ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಆಗಮನ ಹಿನ್ನೆಲೆ: ಮೈಸೂರಿನಲ್ಲಿ ಗರಿಗೆದರಿದ ಚಟುವಟಿಕೆ

ಸಜ್ಜಾಗುತ್ತಿರುವ ವೇದಿಕೆಗಳು, ಬಿಗಿ ಭದ್ರತೆಗೆ ಕ್ರಮ
Last Updated 18 ಜೂನ್ 2022, 13:00 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಮತ್ತು ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೂನ್‌ 20ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವುದರಿಂದಾಗಿ, ನಗರದಲ್ಲಿ ಪೂರ್ವ ಸಿದ್ಧತೆ ಬಿರುಸು ಪಡೆದಿದೆ. ವೇದಿಕೆಗಳನ್ನು ಸಜ್ಜುಗೊಳಿಸುವ ಕಾರ್ಯ ಗರಿಗೆದರಿದೆ.

ಪ್ರಧಾನಿಯನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಸಾಂಸ್ಕೃತಿಕ ನಗರಿಯನ್ನು ಸಿಂಗರಿಸಲಾಗುತ್ತಿದೆ. ಅವರು ಸಂಚರಿಸುವ ಮಾರ್ಗಗಳ ಡಾಂಬರೀಕರಣ ಕಾಮಗಾರಿ ನಡೆದಿದೆ. ರಸ್ತೆ ವಿಭಜಕಗಳಿಗೆ ಸುಣ್ಣ–ಬಣ್ಣ ಬಳಿಯಲಾಗಿದೆ. ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸಲಾಗಿದೆ. ಪ್ರಧಾನಿ ಪ್ರಯಾಣಿಸುವ ವೇಳೆ ಸಾರ್ವಜನಿಕರು ರಸ್ತೆಗಿಳಿಯದಂತೆ ನೋಡಿಕೊಳ್ಳುವುದಕ್ಕಾಗಿ, ಚಾಮರಾಜ ಜೋಡಿ ರಸ್ತೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ ಕಟ್ಟಲಾಗಿದೆ. ಯೋಗ ಕಾರ್ಯಕ್ರಮ ನಡೆಯುವ ಅರಮನೆ ಆವರಣ, ಸಂವಾದ ಜರುಗಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ವೇದಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಜಿಲ್ಲಾಡಳಿತ, ಮಹಾನಗರಪಾಲಿಕೆ ವತಿಯಿಂದ ಪೂರ್ವ ಸಿದ್ಧತೆ ಭರದಿಂದ ಸಾಗಿದೆ.

ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಸಿದ್ಧತಾ ಕಾರ್ಯಗಳನ್ನು ತೊಡಗಿರುವುದು. ಪ್ರಜಾವಾಣಿ ಚಿತ್ರ.
ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಸಿದ್ಧತಾ ಕಾರ್ಯಗಳನ್ನು ತೊಡಗಿರುವುದು. ಪ್ರಜಾವಾಣಿ ಚಿತ್ರ.

ಪರಿಶೀಲಿಸಿದ ಸಚಿವರು:

ಅರಮನೆ ಆವರಣದಲ್ಲಿ ನಡೆದಿರುವ ತಯಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪ್ರತಾಪ ಸಿಂಹ ಪರಿಶೀಲಿಸಿದರು. ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್ ಹಾಗೂ ಅಧಿಕಾರಿಗಳು ಇದ್ದರು. ಅಲ್ಲಿ ಮೋದಿ ಅವರೊಂದಿಗೆ 15ಸಾವಿರ ಮಂದಿ ಯೋಗ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ 17 ಬ್ಲಾಕ್‌ಗಳನ್ನು ರೂಪಿಸಲಾಗಿದೆ. 160 ಮೊಬೈಲ್‌ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಪಾಹಾರ ನೀಡಲಾಗುವುದು. ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಕಾರ್ಯಕ್ರಮ ಆಯೋಜಿಸಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ ಹಾಗೂ ಅಧಿಕಾರಿಗಳು ಪರಿಶೀಲನೆ ಮಾಡಿದರು. ಪ್ರಜಾವಾಣಿ ಚಿತ್ರ.
ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ ಹಾಗೂ ಅಧಿಕಾರಿಗಳು ಪರಿಶೀಲನೆ ಮಾಡಿದರು. ಪ್ರಜಾವಾಣಿ ಚಿತ್ರ.

ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಮೈದಳೆಯುತ್ತಿದೆ. ಮಂಡ್ಯ, ಹಾಸನ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ 50ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜನರನ್ನು ಕರೆತರಲು ಬಿಜೆಪಿಯ ಜನಪ್ರತಿನಿಧಿಗಳಿಗೆ ಮತ್ತು ಪ್ರಮುಖರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಧಾನಿಯು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದು, ಮಾರ್ಗದುದ್ದಕ್ಕೂ ಸ್ವಚ್ಛತೆಗೆ ಕ್ರಮ ವಹಿಸಲಾಗಿದೆ. ವಿದ್ಯುತ್‌ದೀಪಾಲಂಕಾರವನ್ನೂ ಮಾಡಲಾಗುತ್ತಿದೆ.

ವಸ್ತುಪ್ರದರ್ಶಕ್ಕೆ ಸಿದ್ಧತೆ:

ಯೋಗ ದಿನದ ಪ್ರಯುಕ್ತ ಯೋಗದ ಪರಂಪರೆಯನ್ನು ಪರಿಚಯಿಸಲು ಕೇಂದ್ರ ಆಯುಷ್ ಇಲಾಖೆಯಿಂದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ವಸ್ತುಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದೆ. ಅದನ್ನು ಪ್ರಧಾನಿ ವೀಕ್ಷಿಸಲಿದ್ದಾರೆ.

ಭದ್ರತೆಯ ನೇತೃತ್ವ ವಹಿಸಿರುವ ಎಸ್‌ಪಿಜಿ ಹಾಗೂ ಎನ್‌ಎಸ್‌ಜಿ ಅಧಿಕಾರಿಗಳು, ಕಾರ್ಯಕ್ರಮದ ವೇದಿಕೆಗಳನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ಭದ್ರತೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳುವುದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಭಾರತೀಯ ವಾಯುಪಡೆಯ ಅಧಿಕಾರಿಗಳ ತಂಡವೂ ನಗರಕ್ಕೆ ಆಗಮಿಸಿದೆ. ಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದ ಅವರು ಕ್ರಾಫರ್ಡ್‌ ಭವನದ ಎದುರಿನ ಓವಲ್‌ ಗ್ರೌಂಡ್‌ನ ಹೆಲಿಪ್ಯಾಡ್‌ಗೆ ಬಂದಿಳಿದರು. ಇದು ದಾರಿಹೋಕರನ್ನು ಆಕರ್ಷಿಸಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಾದ ಕಾರ್ಯಕ್ರಮಕಾಗಿ ಮಹಾರಾಜಾ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಪ್ರಜಾವಾಣಿ ಚಿತ್ರ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಾದ ಕಾರ್ಯಕ್ರಮಕಾಗಿ ಮಹಾರಾಜಾ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಪ್ರಜಾವಾಣಿ ಚಿತ್ರ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಪ್ರಧಾನಿಯು ಭಾಗವಹಿಸಲಿರುವ ಕಾರ್ಯಕ್ರಮಗಳ ಸ್ಥಳಗಳಿಗೆ ಭೇಟಿ ನೀಡಿ ಭದ್ರತೆಯ ದೃಷ್ಟಿಯಿಂದ ಕೈಗೊಂಡಿರುವ ಕ್ರಮಗಳನ್ನು ಪರಾಮರ್ಶಿಸಿದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್‌ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT