ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಮಾಧುಸ್ವಾಮಿ ಕ್ಷಮೆಯಾಚಿಸಲು ಒತ್ತಾಯ

ದರ್ಪದ ರಾಜಕಾರಣಕ್ಕೆ ಜನರಿಂದಲೇ ತಕ್ಕಪಾಠ: ಶಿವರಾಮು
Last Updated 20 ನವೆಂಬರ್ 2019, 17:28 IST
ಅಕ್ಷರ ಗಾತ್ರ

ಮೈಸೂರು: ‘ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಅಪಮಾನಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು, ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳ್ಳೆಯ ಸಂಸದೀಯ ಪಟು ಎಂದು ಮಾಧುಸ್ವಾಮಿ ಬಗ್ಗೆ ಗೌರವವಿತ್ತು. ಆದರೆ, ಸಭೆಯೊಂದರಲ್ಲಿ ಸ್ವಾಮೀಜಿ ಬಗ್ಗೆ ಏಕವಚನದಲ್ಲಿ ಮಾತನಾಡಿ, ದರ್ಪ ತೋರಿಸುವುದು ಖಂಡನೀಯವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಆ ರೀತಿ ಉದ್ಧಟತನದಿಂದ ನಡೆದುಕೊಂಡಿರುವುದು ಸರಿಯಲ್ಲ. ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಅವರು ಪ್ರಚಾರಕ್ಕೆ ಬಂದಾಗ ಧಿಕ್ಕಾರ ಕೂಗಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದರು.

‘ಅಧಿಕಾರಕ್ಕೆ ಕೂಡಿಸಿದ ಜನರಿಗೆ ವಾಪಸ್‌ ಕರೆಯಿಸಿಕೊಳ್ಳುವುದು ಗೊತ್ತು. ಜನರು ಪ್ರಬುದ್ಧರಾಗಿದ್ದಾರೆ ಎಂಬುದನ್ನು ದರ್ಪದ ರಾಜಕಾರಣಿಗಳು ಅರಿತು ಮಾತನಾಡಬೇಕು. ಬಿಜೆಪಿಗೆ ಪ್ರಸಕ್ತ ಉಪಚುನಾವಣೆಯಲ್ಲಿ ಜನರೇ ಸರಿಯಾದ ಪಾಠ ಕಲಿಸುವರು‘ ಎಂದು ಹೇಳಿದರು.

ಸಂಸದ ವಿ. ಶ್ರೀನಿವಾಸ ಪ್ರಸಾದ್ ಸಹ ಅಂಬೇಡ್ಕರ್ ಹಾಗೂ ಸಂವಿಧಾನದ ವಿಷಯ ಕುರಿತಂತೆ ಎಚ್ಚರಿಕೆಯಿಂದ ಮಾತನಾಡಬೇಕಾಗಿತ್ತು. ಆದರೆ, ಅವರು ಸಂವಿಧಾನ ದಿನಾಚರಣೆ ಕುರಿತ ವಿವಾದಿತ ಸುತ್ತೋಲೆ ಕುರಿತಂತೆ ವ್ಯಕ್ತಪಡಿಸಿರುವ ಅಭಿಪ್ರಾಯ ಬೇಸರ ತಂದಿದೆ.

ಬಿಜೆಪಿಯಲ್ಲಿರುವ ದಲಿತ ನಾಯಕರನ್ನು ಬಿಜೆಪಿ ಮುಖಂಡರು ಹಾಗೂ ಆರ್‌ಎಸ್‌ಎಸ್‌ ಪ್ರಮುಖರು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಸಂವಿಧಾನ ತಿದ್ದಲಿ ಆದರೆ, ಅದು ಸಮಾಜಕ್ಕೆ ಬಹುಜನರ ಹಿತಕಾರಿಯಾಗಿರಲಿ. ಜನರಿಗೆ ನೋವು ಕೊಡುವಂತೆ ಇರಬಾರದು ಎಂದರು.

ಸಿಎಂಸಿಎ ನಿಷೇಧಕ್ಕೆ ಒತ್ತಾಯ
‘ಸಚಿವ ಸುರೇಶ್‌ಕುಮಾರ್ ಅವರು ತಮ್ಮ ಗಮನಕ್ಕೆ ಬಾರದೇ ಘಟನೆ ನಡೆದುಹೋಗಿದೆ ಎಂದಿದ್ದಾರೆ. ಸ್ವತಃ ಶಿಕ್ಷಣ ಸಚಿವರ ಗಮನಕ್ಕೆ ತಾರದೇ ಇಲಾಖೆ ಸುತ್ತೋಲೆ ಹೊರಡಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಶಿವರಾಮು, ಆ ಕುರಿತ ಕೈಪಿಡಿ ಸಿದ್ಧಪಡಿಸಿದ ಸಿಎಂಸಿಒ ಸಂಸ್ಥೆಗೆ ಕೇಂದ್ರದಿಂದ ಹಣ ಬರುವಂತದ್ದಾಗಿದ್ದು, ಈ ಕಾರಣದಿಂದಲೇ ಹುನ್ನಾರದ ಪ್ರತೀಕವಾಗಿ ಆ ರೀತಿಯ ಕೈಪಿಡಿ ಸಿದ್ಧಪಡಿಸಲಾಗಿದೆ. ಆದ್ದರಿಂದ ಕೂಡಲೇ ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಮತ್ತು ಆ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ವೀರಮಡಿವಾಳರ ಸಂಘದ ಸಂಚಾಲಕ ಸತ್ಯನಾರಾಯಣ, ವಿವಿಧ ಸಂಘಟನೆ ಮುಖಂಡರಾದ ಪಿ.ರಾಜು, ಕಾಡನಹಳ್ಳಿ ಸ್ವಾಮಿಗೌಡ, ಮಾರಶೆಟ್ಟಿ, ಡೈರಿ ವೆಂಕಟೇಶ್, ಧನ್‌ಪಾಲ್ ಕುರುಬಾರಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT