ಭಾನುವಾರ, ಏಪ್ರಿಲ್ 11, 2021
32 °C

ತಪ್ಪು ಮಾಡಿಲ್ಲ– ನೋಟಿಸ್‌ ನೀಡಿದರೆ ಉತ್ತರಿಸುವೆ: ಶಾಸಕ ತನ್ವೀರ್‌ ಸೇಠ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮೈಸೂರು ಮೇಯರ್‌ ಚುನಾವಣೆಯ ಮೈತ್ರಿ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಪಕ್ಷ ನೋಟಿಸ್‌ ನೀಡಿದರೆ ಅದಕ್ಕೆ ಸೂಕ್ತ ಉತ್ತರ ಕೊಡಲು ಸಿದ್ಧ’ ಎಂದು ಶಾಸಕ ತನ್ವೀರ್‌ ಸೇಠ್‌ ಶುಕ್ರವಾರ ಇಲ್ಲಿ ಹೇಳಿದರು.

‘ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲವನ್ನೂ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಅವರ ಸೂಚನೆಯಂತೆ ಕೆಲಸ ಮಾಡಿದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಪಕ್ಷದ ಹಿತ ಕಾಯುವ ನಿಟ್ಟಿನಲ್ಲಿ ನಾನು ನಿರ್ಧಾರ ಮಾಡಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಈ ಸಲ ಮೇಯರ್‌ ಪಟ್ಟ ನಮಗೆ ಸಿಗಬೇಕು ಎಂದು ಪಕ್ಷದ ವರಿಷ್ಠರು ಸೂಚನೆ ಕೊಟ್ಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕೆಲವು ಬದಲಾವಣೆ ಮಾಡುವುದು ಅನಿವಾರ್ಯವಾಗಿದ್ದರಿಂದ ಬಿಟ್ಟುಕೊಟ್ಟೆವು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಉದ್ದೇಶವಾಗಿತ್ತು’ ಎಂದು ಹೇಳಿದರು.

ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರ ಶಕ್ತಿಗುಂದಿಸುವ ಹುನ್ನಾರ ನಡೆದಿದೆಯೇ ಎಂಬ ಪ್ರಶ್ನೆಗೆ, ‘ಯಾರ ಶಕ್ತಿಯನ್ನು ಯಾರೂ ಕುಗ್ಗಿಸಲು ಸಾಧ್ಯವಿಲ್ಲ. ಈ ಕುರಿತು ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ' ಎಂದು ಉತ್ತರಿಸಿದರು.

ಬೆಂಬಲಿಗರ ಆಕ್ರೋಶ: ತನ್ವೀರ್ ಸೇಠ್‌ ಅವರಿಗೆ ಕೆಪಿಸಿಸಿ ನೋಟಿಸ್‌ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ಬೆಳಿಗ್ಗೆ ಶಾಸಕರ ಮನೆ ಬಳಿ ನೆರೆದ ಬೆಂಬಲಿಗರು, ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.

ತಂದಿಡುವ ಕೆಲಸ– ಲಕ್ಷ್ಮಣ್‌ ಕಿಡಿ: ‘ಮೇಯರ್‌ ಚುನಾವಣೆ ನಡೆದ ಬಳಿಕವೂ ಎಚ್‌.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ಲಘುವಾಗಿ ಮಾತನಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಜೆಡಿಎಸ್‌ ಮುಖಂಡರ ತಂತ್ರಗಾರಿಕೆಯಿಂದಾಗಿ ಆ ಪಕ್ಷದ ಅಭ್ಯರ್ಥಿಯನ್ನೇ ಮೇಯರ್‌ ಮಾಡಲಾಗಿದೆ. ಇಷ್ಟಾದರೂ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಮುಖಂಡರಿಂದಲೇ ಹಿನ್ನಡೆಯಾಗುವಂತೆ ಮಾಡಿ, ಅವರಿಗೆ ಪಾಠ ಕಲಿಸಿದ್ದೇವೆಂದು ಹೇಳುತ್ತ ಎಚ್‌.ಡಿ.ಕುಮಾರಸ್ವಾಮಿ ತೊಡೆ ತಟ್ಟುತ್ತಿದ್ದಾರೆ’ ಎಂದು ಕಿಡಿಕಾರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು