ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮಧ್ಯಪ್ರದೇಶದ ಖದೀಮರು: ಕಳ್ಳರು ಸಿಕ್ಕರೂ ಮಾಲು ಸಿಗದು!

ಪ್ರಕರಣಗಳ ಬೇಧಿಸಿದ ಪೊಲೀಸರು
Last Updated 19 ಜನವರಿ 2019, 7:41 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ನಡೆಯುತ್ತಿರುವ ಕಳ್ಳತನಗಳ ಪ್ರಕರಣಗಳನ್ನು ಬೇಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದಿಂದ ಬರುವ ಕಳ್ಳರ ಗುಂಪುಗಳು ಅತ್ಯಂತ ವ್ಯವಸ್ಥಿತವಾಗಿ ಕಳ್ಳತನಗಳನ್ನು ನಡೆಸುತ್ತಿರುವುದು ತನಿಖೆ ವೇಳೆ ಗೊತ್ತಾಗಿದೆ. ಈ ಕುರಿತು ಪೊಲೀಸರ ಒಂದು ತಂಡ ಮಧ್ಯಪ್ರದೇಶಕ್ಕೂ ಹೋಗಿ ತನಿಖೆ ನಡೆಸಿದೆ. ತನಿಖೆ ವೇಳೆ ಕೇವಲ ಮೈಸೂರು ಮಾತ್ರವಲ್ಲ ರಾಜ್ಯದ ಉದ್ದಗಲಕ್ಕೂ ಈ ಕಳ್ಳರ ಕೈಚಳಕ ಇರುವುದು ಸಾಬೀತಾಗಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿನ ಕೆಲವು ಗ್ರಾಮಗಳಲ್ಲಿರುವ ಕಳ್ಳರೇ ಇಲ್ಲಿ ಬಂದು ಕಳ್ಳತನ ಮಾಡುತ್ತಿರುವ ಅಂಶ ಗೊತ್ತಾಗಿದೆ. ದಂಡುಪಾಳ್ಯ ಗುಂಪಿನ ಮಾದರಿಯಲ್ಲಿರುವ ಈ ಕಳ್ಳರ ಗುಂಪು ಅದಕ್ಕಿಂತಲೂ ಹೆಚ್ಚು ವ್ಯವಸ್ಥಿತವಾಗಿ ಕಳ್ಳತನ ಮಾಡುತ್ತಿದೆ. ಆದರೆ, ಇಲ್ಲಿ ಯಾರನ್ನೂ ಒಡೆಯುವುದು, ಬಡಿಯುವುದು ಮಾಡುವುದಿಲ್ಲ ಕೇವಲ ಬೀಗ ಹಾಕಿದ ಮನೆಗಳನ್ನಷ್ಟೇ ಇವರು ಕಳ್ಳತನ ಮಾಡುತ್ತಾರೆ.

ರೈಲು ಹಾಗೂ ಬಸ್‌ಗಳಲ್ಲಿ ಬರುವ ಕಳ್ಳರು ಇಲ್ಲಿ ಹೋಟೆಲ್‌ಗಳಲ್ಲಿ ಇದ್ದು, ಕಳ್ಳತನ ಮಾಡಿ ತಮ್ಮ ಊರಿಗೆ ಹೊರಡುತ್ತಾರೆ. ನಂತರ, ಕೆಲವು ಕಾಲದ ನಂತರ ಮತ್ತೊಂದು ನಗರಕ್ಕೆ ಬಂದು ಕಳ್ಳತನ ಎಸಗುತ್ತಾರೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

ಧಾರ್ ಜಿಲ್ಲೆಯಲ್ಲಿ ಕಳ್ಳತನ ಎನ್ನುವುದು ಕೇವಲ ಒಂದು ಊರಿನವರ ಕಸುಬಾಗಿಲ್ಲ. ಅಲ್ಲಿ ಹಲವು ಊರುಗಳಲ್ಲಿ ಇದೇ ದಂಧೆಯಲ್ಲಿ ತೊಡಗಿರುವ ಸಾಕಷ್ಟು ಜನರಿದ್ದಾರೆ. ಸ್ಥಳೀಯ ಪೊಲೀಸರು ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕಳ್ಳರಿಗೆ ವರದಾನ ಎನಿಸಿದೆ.

ಇಲ್ಲಿ ಹಲವು ಗುಂಪುಗಳು ಇಂತಹ ಕೃತ್ಯಗಳಲ್ಲಿ ತೊಡಗಿವೆ. ಹೊರರಾಜ್ಯಗಳಿಂದ ತನಿಖೆಗೆ ತೆರಳುವ ಪೊಲೀಸರಿಗೆ ಸ್ಥಳೀಯ ಆಡಳಿತ ಸರಿಯಾದ ರೀತಿಯಲ್ಲಿ ಸಹಕಾರ ನೀಡುವುದಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ. ಆದರೆ, ಈ ಕುರಿತು ಪೊಲೀಸ್ ಅಧಿಕಾರಿಗಳು ಬಹಿರಂಗವಾಗಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ವರ್ಷ ಫೆಬ್ರುವರಿಯಲ್ಲಿ ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಇದೇ ಪಟ್ಟಣದ ಐವರನ್ನು ಬಂಧಿಸಿದ್ದರು. ಈ ಆರೋಪಿಗಳು ಕೊಡಿಗೇಹಳ್ಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ರೈಫಲ್ ಕಿತ್ತುಕೊಂಡು ಹೋಗಿದ್ದರು. ಬೆಂಗಳೂರು, ಮೈಸೂರು ಹಾಗೂ ತುಮಕುರುಗಳಲ್ಲಿ 18 ಕಳ್ಳತನಗಳನ್ನು ಮಾಡಿದ್ದ ಅಂಶ ವಿಚಾರಣೆ ವೇಳೆ ಗೊತ್ತಾಗಿತ್ತು.

ಇವರನ್ನು ಬಂಧಿಸಲು ತೆರಳಿದ ಬೆಂಗಳೂರಿನ ಪೊಲೀಸರ ಮೇಲೆ ಧಾರ್ ಪಟ್ಟಣದ ಬಳಿಯ ಭಗೋಲಿ ಊರಿನ ಜನರು ಬಿಲ್ಲುಬಾಣಗಳಿಂದ ದಾಳಿ ನಡೆಸಿದ್ದರು. ಊರಿಗೆ ಊರೇ ಪೊಲೀಸರನ್ನು ಅಟ್ಟಾಡಿಸಿತ್ತು. ಕೊನೆಗೆ, ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ಈ ಜಾಲವು ಕೇವಲ ಬೆಂಗಳೂರು ಮತ್ತು ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ. ಹುಬ್ಬಳ್ಳಿ ಹಾಗೂ ದೊಡ್ಡಬಳ್ಳಾಪುರಗಳಲ್ಲೂ ಮಧ್ಯಪ್ರದೇಶದ ಕಳ್ಳರನ್ನು ಪೊಲೀಸರು ಬಂಧಿಸಿದ ಉದಾಹರಣಗಳಿವೆ. ರಾಜ್ಯದಲ್ಲಿ ನಡೆಯುತ್ತಿರುವ ಕಳ್ಳತನಗಳಿಗೆ ಈ ಗುಂಪೇ ಪ್ರಧಾನ ಕಾರಣ ಎಂಬ ಅಂಶ ಗೊತ್ತಾಗಿದೆ. ಈ ಕುರಿತು ರಾಜ್ಯಮಟ್ಟದಲ್ಲಿ ದೊಡ್ಡದೊಂದು ತನಿಖಾ ತಂಡ ರಚಿಸಬೇಕಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕಳ್ಳತನ ಹೇಗೆ?

ರೈಲುಗಳಲ್ಲಿ ಬರುವ ಕಳ್ಳರು ಬೀದಿ ಬೀದಿ ಸುತ್ತುತ್ತಾರೆ. ಮನೆಯ ಆವರಣದಲ್ಲಿ ದಿನಪತ್ರಿಕೆ ಬಿದ್ದಿರುವ ಮನೆಗಳು, ಡೋರ್‌ಲಾಕ್ ಮಾಡಿದ ನಂತರ ಚಿಲಕಕ್ಕೆ ಸಣ್ಣದೊಂದು ಬೀಗ ಹಾಕಿರುವ ಮನೆಗಳು ಹಾಗೂ ಡೋರ್‌ಲಾಕ್ ಮಾಡಿದ ಬಳಿಕ ಮನೆಯ ಮುಂದಿನ ಚಿಲಕವನ್ನು ಹಾಕಿರುವ ಮನೆಗಳನ್ನೇ ಇವರು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಾರೆ. ಇಂತಹ ಮನೆಗಳನ್ನು ಗುರಿಯಾಗಿಸಿಕೊಂಡು ಆಯಾಕಟ್ಟಿನ ಸ್ಥಳಗಳಲ್ಲಿ ನಿಂತು ಕೊಳ್ಳುತ್ತಾರೆ.

ಒಂದಿಬ್ಬರು ಮಾತ್ರ ಬಾಗಿಲು ಒಡೆಯುತ್ತಾರೆ. ಮಿಕ್ಕವರು ಸಾರ್ವಜನಿಕರ ಚಲನವಲನಗಳನ್ನು ಕಳವು ಮಾಡುವ ಆರೋಪಿಗಳಿಗೆ ಮೊಬೈಲ್ ಮೂಲಕ ರವಾನಿಸುತ್ತಾರೆ.

ಮಧ್ಯಪ್ರದೇಶದ ಕಳ್ಳರ ಹೆಜ್ಜೆ ಗುರುತುಗಳು

ಆಗಸ್ಟ್ 13, 2017:ದೊಡ್ಡಬಳ್ಳಾಪುರ ಪಟ್ಟಣದ ಹೊರವಲಯದಲ್ಲಿನ ಮೊಬೈಲ್‌ ಟವರ್‌ಗಳಲ್ಲಿ ಕೇಬಲ್‌ ಕಳವು ಮಾಡುತ್ತಿದ್ದ ಮಧ್ಯಪ್ರದೇಶದ ಸಚಿನ್‌ಕುಮಾರ್‌ ಎಂಬಾತನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದರು

ಜುಲೈ 5, 2018: ಹುಬ್ಬಳ್ಳಿಯಲ್ಲಿ ಸೆಟ್ಲ್‌ಮೆಂಟ್‌ನ ಬಾಳವ್ವನ ಚೌಕದಿಂದ ಮಹೀಂದ್ರ ಸ್ಕಾರ್ಪಿಯೊ ವಾಹನದ ಸಾಫ್ಟ್‌ವೇರ್‌ ಬದಲಿಸಿ ಮಧ್ಯಪ್ರದೇಶದ ಕಳ್ಳರು ಚಾಲನೆ ಮಾಡಿಕೊಂಡು ಪರಾರಿಯಾಗಿದ್ದರು. ಪೊಲೀಸರು ವಾಹನದ ಚಾಸಿ ನಂಬರ್‌ ಹಾಗೂ ಎಫ್ಐಆರ್‌ ಪ್ರತಿಯನ್ನು ಭಾರತದಾದ್ಯಂತ ಇರುವ ಎಲ್ಲ ಮಹೀಂದ್ರ ಷೋರೂಮ್‌ಗಳು ಹಾಗೂ ಸರ್ವಿಸ್‌ ಸೆಂಟರ್‌ಗಳಿಗೆ ರವಾನಿಸಿದ ಬಳಿಕ ವಾಹನವು ಮಧ್ಯಪ್ರದೇಶದ ನಿಮುಚ್‌ ಜಿಲ್ಲೆಯ ಹಂಗಾರಿಯಾ ಎಂಬ ಗ್ರಾಮದಲ್ಲಿ ಪತ್ತೆಯಾಯಿತು. ಈ ಜಾಲವನ್ನು ಬೆಂಡಿಗೇರಿ ಠಾಣೆ ಪೊಲೀಸರು ಬೇಧಿಸಿದ್ದರು.

ಫೆಬ್ರುವರಿ 15, 2018: ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ರೈಫಲ್ ಕಿತ್ತುಕೊಂಡು ಹೋಗಿದ್ದ ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಭಗೋಲಿ ಜಿಲ್ಲೆಯ ಐವರು ಕಳ್ಳರನ್ನು ಬಂಧಿಸಿದ್ದರು. ಇವರು ಒಟ್ಟು 18 ಕಳ್ಳತನ ಮಾಡಿದ್ದು ವಿಚಾರಣೆ ವೇಳೆ ಗೊತ್ತಾಯಿತು. ಇವರು ಬೆಂಗಳೂರು, ಮೈಸೂರು, ತುಮಕೂರಿನಲ್ಲಿಯೂ ಕಳ್ಳತನ ನಡೆಸಿದ್ದರು.

ಕಳ್ಳರು ಸಿಕ್ಕರೂ ಮಾಲು ಸಿಗದು!

ಮಧ್ಯಪ್ರದೇಶದ ಧಾರ್ ನಗರದಿಂದ ಕಳ್ಳರನ್ನು ಬಂಧಿಸಿದರೂ ಕದ್ದ ಮಾಲನ್ನು ವಾಪಸ್ ಪಡೆಯುವುದು ಬಲು ಕಷ್ಟ ಎನಿಸಿದೆ. ಕಳವು ಮಾಡಿದ ಆಭರಣಗಳನ್ನು ಕೂಡಲೇ ಅವರು ಮಧ್ಯಪ್ರದೇಶದಲ್ಲಿ ಮಾರಾಟ ಮಾಡಿಬಿಡುತ್ತಾರೆ. ಕಳವಾದ ಮಾಲನ್ನು ಸಂಗ್ರಹಿಸುವ ದೊಡ್ಡ ಜಾಲವೇ ಅಲ್ಲಿದೆ.

ಒಬ್ಬರಿಂದ ಮತ್ತೊಬ್ಬರಿಗೆ ಕೆಲವೇ ದಿನಗಳಲ್ಲಿ ಆಭರಣ ಮಾರಾಟವಾಗಿ ಬಿಡುತ್ತದೆ. ಹಣವೂ ತಂಡದ ನಾಯಕನ ಕೈಸೇರಿ ಬಿಡುತ್ತದೆ. ನಾಯಕ ಭೂಗತನಾಗಿದ್ದು, ಸ್ಥಳೀಯರ ಸಹಕಾರದಿಂದ ಆತ ಪೊಲೀಸರ ಬಲೆಗೆ ಬೀಳುವುದಿಲ್ಲ. ಹೀಗಾಗಿ, ಕಳ್ಳರು ಸಿಕ್ಕರೂ ಮಾಲು ಸಿಗದ ಪರಿಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕರ ಏನು ಮಾಡಬೇಕು?

* ಮನೆಗೆ ಬೀಗ ಹಾಕಿಕೊಂಡು ಹೋಗುವುದಕ್ಕೂ ಮುನ್ನ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು

* ಮನೆಗೆ ವಾಪಸ್ ಬರುವವರೆಗೂ ದಿನಪತ್ರಿಕೆಗಳನ್ನು ಕಡ್ಡಾಯವಾಗಿ ನಿಲ್ಲಿಸಬೇಕು

* ಸುಭದ್ರವಾದ ಡೋರ್‌ಲಾಕ್‌ಗಳನ್ನು ಹಾಕಬೇಕು

* ಯಾವುದೇ ಕಾರಣಕ್ಕೂ ಮನೆಯ ಮುಂದಿನ ಚಿಲಕಕ್ಕೆ ಬೀಗ ಹಾಕುವುದು ಅಥವಾ ಚಿಲಕ ಹಾಕಬಾರದು

* ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT