಿ ಸುಮಾರು 310 ಹೆಕ್ಟೇರ್‌ ಪ್ರದೇಶದಲ್ಲಿ ನೀಲಗಿರಿ ಮರಗಳು ಇವೆ. ಅವುಗಳನ್ನು ಕಿತ್ತುಹಾಕಿ ಸೀತಾಫಲ, ಅತ್ತಿ, ನೇರಳ ಮುಂತಾದ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ನರೇಗಾ ಯೋಜನೆಯಡಿ ಗುಂಡಿಗಳನ್ನು ತೋಡಿ ಗಿಡ ನೆಡಲು ತೀರ್ಮಾನಿಸಲಾಗಿದೆ. ಆರಂಭದಲ್ಲಿ ಒಂದಷ್ಟು ಜಾಗದಲ್ಲಿ ಸಾಂಕೇತಿಕವಾಗಿ ಸ್ವಲ್ಪ ಗಿಡಗಳನ್ನು ನೆಟ್ಟು ಯೋಜನೆಗೆ ಚಾಲನೆ ನೀಡಲಾಗುವುದು’ ಎಂದರು.

ಗಿಡಗಳನ್ನು ನೆಟ್ಟ ಮೇಲೆ ಅವುಗಳ ನಿರ್ವಹಣೆಗೆ ಸಮಸ್ಯೆಯಾಗಬಾರದು. ನೀರಿನ ವ್ಯವಸ್ಥೆಯನ್ನು ಹೇಗೆ ಮಾಡಿಕೊಳ್ಳಲಾಗುತ್ತದೆ ಎಂಬುದು ಮುಖ್ಯ. ಇಲ್ಲದಿದ್ದರೆ ಮಾಡಿದ ಎಲ್ಲ ಶ್ರಮವೂ ವ್ಯರ್ಥವಾಗುತ್ತದೆ. ನೀರುಣಿಸುವ ವ್ಯವಸ್ಥೆ ಸಮರ್ಪಕವಾಗಿ ನಡೆಯಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಮತಟ್ಟು ಜಾಗದಲ್ಲಿ ಗಿಡ ನೆಡಲು ಕ್ರಮ: ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳದೇ ಇರುವುದರಿಂದ ಸಮತಟ್ಟು ಪ್ರದೇಶ ಹಾಗೂ ಅವಕಾಶ ಇರುವ ಜಾಗದಲ್ಲಿ ಗಿಡಗಳನ್ನು ನೆಡಬೇಕು. ಮುಂದಿನ ವರ್ಷದಲ್ಲಿ ಸರಿಯಾದ ಸಿದ್ಧತೆ ಮೂಲಕ ಲಕ್ಷ ಗಿಡ ನೆಡುವ ಯೋಜನೆಯನ್ನು ಪೂರ್ಣರೂಪದಲ್ಲಿ ಜಾರಿಗೊಳಿಸುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಜಿ.ಟಿ.ದೇವೇಗೌಡ, ಸಿಸಿಎಫ್‌ ಹೀರಾಲಾಲ್‌, ಡಿಸಿಎಫ್‌ ಕೆ.ಸಿ.ಪ್ರಶಾಂತ್‌ ಕುಮಾರ್‌, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ, ಮತ್ತಿತರರು ಪಾಲ್ಗೊಂಡಿದ್ದರು.

ಎಸ್‌.ಟಿ.ಸೋಮಶೇಖರ್‌ಗೆ ಗೌರವ

ಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗೆ ದಾನಿಗಳಿಂದ ಹಣ ಸಂಗ್ರಹಿಸಿ ನೆರವು ನೀಡಿದ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನು ಅರಣ್ಯ ಸಚಿವ ಆನಂದ್‌ ಸಿಂಗ್‌ ಅಭಿನಂದಿಸಿದರು. ಶಾಲು ಹೊದಿಸಿ ಸನ್ಮಾನಿಸಿದರಲ್ಲದೆ, ಬೆಳ್ಳಿ ಗದೆ ನೀಡಿ ಗೌರವಿಸಿದರು.

‘ನಮ್ಮ ಇಲಾಖೆಗೆ ಸಂಬಂಧಪಟ್ಟ ಮೃಗಾಲಯಕ್ಕೆ ₹ 3 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಅವರಲ್ಲಿರುವ ಇಚ್ಛಾಶಕ್ತಿ ಏನೆಂಬುದು ತಿಳಿಯಬಬಹುದು. ಸರ್ಕಾರದ ವತಿಯಿಂದ ಯಾವುದೇ ಅನುದಾನ ಇಲ್ಲದಿದ್ದರೂ ಕ್ಷೇತ್ರದ ಜನರು, ಸ್ನೇಹಿತರಿಂದ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಗೌರವ ಸಲ್ಲಿಸಬೇಕಿದೆ’ ಎಂದು ಆನಂದ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT