ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲೆ, ಅಭಿವೃದ್ಧಿ ಕೈ ಹಿಡಿದವು...

ಜನರು–ನಮೋ ನಡುವೆ ಅದ್ಭುತ ಮೈತ್ರಿ ಇದೆ: ಪ್ರತಾಪಸಿಂಹ
Last Updated 24 ಮೇ 2019, 20:05 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅಲೆ. ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ನನ್ನ ಗೆಲುವಿಗೆ ಪ್ರಮುಖ ಕಾರಣ. ಮುಂದೆಯೂ ನಿಯತ್ತಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರಕ್ಕೆ ತಂದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇನೆ’

–ಹೀಗೆಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಬಿಜೆಪಿಯ ಪ್ರತಾಪಸಿಂಹ.

ಮತ್ತೊಮ್ಮೆ ಸಂಸತ್ ಪ್ರವೇಶಿಸಲು ಸಿದ್ಧರಾಗಿರುವ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಿ.ಎಚ್‌.ವಿಜಯಶಂಕರ್‌ ಅವರನ್ನು 1.39 ಲಕ್ಷ ಮತಗಳಿಂದ ಸೋಲಿಸಿದ್ದಾರೆ. ದೊಡ್ಡ ಅಂತರದಿಂದ ಗೆದ್ದಿರುವ ಅವರು ಆ ಖುಷಿಯನ್ನು ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

ಇದು ನಿಮಗೆ ಲಭಿಸಿದ ನಿರೀಕ್ಷಿತ ಗೆಲುವೇ? ಅಥವಾ ಕಷ್ಟಪಟ್ಟು ಒಲಿಸಿಕೊಂಡ ಗೆಲುವೇ?

ಒಂದು ಲಕ್ಷ ಲೀಡ್‌ನಿಂದ ಗೆಲ್ಲುವುದಾಗಿ ಎರಡು ವರ್ಷಗಳಿಂದ ಹೇಳುತ್ತಾ ಬಂದಿದ್ದೆ. ಅದರಲ್ಲಿ ನನಗೆ ಅಚಲವಾದ ಆತ್ಮವಿಶ್ವಾಸ ಇತ್ತು. ಆಗ ಕೆಲವರು ಕುಹಕವಾಡಿದ್ದರು, ನಗು ಬೀರಿದ್ದರು. ಆದರೆ, ನಾನು ನಂಬಿದ ಜನ ನನ್ನ ಕೈಬಿಡಲಿಲ್ಲ. ನಿರೀಕ್ಷೆಗಿಂತ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲಿಸಿದ್ದಾರೆ.

ಈ ಗೆಲುವಿನಲ್ಲಿ ಪ್ರತಾಪಸಿಂಹ ಪಾತ್ರವೇನು?

ಜನರು ವೋಟು ನೀಡಿದ್ದು ನನಗೇ ಅಲ್ಲವೇ? ಐದು ವರ್ಷಗಳಲ್ಲಿ ಕರ್ನಾಟಕದ 28 ಸಂಸದರಲ್ಲಿ ಅತಿ ಹೆಚ್ಚು ಅನುದಾನ ತಂದವರಲ್ಲಿ ನಾನು ನಂಬರ್‌ ಒನ್‌. ಅನುದಾನ ಬಳಕೆಯಲ್ಲಿ ಕೂಡ ನಾನು ನಂಬರ್‌ ಒನ್‌. ಗೆಲುವಿಗೆ ಈ ಅಂಶ ಕಾರಣವಲ್ಲವೇ?

2014ರಲ್ಲಿ ಮೋದಿ ಅಲೆ ಇತ್ತು. ಈ ಬಾರಿಯೂ ಅಷ್ಟೇ ಪ್ರಮಾಣದಲ್ಲಿ ಅಲೆ ಉಳಿದುಕೊಳ್ಳಬಹುದು ಎಂಬ ನಿರೀಕ್ಷೆ ಇತ್ತೇ?

ಆಗ ಮೋದಿ ಅಲೆ ಇತ್ತು. ಈ ಬಾರಿ ಮೋದಿ ಸುನಾಮಿ ಎದ್ದಿದೆ. 2014ರಲ್ಲಿ ಮೋದಿ ಅವರು ದೇಶಕ್ಕೆ ಪ್ರಧಾನಿ ಆಗಲೆಂದು ಜನ ಮತ ಹಾಕಿದ್ದರು. ಈ ಬಾರಿ ಅವರು ಮತ್ತೊಮ್ಮೆ ಪ್ರಧಾನಿ ಆಗಲೆಂದು ಮತ ನೀಡಿದ್ದಾರೆ. ಇದು ಎಲ್ಲರ ಗೆಲುವಿಗೆ ಕಾರಣವಾಗಿದೆ. ಜೊತೆಗೆ ಅಭಿವೃದ್ಧಿ ವಿಚಾರ ಕೈಹಿಡಿಯಿತು.

ನಿಮ್ಮನ್ನು ಸೋಲಿಸಲು ಜೆಡಿಎಸ್‌–ಕಾಂಗ್ರೆಸ್‌ ಒಟ್ಟುಗೂಡಿದ್ದು ಭಯ ಉಂಟು ಮಾಡಿತೇ?

ಮೋದಿ ಕಟ್ಟಿ ಹಾಕಲು ವಿವಿಧ ರಾಜ್ಯಗಳಲ್ಲಿ 2–3 ಪಕ್ಷಗಳು ಜೊತೆಯಾಗಿ ಪ್ರಯತ್ನಿಸಿದವು. ಆದರೆ, ದೇಶಕ್ಕೆ ಮೋದಿ ಬೇಕು ಎಂದು ಜನರು ಬಹಳ ಹಿಂದೆಯೇ ನಿರ್ಧರಿಸಿದ್ದರು. ಹೀಗಾಗಿ, ಏನೂ ಮಾಡಲು ಸಾಧ್ಯವಾಗಲಿಲ್ಲ. ಜನರು ಹಾಗೂ ಮೋದಿ ನಡುವೆ ಅತ್ಯುತ್ತಮ ಮೈತ್ರಿ ಇದೆ.

ದೇಶ, ರಾಜ್ಯದಲ್ಲಿ ಬಿಜೆಪಿ ಪ್ರಚಂಡ ಗೆಲುವಿಗೆ ಕಾರಣಗಳೇನು?

ಇಡೀ ದೇಶದ ಜನರು ಮೋದಿ ಮುಖ ನೋಡಿ ವೋಟು ಹಾಕಿದ್ದಾರೆ, ಕರ್ನಾಟಕದಲ್ಲಿ ಮೋದಿಜೀ ಹಾಗೂ ಯಡಿಯೂರಪ್ಪ ಮುಖ ನೋಡಿ ಮತ ನೀಡಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಬೇಕು.

ಕಾಂಗ್ರೆಸ್‌ ಸಾಧನೆಗಳನ್ನು ಬಿಜೆಪಿ ತನ್ನದೆಂದು ಬಿಂಬಿಸಿ ಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಈ ಬಗ್ಗೆ ನೀವು ಏನು ಹೇಳುತ್ತೀರಿ?

ಜನ ಈಗಾಗಲೇ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಾನೇಕೆ ಅದಕ್ಕೆ ಪ್ರತಿಕ್ರಿಯಿಸಬೇಕು. ಕೆಲವರು ಅಹಂನಿಂದ ಈ ರೀತಿ ಮಾತನಾಡುತ್ತಾರೆ. ₹ 7,500 ಕೋಟಿ ಮೊತ್ತದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದಕ್ಕೆ ರಾಜ್ಯ ಸರ್ಕಾರ ಏಳು ಪೈಸೆಯನ್ನೂ ನೀಡಿಲ್ಲ. ಹೊಸದಾಗಿ ಆರು ರೈಲು ತಂದೆ. ದನಗಳು ಮೇಯುತ್ತಿದ್ದ ವಿಮಾನ ನಿಲ್ದಾಣ ಈಗ ಸಕ್ರಿಯವಾಗಿದೆ. ರನ್‌ವೇ ವಿಸ್ತರಣೆ ಹಣ ಬಿಡುಗಡೆ ಆಗಿದೆ. ಹೀಗೆ, ಹಲವಾರು ಯೋಜನೆಗಳನ್ನು ಮೈಸೂರಿಗೆ ತಂದೆ.

ಯಾರಿಗೆ ಗೆಲುವಿನ ಶ್ರೇಯಸ್ಸು ಅರ್ಪಿಸುತ್ತೀರಿ?

ಚಾಮುಂಡೇಶ್ವರಿ, ಕಾವೇರಿ ತಾಯಿ, ಇಗ್ಗುತಪ್ಪ ದೇವರು, ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತ ಬಂಧುಗಳು, ಎಲ್ಲಕ್ಕಿಂತ ಮುಖ್ಯವಾಗಿ ಜಗದೇಕವೀರ ಮೋದಿ ಅವರಿಗೆ ಅರ್ಪಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT