ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ವಿಜಯೇಂದ್ರ – ಸೋಮಣ್ಣ ಮುಸುಕಿನ ಗುದ್ದಾಟಕ್ಕೆ ವೇದಿಕೆಯಾದ ಬಿಜೆಪಿ ಸಭೆ

ಸಚಿವ ವಿ.ಸೋಮಣ್ಣ ಮಾತಿನ ಮಧ್ಯೆ ವಿಜಯೇಂದ್ರ ಪರ ಘೋಷಣೆ
Last Updated 8 ಜೂನ್ 2022, 3:04 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ನಗರದ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯು ವಸತಿ ಸಚಿವ ವಿ.ಸೋಮಣ್ಣ ಹಾಗೂಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಡುವಿನ ಮುಸುಕಿನ ಗುದ್ದಾಟಕ್ಕೆ ವೇದಿಕೆಯಾಯಿತು.

ಸೋಮಣ್ಣ ಮಾತನಾಡುತ್ತಿದ್ದಾಗಲೇ ಕಾರ್ಯಕರ್ತರು ವಿಜಯೇಂದ್ರ ಪರವಾಗಿ ‘ರಾಜಾಹುಲಿ’, ‘ಮುಂದಿನ ಸಿಎಂ’ ಎಂದು ಘೋಷಣೆ ಕೂಗುತ್ತಿದ್ದರು. ‘ಸುಮ್ಮನಿರಿ. ವಿಜಯೇಂದ್ರನ ಹಣೆಬರಹದಲ್ಲಿ ಏನು ಬರೆದಿದೆಯೋ ಅದೇ ಆಗುತ್ತಾನೆ’ ಎಂದುಸೋಮಣ್ಣ ಪದೇ ಪದೇ ಹೇಳಿದರೂ ಕೇಳಲಿಲ್ಲ.

ಅದರಿಂದ ಸಿಟ್ಟಿಗೆದ್ದ ಸೋಮಣ್ಣ, ‘ಇದು ಪಕ್ಷದ ಚುನಾವಣಾ ಸಭೆ. ತನ್ನದೇ ಆದ ನಿಯಮಗಳಿವೆ. ಇಲ್ಲಿ ಯಾರನ್ನೂ ಅವಹೇಳನ ಮಾಡಬೇಡಿ. ಚರ್ಚೆ ಮಾಡುವುದಾದರೆ ಅದಕ್ಕೆ ಬೇರೆಡೆ ಸೇರೋಣ. ದಯಮಾಡಿ ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ’ ಎಂದು ಮನವಿ ಮಾಡಿದರು. ಆದರೂ ಕಾರ್ಯಕರ್ತರ ಗದ್ದಲ ಮುಂದುವರಿದಿತ್ತು. ಇದರಿಂದ ಮತ್ತೂ ಸಿಟ್ಟಾದರು.

‘ವಿಜಯೇಂದ್ರನನ್ನು ಹರಕೆ ಕುರಿ ಮಾಡಬೇಡಿ. ವಿಜಯೇಂದ್ರ ಎಂಎಲ್‌ಸಿ ಆಗಬೇಕೆಂದು ಬಯಸಿದವನಲ್ಲಿ ನಾನು ಮೊದಲಿಗ. ನನಗೀಗ 71 ವರ್ಷ. 42 ವರ್ಷಗಳ ರಾಜಕೀಯ ಅನುಭವವಿದೆ. ಐದು ಬಾರಿ ಶಾಸಕನಾಗಿ, ಎರಡು ಬಾರಿ ವಿಧಾನ ಪರಿಷತ್‌ ಸದಸ್ಯನಾಗಿ ಆರು ಬಾರಿ ಮಂತ್ರಿಯಾಗಿದ್ದೇನೆ. ನನಗೆ ಗೌರವ ಕೊಡಿ’ ಎಂದು ಮನವಿ ಮಾಡಿದರು.

‘ಬೆಂಗಳೂರಿನ ನನ್ನ ಕ್ಷೇತ್ರದಲ್ಲಿ ನಮ್ಮ ಸಮುದಾಯದ 5 ಸಾವಿರ ಮತಗಳಿವೆ. ಬೆಂಗಳೂರು ಕಟ್ಟಿದ ಕೆಂಪೇಗೌಡರ ಜನ ನನ್ನನ್ನು ಗೆಲ್ಲಿಸಿದ್ದಾರೆ. ನೀವು ಮೊದಲು ಸರಿಯಾಗಿ’ ಎಂದು ಕಾರ್ಯಕರ್ತರ ಮೇಲೆ ಸಿಟ್ಟಾದರು. ‘ಈ ಭಾಗದಲ್ಲಿ ನಾಯಕತ್ವದ ಕೊರತೆ ಇದೆ’ ಎಂದೂ ಹೇಳಿದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ‘ರಾಜಕಾರಣದಲ್ಲಿ ಎರಡು ವಿಧಗಳಿವೆ. ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ ಆದವರನ್ನು ರಾಜಕಾರಣಿ ಎನ್ನುತ್ತಾರೆ. ಆ ಸ್ಥಾನದಿಂದ ಕೆಳಗಿಳಿದ 15 ದಿನಗಳಲ್ಲಿ ಅವರನ್ನು ಜನ ಮರೆಯುತ್ತಾರೆ. ಆದರೆ, ಬಿ.ಎಸ್‌.ಯಡಿಯೂರಪ್ಪ ಅಂತಹವರನ್ನು ಜನನಾಯಕ ಎನ್ನುತ್ತಾರೆ. ಅವರಿಗೆ ಅಧಿಕಾರ ಇರಲಿ, ಇಲ್ಲದಿರಲಿ ಜನ ಸದಾ ನೆನೆಯುತ್ತಾರೆ’ ಎಂದರು.

‘ಮೈಸೂರು ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ₹1,500 ಕೋಟಿ ಹಾಗೂ ರಾಜ್ಯ ಸರ್ಕಾರ ₹319 ಕೋಟಿ ನೀಡಿದೆ. ಯೋಗ ದಿನಾಚರಣೆಗಾಗಿ ಮೈಸೂರಿಗೆ ಬರಲಿರುವ ಪ್ರಧಾನಿ ಮೋದಿ ಆಯಿಷ್‌ನಲ್ಲಿ ಹೊಸ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಲ್‌.ನಾಗೇಂದ್ರ, ನಿರಂಜನ್‌ ಕುಮಾರ್‌, ಎಂ.ಪಿ.ಕುಮಾರಸ್ವಾಮಿ, ಮುಖಂಡ ತೋಂಟದಾರ್ಯ, ಮೇಯರ್‌ ಸುನಂದಾ ಪಾಲನೇತ್ರ, ಬಿಜೆಪಿ ನಗರ ಘಟಕದ ಶ್ರೀವತ್ಸ, ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ರಘು ಕೌಟಿಲ್ಯ, ಕಾಪು ಸಿದ್ಧಲಿಂಗಸ್ವಾಮಿ, ರಾಜೇಂದ್ರ, ದೇವನೂರು ಪ್ರತಾಪ್‌ ಇದ್ದರು.‌

ಸುನಿಲ್‌ ಕುಮಾರ್, ಕಟೀಲ್‌ ಪ್ರಚಾರ

ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್ ಅವರು ಮಂಗಳವಾರ ಕೆಪಿಟಿಸಿಎಲ್‌ ಹಾಗೂ ಸೆಸ್ಕ್‌ ಕಚೇರಿ, ರಂಗಾಯಣ, ಹೆಬ್ಬಾಳ ಕೈಗಾರಿಕಾ ಪ್ರದೇಶದ ಸ್ಕ್ಯಾನ್‌ ರೇ, ಗಂಗೋತ್ರಿ ಬಡಾವಣೆಯ ದಕ್ಷಿಣ ಕನ್ನಡ ಜಿಲ್ಲಾ ಬಳಗ, ಕೃಷ್ಣಧಾಮ, ಪ್ರೀತಿ ಬಡಾವಣೆಯಲ್ಲಿ ವಾಸವಾಗಿರುವ ಕಲಾವಿದೆ ಕೃಪಾ ಫಡ್ಕೆ ಅವರ ಮನೆಗೆ ಭೇಟಿ ನೀಡಿ ಮೈ.ವಿ. ರವಿಶಂಕರ್‌ ಪರ ಮತಯಾಚನೆ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಂಗಳವಾರ ರಾತ್ರಿ ಶಿಕ್ಷಕರ ಸಂಘದ ಮುಖಂಡರು ಹಾಗೂ ನಗರ, ಜಿಲ್ಲೆಯ ಪ್ರಮುಖರೊಂದಿಗೆ ಸಭೆ ನಡೆಸಿ ಮತಯಾಚನೆ ಮಾಡಿದರು.

***

30 ವರ್ಷಗಳಿಂದ ಪಕ್ಷದ ಕಾರ್ಯಕರ್ತ, ಸಂಘಟಕನಾಗಿ ಕೆಲಸ ಮಾಡಿದ್ದೇನೆ. ಮತದಾರರು ನನ್ನ ಬೆಂಬಲಕ್ಕೆ ನಿಲ್ಲಬೇಕು.

–ಮೈ.ವಿ.ರವಿಶಂಕರ್‌, ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT