ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರಕಗಳ ಮರು ನಿರ್ಮಾಣ: ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆಯಾಗಲಿ’: ಯದುವೀರ್

Last Updated 4 ಜುಲೈ 2022, 14:02 IST
ಅಕ್ಷರ ಗಾತ್ರ

ಮೈಸೂರು: ‘ಸ್ಮಾರಕಗಳು ನಮ್ಮ ದೇಶದ ಸಾಂಸ್ಕೃತಿಕ ಗತವೈಭವವನ್ನು ಸಾರುತ್ತವೆ’ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಹೆಬ್ಬಾಳದಲ್ಲಿರುವ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರಾಷ್ಟ್ರೀಯ ರಕ್ಷಣಾ ದಳ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ‘ಪುರಾತತ್ವ ಮತ್ತು ಇತಿಹಾಸದ ಸ್ಮಾರಕಗಳ ಸಂರಕ್ಷಣೆ’ ಕುರಿತು ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ಮಾರಕಗಳು ನಮ್ಮ ದೇಶದ ಆಸ್ತಿ. ಇಂದು ನಾವು ಗುರುತಿಸುವ ಸ್ಮಾರಕಗಳು ಅಂದು ನಮ್ಮ ನಾಡಿನ ಜನರ ಜೀವನದ ಭಾಗವಾಗಿದ್ದವು. ವಿಶೇಷ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನ ಆಧಾರಿತವಾಗಿ ನಿರ್ಮಾಣಗೊಂಡಿದ್ದವು. ಇಂದು ನಾವು ಪುರಾತನ ಕಟ್ಟಡಗಳನ್ನು ಮರುನಿರ್ಮಾಣ ಮಾಡುವುದೇ ಆದಲ್ಲಿ ಹಳೆಯ ಪರಿಸರ ಸ್ನೇಹಿ ತಂತ್ರಜ್ಞಾನದ ಮಾದರಿಯನ್ನೇ ಅನುಸರಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳು ನಮ್ಮ ನಾಡು–ದೇಶಕ್ಕೆ ಸಂಬಂಧಿಸಿದ ಇತಿಹಾಸ ಅರಿತುಕೊಳ್ಳಬೇಕು. ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯಕ್ರಮಗಳಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ವೂಡೇ ಪಿ. ಕೃಷ್ಣ, ‘ಭಾರತವು ಸ್ಮಾರಕಗಳ ಖಜಾನೆಯಾಗಿದೆ. ಪುರಾತತ್ವ ಶಾಸ್ತರವು ತಂತ್ರಜ್ಞಾನದಿಂದ ಕೂಡಿದ್ದು ರಾಷ್ಟ್ರದ ಭವಿಷ್ಯವನ್ನು ಬಿಚ್ಚಿಡುತ್ತವೆ’ ಎಂದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ. ಅನಂತರಾಮ್, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಧರ್ಮದರ್ಶಿಗಳಾದ ಬಿ.ಸಿ. ಲೋಕನಾಥ್ ಮತ್ತು ಶಶಾಂಕ್ ಎಂ. ಗೋಪಾಲ್, ಆಜೀವ ಸದಸ್ಯರಾದ ಎಂ.ಎಲ್. ರವಿಶಂಕರ್, ಎನ್.ಎನ್. ಅನಿಲ್‌ಕುಮಾರ್, ಶೇಷಾದ್ರಿಪುರಂ ಸ್ವತಂತ್ರ ಪಿಯು ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಸ್ವಾಮಿ ಎನ್., ಎನ್‌ಎಸ್ಎಸ್‌ ಕಾರ್ಯಕ್ರಮಾಧಿಕಾರಿ ಡಾ.ರಾಘವೇಂದ್ರ ಆರ್., ಎನ್‌ಸಿಸಿ ಕೇರ್ ಟೇಕರ್ ಆಫೀಸರ್ ಕುಮಾರ್ ಆರ್. ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿಯರಾದ ಪೂಜಾ ಮತ್ತು ಹರ್ಷಿತಾ ನಗದಿ ಪ್ರಾರ್ಥಿಸಿದರು. ಪ್ರಾಂಶುಪಾಲೆ ಪ್ರೊ.ಸೌಮ್ಯಾ ಈರಪ್ಪ ಕೆ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಲಾವಣ್ಯಾ ಸಿ.ಪಿ. ಹಾಗೂ ಕೆ.ಶ್ರೀದೇವಿ ಎನ್. ಪ್ರಭು ನಿರೂಪಿಸಿದರು.ಡಾ.ರಾಘವೇಂದ್ರ ಆರ್. ವಂದಿಸಿದರು.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT