ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಪ್ರಾಂತ್ಯಕ್ಕೆ ಸಿಗದ ಸಚಿವ ಸ್ಥಾನ..!

ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ನಾಲ್ಕು ಜಿಲ್ಲೆ ಪ್ರತಿನಿಧಿಸಿದ್ದ ಏಳು ಸಚಿವರು
Last Updated 20 ಆಗಸ್ಟ್ 2019, 13:30 IST
ಅಕ್ಷರ ಗಾತ್ರ

ಮೈಸೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮೈಸೂರು ಪ್ರಾಂತ್ಯಕ್ಕೆ ಒಂದೇ ಒಂದು ಸಚಿವ ಸ್ಥಾನ ದೊರೆತಿಲ್ಲ. ಇದು ಈ ಭಾಗದ ಜನರು ಸೇರಿದಂತೆ, ಕಮಲ ಪಾಳೆಯದ ಕಾರ್ಯಕರ್ತರಲ್ಲೂ ಆಕ್ರೋಶ ಸೃಷ್ಟಿಸಿದೆ.

ಮೊದಲ ಸುತ್ತಿನ ಸಂಪುಟ ವಿಸ್ತರಣೆಯಲ್ಲಿ ಮೈಸೂರು ಪ್ರಾಂತ್ಯದ ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗೆ ಪ್ರಾತಿನಿಧ್ಯವೇ ದೊರಕಿಲ್ಲ. ಇದು ಸ್ಥಳೀಯರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

‘ಕೊಡಗು ಜಿಲ್ಲೆ ಮತ್ತೊಮ್ಮೆ ಪ್ರವಾಹಕ್ಕೆ ತುತ್ತಾಗಿದೆ. ಈ ಹಿಂದಿನ ವರ್ಷವೂ ಪ್ರವಾಹಕ್ಕೀಡಾದ ಸಂದರ್ಭ ಸ್ಥಳೀಯರಿಗೆ ಅಧಿಕಾರವೇ ಇರಲಿಲ್ಲ. ಕಾಂಗ್ರೆಸ್‌–ಜೆಡಿಎಸ್‌ನ ಯಾವೊಬ್ಬ ಪ್ರತಿನಿಧಿಯೂ ‌‌ಜಿಲ್ಲೆಯಿಂದ ಆಯ್ಕೆಯಾಗದ ಕಾರಣ ಎಚ್‌.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಜಿಲ್ಲೆಗೆ ಆದ್ಯತೆಯೇ ಸಿಕ್ಕಿರಲಿಲ್ಲ. ಗ್ರಾಮ ಪಂಚಾಯಿತಿಯಿಂದ ಹಿಡಿದು, ಲೋಕಸಭಾ ಕ್ಷೇತ್ರದವರೆಗೂ ಕೊಡಗು ಸಂಪೂರ್ಣವಾಗಿ ಕೇಸರಿಮಯವಾಗಿದೆ.’

’ಬಿಜೆಪಿಯ ಇಬ್ಬರು ಶಾಸಕರಲ್ಲಿ ಒಬ್ಬರಿಗಾದರೂ ಅವಕಾಶ ಕೊಡುವ ಮೂಲಕ ಜನರ ಮತದ ಮೌಲ್ಯ ಹೆಚ್ಚಿಸಬೇಕಿತ್ತು. ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಯ್ತು. ಮತ್ತೊಮ್ಮೆ ಹೊರಗಿನವರೇ ಹೊಣೆಗಾರಿಕೆ ನಿಭಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಂಘ ಪರಿವಾರದ ಹಿರಿಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಪ್ರಾಬಲ್ಯವೇ ಹೆಚ್ಚಿದೆ. ಲೋಕಸಭಾ ಚುನಾವಣೆ ಬಳಿಕ ಚಿತ್ರಣ ಬದಲಾಗಿದೆ. ಈ ಭಾಗದಲ್ಲೂ ಬಿಜೆಪಿ, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದ ಸಂದರ್ಭ ಹೇಳಿದ್ದರು. ಇದು ಈ ಭಾಗಕ್ಕೆ ಸಚಿವ ಸ್ಥಾನಮಾನ ಖಚಿತ ಎಂಬ ಭರವಸೆ ಮೂಡಿಸಿತ್ತು.’

’ಆದರೆ ಮೊದಲ ಹಂತದ ವಿಸ್ತರಣೆಯಲ್ಲಿ ಅವಕಾಶ ಸಿಕ್ಕಿಲ್ಲ. ಎರಡನೇ ಹಂತದಲ್ಲಿ ‘ಹಳ್ಳಿ ಹಕ್ಕಿ’ಗೆ ಸ್ಥಾನಮಾನ ಕೊಡಲೇಬೇಕಿದೆ. ಮೈಸೂರು ಪ್ರಾಂತ್ಯದ ಮೂಲ ಬಿಜೆಪಿಗರಿಗೆ ಅಧಿಕಾರ ಸಿಗುವ ಬಗ್ಗೆ ಹೇಳಲಾಗಲ್ಲ. ಎರಡನೇ ಹಂತದ ನಾಯಕರಿಗೆ, ಪ್ರಮುಖರಿಗೆ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ಶೀಘ್ರದಲ್ಲೇ ಸಿಗಲಿದೆ’ ಎಂದು ಮೈಸೂರು ವಿಭಾಗದ ಪ್ರಮುಖರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT