ಭಾನುವಾರ, ಜನವರಿ 17, 2021
22 °C
ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ನೀರಿನ ಸಮಸ್ಯೆ

52ಕ್ಕೂ ಹೆಚ್ಚು ಹಳ್ಳಿಗಳಿಗೆ ವಾರಕ್ಕೊಮ್ಮೆಯೂ ನೀರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತಾಲ್ಲೂಕಿನ 52ಕ್ಕೂ ಹೆಚ್ಚು ಹಳ್ಳಿಗಳಿಗೆ ವಾರಕ್ಕೊಮ್ಮೆಯೂ ಕುಡಿಯುವ ನೀರು ಬರುತ್ತಿಲ್ಲ ಎಂಬ ಅಂಶ ಇಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿತು.

‘ಮೂರು ದಿನಗಳಿಗೆ ಒಮ್ಮೆ ನೀರು ನೀಡಲಾಗುತ್ತಿದೆ’ ಎಂಬ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ವಿವರಣೆಗೆ ಖಾರವಾಗಿ ಪ್ರತಿಕ್ರಿಯಿಸಿದ ಶಾಸಕ ಜಿ.ಟಿ.ದೇವೇಗೌಡ, ‘ವಾರಕ್ಕೆ 3 ದಿನ ನೀರು ಕೊಟ್ಟರೆ, ಅಲ್ಲಿನ ಜನರು ನಿಮ್ಮನ್ನೇ ದೇವರು ಎಂದು ಪೂಜಿಸುತ್ತಾರೆ’ ಎಂದು ಕಿಡಿಕಾರಿದರು.‌

ಕೆಆರ್‌ಎಸ್‌ನಿಂದ ಮೈಸೂರು ತಾಲ್ಲೂಕಿನ 52 ಗ್ರಾಮಗಳಿಗೆ ನೀರು ನೀಡಲಾಗುತ್ತಿತ್ತು. ಈಗ ಇದಕ್ಕೆ ಹೆಚ್ಚುವರಿಯಾಗಿ 20 ಗ್ರಾಮಗಳನ್ನು ಸೇರಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ ಎಂಬ ಅಧಿಕಾರಿಗಳ ವಿವರಣೆ ಜನಪ್ರತಿನಿಧಿಗಳನ್ನು ತೃಪ್ತಿಪಡಿಸಲಿಲ್ಲ.

ನರೇಗಾ ಯೋಜನೆ; ಅಧಿಕಾರಿಗಳಿಂದ ನಿಯಮ ಉಲ್ಲಂಘನೆ

ನರೇಗಾ ಯೋಜನೆಯಡಿ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದರಿಂದ ₹ 16 ಕೋಟಿಯಷ್ಟು ಅನುದಾನ ಬಂದಿಲ್ಲ ಎಂಬ ಅಂಶವೂ ಸಭೆಯಲ್ಲಿ ಪ್ರಸ್ತಾಪವಾಯಿತು. ‘ಎಲ್ಲೂ ನರೇಗಾ ಕೆಲಸ ನಡೆಯುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಸಹ ದನಿಗೂಡಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಕೆಸರೆ ಸಮೀಪ ಮತ್ತೆ ಕಸಾಯಿಖಾನೆ ಏಕೆ?

ಕೆಸರೆ ಸಮೀಪ ಕಸಾಯಿಖಾನೆ ಬೇಡ ಎಂದು ಜನಪ್ರತಿನಿಧಿಗಳು ಸೂಚನೆ ನೀಡಿದ ಮೇಲೆಯೂ ಅಲ್ಲಿಯೇ ಕಸಾಯಿಖಾನೆ ನಡೆಸಲು ಯತ್ನಿಸಿದ್ದು ಏಕೆ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರನ್ನು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು. ಹಿಂದೂ, ಮುಸ್ಲಿಂ ಎರಡೂ ಧರ್ಮದವರೂ 10 ವರ್ಷಗಳಿಂದ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿಯೇ ನಿರ್ಮಾಣ ಮಾಡಬೇಕು ಎಂಬ ಹಠ ಬಿಡಿ ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿರುವ ಶಾಲೆಗಳ ದುರಸ್ತಿಗೆ ಕ್ರಮ ವಹಿಸಲು ಶಾಸಕ ಎಲ್.ನಾಗೇಂದ್ರ, ಹಾಡಿಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಭವನಗಳ ಕಾಮಗಾರಿ ತ್ವರಿತಗೊಳಿಸಬೇಕು ಎಂದು ಎಚ್.ಡಿ.ಕೋಟೆ ಶಾಸಕ ಅನಿಲ್‌ಕುಮಾರ್, ಪಿರಿಯಾಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗಹೆರಿಸಬೇಕು ಎಂದು ಶಾಸಕ ಕೆ.ಮಹದೇವ್ ಹಾಗೂ ಹುಣಸೂರಿನ ಸಮಸ್ಯೆಗಳತ್ತ ಗಮನಹರಿಸಬೇಕು ಶಾಸಕ ಮಂಜುನಾಥ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ ಇದ್ದರು.

ಜನವರಿ ಹೊತ್ತಿಗೆ ಎಲ್ಲ ಕುಟುಂಬಕ್ಕೂ ವಿದ್ಯುತ್‌

ಮುಂದಿನ ವರ್ಷದ ಜನವರಿ ಹೊತ್ತಿಗೆ ಹಾಡಿಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ಕುಟುಂಬಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಸೆಸ್ಕ್‌ ಅಧಿಕಾರಿಗಳು ಸಭೆಗೆ ತಿಳಿಸಿದರು. ಸದ್ಯ, ಕೇವಲ 300 ಕುಟುಂಬಗಳಷ್ಟೇ ವಿದ್ಯುತ್‌ ಸಂಪರ್ಕ ಪಡೆದಿಲ್ಲ. ಇವರಿಗೆ ತ್ವರಿತವಾಗಿ ಸಂಪರ್ಕ ನೀಡಲಾಗುವುದು. ಆದರೆ, ಎಚ್.ಡಿ.ಕೋಟೆಯ ಹುಲಿ ರಕ್ಷಿತಾರಣ್ಯದಲ್ಲಿರುವ 8 ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.‌

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಅಭಿನಂದನೆ

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಮಾಣ ಹಾಗೂ ಮರಣದರ ಇಳಿಕೆಯಾಗುತ್ತಿರುವುದಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಚಿವ ಎಸ್.ಟಿ.ಸೋಮಶೇಖರ್ ಅಭಿನಂದಿಸಿದರು.‌

‘ನಿತ್ಯ 4 ಸಾವಿರ ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಮಾಡುತ್ತಿರುವುದರಿಂದ ಕೊರೊನಾ ಸೋಂಕಿತರನ್ನು ಆರಂಭದಲ್ಲೇ ಗುರುತಿಸಲು ಸಾಧ್ಯವಾಗುತ್ತಿದೆ. ಇದರಿಂದ ಸೋಂಕು ಹರಡುವಿಕೆ ಹಾಗೂ ಮರಣದರವು ಕಡಿಮೆಯಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್‌ ಸಭೆಗೆ ವಿವರಣೆ ನೀಡಿದರು.

‘ಮತ್ತೆ ಟೆಂಡರ್ ಕರೆದರೆ ಕೊಂದೇ ಬಿಡುವೆ’– ಶಾಸಕ ಜಿ.ಟಿ.ದೇವೇಗೌಡ

‘ರಸ್ತೆ ಅಭಿವೃದ್ಧಿಗೆಂದು ಮತ್ತೆ ಟೆಂಡರ್ ಕರೆದರೆ ಕೊಂದೆ ಬಿಡುವೆ’ ಎಂದು ಶಾಸಕ ಜಿ.ಟಿ.ದೇವೇಗೌಡ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ನಂಜನಗೂಡು ಸೇರಿದಂತೆ ಜಿಲ್ಲೆಯ ಯಾವ ಭಾಗದಲ್ಲೂ ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಯವರು ರಸ್ತೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿಲ್ಲ. ಗುಂಡಿಬಿದ್ದ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರು ನಿತ್ಯ ನಮಗೆ ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಶಾಸಕ ಹರ್ಷವರ್ಧನ್ ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಬಳಿಕ ಜನಸ್ನೇಹಿ ಅದಾಲತ್

ಗ್ರಾಮಪಂಚಾಯಿತಿ ಚುನಾವಣೆ ಬಳಿಕ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಜನಸ್ನೇಹಿ ಅದಾಲತ್ ನಡೆಸಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಅಧಿಕಾರಿಗಳು ಅದಾಲತ್‌ನಲ್ಲಿ ಸಬೂಬು ಹೇಳಬಾರದು. ನೀಡಿದ ಸೂಚನೆಯನ್ನು ಪಾಲಿಸಿ, ಜನರ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಹೇಳಿದರು.

‘ಜಿಯಾಗ್ರಾಫಿಕಲ್ ಇಂಡಿಕೇಶನ್’ ಹೊಂದಿರುವ ನಂಜನಗೂಡು ರಸಬಾಳೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಒಂದು ಎಕರೆಗೆ ₹ 40 ಸಾವಿರ ನೀಡಿದರೆ ರೈತರು ಇದರತ್ತ ಆಕರ್ಷಿತರಾಗುತ್ತಾರೆ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.