ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಜಾಗವಿಲ್ಲದವರಿಗೆ ಸೈಟ್‌; ಕಂತಿನಲ್ಲಿ ಹಣ

ಹುಣಸೂರು ತಾಲ್ಲೂಕಿನ ಕೋಣನ ಹೊಸಹಳ್ಳಿ ಸ್ಥಳಾಂತರಕ್ಕೆ ಸಚಿವ ಆರ್.ಅಶೋಕ್ ಸೂಚನೆ
Last Updated 22 ಆಗಸ್ಟ್ 2019, 15:54 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ನೆರೆ ಪೀಡಿತ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಸಚಿವ ಆರ್.ಅಶೋಕ್ ಸಂತ್ರಸ್ತರ ಅಳಲು ಆಲಿಸುವ ಜತೆ, ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

ಹುಣಸೂರು ತಾಲ್ಲೂಕಿನ ನಿಲುವಾಗಿಲು ಗ್ರಾಮದಲ್ಲಿನ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದಾಗ, ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

‘ವಾರದೊಳಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ಹಣ ನೀಡಲಿದೆ. ನೀವು ನೆಂಟರು ಕೇಳುತ್ತಾರೆ ಎಂದು ಅವರಿಗೆ ಕೊಟ್ಟು ಕುಳಿತುಕೊಳ್ಳಬೇಡಿ. ಮನೆಯನ್ನು ಕಟ್ಟಿಕೊಳ್ಳಿ’ ಎಂದು ಸಚಿವರು ಸಂತ್ರಸ್ತರಿಗೆ ಕಿವಿಮಾತು ಹೇಳಿದರು. ನೆರವು ಪರಿಹಾರ ಸಿಗದಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತನ್ನಿ ಎಂದರು.

ಸಂತ್ರಸ್ತ ಶಶಿಧರ್, ‘ಒಮ್ಮೆಗೆ ₹ 5 ಲಕ್ಷ ಕೊಡ್ತೀರಾ ? ಕಂತು ಕಂತಾಗಿ ಕೊಡ್ತೀರಾ’ ಎಂದು ಸಚಿವರನ್ನು ಪ್ರಶ್ನಿಸಿದರು. ‘ಮನೆಗಳನ್ನು ಕಟ್ಟಿಕೊಡೋದು ಖಚಿತ. ಕಂತು ಕಂತಾಗಿ ಕೊಡುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ತೇವೆ’ ಎಂದು ಅಶೋಕ್ ಉತ್ತರಿಸಿದರು.

‘ನಮಗೆ ಜಾಗ ಇಲ್ಲ. ಎಲ್ಲಿ ಮನೆ ಕಟ್ಟಿಕೊಳ್ಳೋದು’ ಎಂದು ಸಂತ್ರಸ್ತೆ ಕವಿತಾ ಸಚಿವರಿಗೆ ಕೇಳಿಕೊಂಡಿದ್ದಕ್ಕೆ, ‘ನಿವೇಶನ ಕೊಟ್ಟು, ಮನೆ ಕಟ್ಟಿಕೊಳ್ಳಲು ಪರಿಹಾರ ಒದಗಿಸಲಾಗುವುದು’ ಎಂದು ಸಂತ್ರಸ್ತೆಯನ್ನು ಸಂತೈಸಿದರು.

’ಬೆಳೆ ನಷ್ಟಕ್ಕೂ ಪರಿಹಾರ ಕೊಡ್ರೀ’ ಎಂದು ರಾಜಗೋಪಾಲ್ ಹೇಳಿದ್ದಕ್ಕೆ ಸಮ್ಮತಿಸಿದ ಸಚಿವರು, ಹಾನಿಯ ಸಮೀಕ್ಷೆ ಪೂರ್ಣಗೊಳ್ಳಲಿ. ನಷ್ಟಕ್ಕೀಡಾದ ಬೆಳೆಗೂ ಪರಿಹಾರ ನೀಡುತ್ತೇವೆ ಎಂದು ಹೇಳಿದರು.

ಸಚಿವರ ಜತೆಯಲ್ಲಿದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ‘ಜಾಗ ಇಲ್ಲದವರಿಗೆ ನಿವೇಶನ ನೀಡುತ್ತೇವೆ. ನಂತರ ಮನೆ ಕಟ್ಟಿಕೊಳ್ಳಲು ಅನುದಾನ ಒದಗಿಸುತ್ತೇವೆ. ಸರ್ಕಾರದ ವಿವಿಧ ಅನುದಾನವನ್ನು ಇದಕ್ಕೆ ಜೋಡಿಸುವ ಯತ್ನ ನಡೆದಿದೆ. ನಿರ್ಮಾಣಗೊಳ್ಳುವ ಪ್ರತಿ ಮನೆಗೂ ಜಿಪಿಎಸ್‌ ಅಳವಡಿಸಿ, ಕಂತಿನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಪರಿಹಾರ ಕೇಂದ್ರದಿಂದ ಸಚಿವರು ಹೊರ ಬರುತ್ತಿದ್ದಂತೆ, ಸಂತ್ರಸ್ತ ಮಹಿಳೆಯರಿಬ್ಬರು ಭೇಟಿಯಾಗಿ ತಾತ್ಕಾಲಿಕ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು. ಇದಕ್ಕೆ ಗರಂ ಆದ ಅಶೋಕ್‌ ತಕ್ಷಣವೇ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ದೊಡ್ಡಹೆಜ್ಜೂರು, ಕೋಣನ ಹೊಸಹಳ್ಳಿ, ಹೆಗ್ಗಂದೂರು ಗ್ರಾಮಗಳಿಗೂ ಸಚಿವರು ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಇದೇ ಸಂದರ್ಭ ಕೋಣನ ಹೊಸಹಳ್ಳಿ ಸ್ಥಳಾಂತರಕ್ಕೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT