ಸೋಮವಾರ, ಆಗಸ್ಟ್ 2, 2021
20 °C
‘ಸಾಹಿತ್ಯ’ ಕೋಟಾದಡಿ ನಾಮನಿರ್ದೇಶನಕ್ಕಾಗಿ ಮುಖ್ಯಮಂತ್ರಿ ಮೇಲೆ ಹೆಚ್ಚಿದ ಒತ್ತಡ

ತಪ್ಪಿದ ಟಿಕೆಟ್; ‘ಹಳ್ಳಿಹಕ್ಕಿ’ ಪರ ಲಾಬಿ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಮೈಸೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಅಡಗೂರು ಎಚ್‌.ವಿಶ್ವನಾಥ್‌ ಅವರಿಗೆ ಬಿಜೆಪಿ ಟಿಕೆಟ್ ಕೊನೆ ಕ್ಷಣದಲ್ಲಿ ಕೈ ತಪ್ಪಿದೆ.

ಈ ಬೆಳವಣಿಗೆಯು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆ ಕಸರತ್ತಿನಲ್ಲಿ ‘ಅನರ್ಹ’ಗೊಂಡು, ಇದೀಗ ಸಚಿವರಾಗಿರುವ ಪ್ರಮುಖರ ಗುಂಪಿನಲ್ಲಿ ಅಸಮಾಧಾನ ಸೃಷ್ಟಿಸಿದೆ.

ಸಮ್ಮಿಶ್ರ ಸರ್ಕಾರ ಪತನದ ರೂವಾರಿ ಎಂದೇ ಬಿಂಬಿತಗೊಂಡಿರುವ ವಿಶ್ವನಾಥ್‌ಗೆ ಸ್ಥಾನಮಾನ ಕೊಡಿಸಲೇಬೇಕು ಎಂಬ ಒಂದಂಶದ ನಿರ್ಣಯಕ್ಕೆ ಬದ್ಧರಾಗಿರುವ ಸಚಿವರ ಪಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ, ಸಾಹಿತ್ಯ ಕೋಟಾದಡಿ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕು ಎಂಬ ಒತ್ತಡ ಹಾಕಲು ಮುಂದಾಗಿದೆ.

ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸಹ ವಿಶ್ವನಾಥ್ ಪರ ಬ್ಯಾಟಿಂಗ್ ನಡೆಸಿದ್ದಾರೆ.

ಅಸ್ತಿತ್ವಕ್ಕಾಗಿ ಒಗ್ಗಟ್ಟು: ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜೀನಾಮೆ ನೀಡಿದ್ದ 17 ಶಾಸಕರು ಈಗಲೂ ಒಟ್ಟಿಗಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣವಿರುವ ಮಸ್ಕಿಯ ಪ್ರತಾಪ್‌ಗೌಡ ಪಾಟೀಲ, ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಎಚ್.ವಿಶ್ವನಾಥ್ ಹೊರತುಪಡಿಸಿ, ಉಳಿದ ಎಲ್ಲರೂ ಅಧಿಕಾರದ ಸ್ಥಾನಮಾನದಲ್ಲಿದ್ದಾರೆ’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಸರ್ಕಾರದ ಅವಧಿ ಮುಗಿಯುವ ತನಕ ಇವರೆಲ್ಲರೂ ತಮ್ಮ ತಮ್ಮ ಅಸ್ತಿತ್ವಕ್ಕಾಗಿ, ಹಿತ ಕಾಯ್ದುಕೊಳ್ಳಲು ಒಂದಾಗಿಯೇ ಇರಲಿದ್ದಾರೆ. ಉಳಿದ ಮೂವರ ಪರವೂ 14 ಜನ ಸಚಿವರು, ಶಾಸಕರು ಮುಖ್ಯಮಂತ್ರಿ ಮೇಲೆ ನಿರಂತರವಾಗಿ ಒತ್ತಡ ಹಾಕಲಿದ್ದಾರೆ. ‘ಹಳ್ಳಿ ಹಕ್ಕಿ ಹಾಡು’ ಪುಸ್ತಕದಿಂದ ಜನಪ್ರಿಯರಾಗಿದ್ದ ವಿಶ್ವನಾಥ್ ಅವರನ್ನು ಸಾಹಿತ್ಯ ಕೋಟಾದಡಿ ನಾಮನಿರ್ದೇಶನಗೊಳಿಸುವಂತೆ ಈಗಾಗಲೇ ಲಾಬಿ ಬಿರುಸುಗೊಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಹುಣಸೂರು ಉಪ ಚುನಾವಣೆಯಲ್ಲಿ ವಿಶ್ವನಾಥ್ ಪರಾಭವಗೊಂಡಿದ್ದರೂ, ಕೊಟ್ಟ ಮಾತಿನಂತೆ ಅಧಿಕಾರ ಕೊಡಿ ಎಂದು ಮುಖ್ಯಮಂತ್ರಿ ಮೇಲೆ ಈ ಗುಂಪು ಒತ್ತಡ ಹಾಕುತ್ತಿದೆ. ಯಡಿಯೂರಪ್ಪ ಅವರಿಗೂ ‘ಹಳ್ಳಿಹಕ್ಕಿ’ಯ ಮೇಲೆ ವಿಶೇಷ ಪ್ರೀತಿಯಿದೆ. ಇದರ ಫಲ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಳ್ಳಬಹುದು’ ಎಂದು ಹೇಳಿದರು.

ಪರಾಭವ ಮುಳುವಾಯಿತೇ? ಪ್ರಭಾವ ಅಡ್ಡಿಯಾಯಿತೇ?

‘ಹುಣಸೂರು ಉಪ ಚುನಾವಣೆಯಲ್ಲಿನ ಸೋಲು ಟಿಕೆಟ್ ಕೈ ತಪ್ಪಲು ಪ್ರಮುಖ ಕಾರಣವಾಯಿತೇ? ಈ ಹಿಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ವನಾಥ್, ಸೋಮಶೇಖರ್ ನೇಮಕಗೊಂಡ ಬಳಿಕ ಪ್ರಭಾವಿಯಾಗಿದ್ದು ಅಡ್ಡಿಯಾಯಿತೇ’ ಎಂಬ ವಿಶ್ಲೇಷಣೆ, ಚರ್ಚೆ ರಾಜಕೀಯ ವಲಯದಲ್ಲಿ ಬಿರುಸಿನಿಂದ ನಡೆದಿದೆ.

‘ವಿಶ್ವನಾಥ್ ಜೆಡಿಎಸ್ ತೊರೆದ ಬಳಿಕ ಶಾಸಕ ಸಾ.ರಾ.ಮಹೇಶ್ ಆಗ್ಗಿಂದಾಗ್ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವುದು ನಡೆದಿದೆ. ಮುಜುಗರಕ್ಕೀಡಾಗುವಂತಹ ಆರೋಪ ಮಾಡಿದಿದ್ದೆ. ಇದೂ ಕೂಡಾ ತೊಡಕಾಯಿತೇ’ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಆರ್.ಶಂಕರ್‌ಗೆ ಪಕ್ಷ ಟಿಕೆಟ್‌ ಕೊಡಬೇಕಿತ್ತು, ಕೊಟ್ಟಿದೆ. ಎಂ.ಟಿ.ಬಿ.ನಾಗರಾಜ್ ಅವರದ್ದು ಮುಖ್ಯಮಂತ್ರಿ ಜತೆ ವೈಯಕ್ತಿಕ ಒಡಂಬಡಿಕೆ. ವಿಶ್ವನಾಥ್‌ಗೆ ಸಿಗೋದು ಅನುಮಾನವಿತ್ತು’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಜೆಪಿ ಶಾಸಕರೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.