ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ವಿಚಾರಗಳ ಬಗ್ಗೆ ಮೋದಿಗೆ ತಡವಾಗಿ ಜ್ಞಾನೋದಯ

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವ್ಯಂಗ್ಯ
Last Updated 22 ಅಕ್ಟೋಬರ್ 2018, 13:21 IST
ಅಕ್ಷರ ಗಾತ್ರ

ಮೈಸೂರು: ಗಾಂಧಿ ವಿಚಾರಧಾರೆಗಳನ್ನು ವರ್ಷಪೂರ್ತಿ ನೆನೆಯುವ ಕಾರ್ಯಕ್ರಮಗಳನ್ನು ನಡೆಸುವಂತೆ ಆದೇಶಿಸಿರುವ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿಯವರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವ್ಯಂಗ್ಯವಾಡಿದರು.

ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಂಗಾಯಣ ಮತ್ತು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ಹಮ್ಮಿಕೊಂಡಿರುವ ಗಾಂಧಿ ಕುರಿತ ‘ಸಿಮೆಂಟ್ ಶಿಲ್ಪ ಶಿಬಿರ’ಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಧಿ ಆದರ್ಶಗಳು, ಅವರ ತತ್ವಗಳು ಯಾವ ಕಾಲಕ್ಕೂ ಪ್ರಸ್ತುತವೇ. ಗಾಂಧಿಯ ನೆನಪೇ ಆಗದವರಿಗೆ ಈಗ ಸ್ಮರಣೆ ಹೆಚ್ಚಾಗಿಬಿಟ್ಟಿದೆ. ಇದು ಒಳ್ಳೆಯ ವಿಚಾರವೇ. ಪಠ್ಯದ ಮೂಲಕ, ನಿರಂತರ ಕಾರ್ಯಕ್ರಮಗಳ ಮೂಲಕ ಗಾಂಧಿ ವಿಚಾರಗಳ ಪ್ರಚಾರವಾಗಬೇಕು ಎಂದು ಅವರು ಸಲಹೆ ನೀಡಿದರು.

ಶಾಲಾ ಮಟ್ಟದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ವಿಚಾರಗಳ ಪ್ರಚಾರ ಸಮರ್ಪಕವಾಗಿ ಆಗುತ್ತಿಲ್ಲ. ಪಠ್ಯದಲ್ಲಿ ಗಾಂಧಿ ಸೇರಿದಂತೆ ಈ ದೇಶಕ್ಕಾಗಿ ಹೋರಾಡಿದವರ, ಪ್ರಾಣತ್ಯಾಗ ಮಾಡಿದವವರ ಸ್ಮರಣೆಯೇ ಇಲ್ಲ. ಹಾಗಾಗಿಯೇ, ಇಂದಿನ ಯುವಜನತೆಗೆ ಮಹಾನ್‌ ವ್ಯಕ್ತಿಗಳ ವಿಚಾರವೇ ತಿಳಿದಿಲ್ಲ. ದಿನಕಳೆದಂತೆ ಸ್ಮೃತಿಪಟಲದಿಂದ ಈ ವ್ಯಕ್ತಿಗಳು ಮರೆಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ‘ಶಿಕ್ಷಣ ವ್ಯವಸ್ಥೆಯಲ್ಲಿ ದೋಷವಿದೆ. ಈ ಶಿಬಿರದಲ್ಲಿ ಪ್ರೇಕ್ಷಕರಾಗಿಯಾದರೂ ಭಾಗವಹಿಸಲು ವಿದ್ಯಾರ್ಥಿಗಳೊಬ್ಬರೂ ಬಂದಿಲ್ಲ. ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಕಾಣಿಸುತ್ತಿಲ್ಲ. ಈ ರೀತಿಯ ಕಾರ್ಯಕ್ರಮಗಳನ್ನು ಆಚರಿಸುವುದರಿಂದ ಮೂಲ ಆಶಯ ಹೇಗೆ ಈಡೇರಿಸಿದಂತೆ ಆಗುವುದು?’ ಎಂದು ಅವರು ಪ್ರಶ್ನಿಸಿದರು.

‘ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಬಗ್ಗೆ ನನಗೆ ಅತೀವ ಅಸಮಾಧಾನವಿದೆ. ಇವರಿಗಿಂತ ಹತ್ತಾರು ಕಿಲೋಮೀಟರ್‌ ನಡೆದು ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರೇ ಮೇಲು. ಕಡಿಮೆ ಸಂಬಳ ತೆಗೆದುಕೊಂಡರೂ ಮಕ್ಕಳನ್ನು ತಿದ್ದಿ ತೀಡಿ ಬೆಳೆಸುತ್ತಾರೆ. ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿರುವ ಪ್ರಾಧ್ಯಾಪಕರು ಏನು ಮಾಡುತ್ತಿದ್ದಾರೆ. ಅವರೇ ಉತ್ತರ ನೀಡಲಿ’ ಎಂದು ಕುಟುಕಿದರು.

ಮೈಸೂರು ವಿ.ವಿ ಪ್ರಭಾರಿ ಕುಲಪತಿ ಪ್ರೊ.ಆಯಿಷಾ ಎಂ.ಷರೀಫ್ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಶಿಲ್ಪಿ ರು.ಕಾಳಾಚಾರ್, ಅಂತರ ರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್, ಮೈಸೂರು ವಿ.ವಿ. ಕುಲಸಚಿವ ಪ್ರೊ.ಆರ್.ರಾಜಣ್ಣ, ನಿವೃತ್ತ ಪ್ರಾಧ್ಯಾಪಕ ಕೆ.ಟಿ.ವೀರಪ್ಪ ಅತಿಥಿಗಳಾಗಿದ್ದರು.

ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮತ್ತೆ ಪ್ರೇಮ ಪಾಠ!

ಸಚಿವ ಜಿ.ಟ.ದೇವೇಗೌಡ ಅವರು ಗಾಂಧಿ ಕಾರ್ಯಕ್ರಮದಲ್ಲೂ ಪ್ರೇಮ ಪಾಠ ಮಾಡಿದರು.

ಯುವಕರಲ್ಲಿ ತತ್ವಾದರ್ಶಗಳು ಕ್ಷೀಣಿಸುತ್ತಿರುವುದಕ್ಕೆ ಉದಾಹರಿಸಿದ ದೇವೇಗೌಡರು, ಮನೆಯವರಿಗೆ ಕಣ್ಣೀರು ಹಾಕಿಸಿ ಪ್ರೀತಿಸಿ ಮದುವೆಯಾಗುತ್ತಾರೆ. ಒಂದು ತಿಂಗಳಲ್ಲೇ ವಿಚ್ಛೇದನ ಪಡೆದು ಪರಿತಪಿಸುತ್ತಾರೆ’ ಎಂದರು.

ಇದನ್ನು ಶಾಲಾ– ಕಾಲೇಜುಗಳಲ್ಲಿ ನಾನು ಹೇಳಿದರೆ ದೇವೇಗೌಡರು ಪ್ರೇಮ ಪಾಠ ಮಾಡುತ್ತಾರೆ ಎಂದು ಪತ್ರಿಕೆಗಳಲ್ಲಿ ಬರೆಯುತ್ತಾರೆ ಎಂದು ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT