ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು: ಬಂಪರ್ ಇಳುವರಿಯ ನಿರೀಕ್ಷೆ

ಅಂತಿಮ ಹಂತದಲ್ಲಿ ಭತ್ತದ ನಾಟಿ: 3.80 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಪೂರ್ಣ–ಶೇ 96ರ ಸಾಧನೆ
Last Updated 25 ಸೆಪ್ಟೆಂಬರ್ 2020, 1:01 IST
ಅಕ್ಷರ ಗಾತ್ರ

ಮೈಸೂರು: ಮುಂಗಾರು ವರ್ಷಧಾರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಉತ್ತಮವಾಗಿ ಸುರಿದಿದೆ. ಹತ್ತಿ ಹೊರತು ಪಡಿಸಿದರೆ ಉಳಿದೆಲ್ಲಾ ಬೆಳೆಗಳು ಕೃಷಿಕರ ಕೈ ಹಿಡಿಯುವ ನಿರೀಕ್ಷೆಯಿದೆ. ಬಂಪರ್ ಇಳುವರಿಯ ಭರವಸೆ ರೈತ ಸಮುದಾಯದಿಂದ ವ್ಯಕ್ತವಾಗಿದೆ.

ಇದೀಗ ಭತ್ತದ ನಾಟಿ ಅಂತಿಮ ಹಂತದಲ್ಲಿದೆ. ವಾತಾವರಣವೂ ಇದಕ್ಕೆ ಪೂರಕವಾಗಿದೆ. ಜಿಲ್ಲೆಯಾದ್ಯಂತ 1,02,650 ಹೆಕ್ಟೇರ್‌ನಲ್ಲಿನ ನಾಟಿ ಗುರಿಗೆ, 98,827 ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿನ ಭತ್ತದ ನಾಟಿ ಮುಗಿದಿದೆ. ಬಹುತೇಕ ಬೆಳೆ ನೀರಾವರಿ ಆಶ್ರಿತ ಪ್ರದೇಶದಲ್ಲಿದೆ. ಕಬಿನಿ, ಕೆಆರ್‌ಎಸ್‌ ಜಲಾಶಯ ಮತ್ತೊಮ್ಮೆ ಭರ್ತಿಯಾಗಿರುವುದು ರೈತರಲ್ಲಿ ನಿರುಮ್ಮಳ ಭಾವ ಮೂಡಿಸಿದೆ.

‘ಸೆ.30ರೊಳಗೆ ಬಿತ್ತನೆ ನಿಗದಿತ ಗುರಿ ದಾಟುವ ನಿರೀಕ್ಷೆಯಿದೆ. ಎಚ್‌.ಡಿ.ಕೋಟೆ ಭಾಗದಲ್ಲಿ ಮಾತ್ರ ಭತ್ತದ ನಾಟಿಯ ಕೆಲಸ ಉಳಿದಿದೆ’ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

43,719 ಹೆಕ್ಟೇರ್‌ನಲ್ಲಿರುವ ರಾಗಿ ಬಿತ್ತನೆಯಿಂದ ಕೊಯ್ಲಿನ ಹಂತದವರೆಗೂ ಇದೆ. 38,963 ಹೆಕ್ಟೇರ್‌ನಲ್ಲಿರುವ ಮುಸುಕಿನ ಜೋಳ ಶೇ 70ರಷ್ಟು ಕೊಯ್ಲಾಗಿದ್ದರೆ, ಶೇ 30ರಷ್ಟು ಬೆಳವಣಿಗೆಯ ಹಂತದಲ್ಲಿದೆ. ಅಲ್ಲಲ್ಲೇ ಸೈನಿಕ ಹುಳುವಿನ ಬಾಧೆಯೂ ಗೋಚರಿಸುತ್ತಿದೆ. ಆಗಾಗ್ಗೆ ಸುರಿಯುವ ಮಳೆ ಮುಸುಕಿನ ಜೋಳದ ರಾಶಿಗೆ ಅಡ್ಡಿಯಾಗಿದೆ.

ಕಬ್ಬಿನ ಕಟಾವು ನಡೆದಿದೆ. ಅಲ್ಲಲ್ಲೇ ಹೊಸದಾಗಿ ನಾಟಿಯೂ ನಡೆಯುತ್ತಿದೆ. 2005 ಹೆಕ್ಟೇರ್‌ನಲ್ಲಿರುವ ತೊಗರಿ ಬೆಳವಣಿಗೆಯ ಹಂತದಲ್ಲಿದೆ. ಅಕ್ಟೋಬರ್‌ನಲ್ಲಿ ಹೂವು ಬಿಡಲಿದೆ. ಹುರುಳಿಯ ಬಿತ್ತನೆ ನಡೆದಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗೌರಮ್ಮ ಅಗಸಿಬಾಗಿಲ ಮಾಹಿತಿ ನೀಡಿದರು.

ಶೇ 75ರಷ್ಟು ಕೊಯ್ಲು: 30ರಿಂದ ಹರಾಜು

ಜಿಲ್ಲೆಯ 63,730 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹೊಗೆಸೊಪ್ಪು ಇದೀಗ ಕೊಯ್ಲಾಗುತ್ತಿದೆ. ಶೇ 75ರಷ್ಟು ಬೆಳೆಯ ಕೊಯ್ಲು ಮುಗಿದಿದೆ. ಬ್ಯಾರನ್‌ಗಳಲ್ಲಿ ಹದಗೊಳಿಸುವ ಪ್ರಕ್ರಿಯೆ ನಡೆದಿದೆ.

ಸೆ.30ರಿಂದ ರಾಜ್ಯದಲ್ಲಿ ವರ್ಜೀನಿಯಾ ತಂಬಾಕು ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ತಂಬಾಕು ಹರಾಜು ಮಂಡಳಿಯ ಅಧ್ಯಕ್ಷ ವೈ.ರಘುನಾಥ ಬಾಬು ಹಾಗೂ ಪ್ರಾದೇಶಿಕ ವ್ಯವಸ್ಥಾಪಕ ಬಿ.ಮಾರಣ್ಣ ಈಗಾಗಲೇ ತಿಳಿಸಿದ್ದು, ಬೆಳೆಗಾರರು ಮಾರಾಟಕ್ಕೆ ಬೇಲ್‌ ಸಿದ್ಧಗೊಳಿಸಿಕೊಳ್ಳುವ ಚಿತ್ರಣ ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ಹುಣಸೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಗೋಚರಿಸುತ್ತಿದೆ.

ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 5, ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 62ರಲ್ಲಿ ಸೆ.30ರಿಂದಲೇ ಹರಾಜು ಆರಂಭಗೊಂಡರೆ, ಅ.7ರಿಂದ ಇನ್ನುಳಿದ ಎಲ್ಲಾ 9 ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಅಂಕಿ–ಅಂಶ

3,95,774 -ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಗುರಿ

3,80,359 - ಹೆಕ್ಟೇರ್‌ನಲ್ಲಿ ಬಿತ್ತನೆ

2,63,080 -ಹೆಕ್ಟೇರ್‌ನಲ್ಲಿ ಆಹಾರಧಾನ್ಯ ಬಿತ್ತನೆ ಗುರಿ

2,58,168 - ಹೆಕ್ಟೇರ್‌ನಲ್ಲಿ ಬಿತ್ತನೆ

1,21,730 - ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆ ಬಿತ್ತನೆ ಗುರಿ

1,15,120 -ಹೆಕ್ಟೇರ್‌ನಲ್ಲಿ ಬಿತ್ತನೆ

ಆಧಾರ: ಜಿಲ್ಲಾ ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT