ಮಂಗಳವಾರ, ನವೆಂಬರ್ 12, 2019
28 °C
ಎಕರೆಗೆ ₹ 1.5 ಕೋಟಿ ನೀಡಲು ಆಗ್ರಹ, ಬಿಗಿಪಟ್ಟು

‘ಮುಡಾ’ ನಂಬಿ ಭೂಮಿ ನೀಡೆವು ಎಂದ ರೈತರು

Published:
Updated:
Prajavani

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಂಬಿ ಒಂದಿಂಚೂ ಭೂಮಿ ನೀಡುವುದಿಲ್ಲ ಎಂದು ಬಲ್ಲಹಳ್ಳಿಯ ಬಹುತೇಕ ಗ್ರಾಮಸ್ಥರು ಘೋಷಿಸಿದರು.

ಇಲ್ಲಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ‘ಮುಡಾ’ ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಬಹುತೇಕ ಮಂದಿ ರೈತರು ಉದ್ದೇಶಿತ ಬಲ್ಲಹಳ್ಳಿ ವಸತಿ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

‘ಈಗಾಗಲೇ ಆರ್‌.ಟಿ.ನಗರ, ವಿಜಯನಗರ ನಾಲ್ಕನೇ ಹಂತ, ಕುಂಬಾರಕೊಪ್ಪಲು ಸೇರಿದಂತೆ ನಾನಾ ಕಡೆ ಭೂಸ್ವಾಧೀನಪಡಿಸಿಕೊಂಡಿರುವ ‘ಮುಡಾ’, ರೈತರಿಗೆ ಸೂಕ್ತ ಪರಿಹಾರ ನೀಡದೇ ಕಚೇರಿಗೆ ಅಲೆದಾಡಿಸುತ್ತಿದೆ. ಇಂತಹ ಪ್ರಾಧಿಕಾರ ನಂಬಿ ನಾವು ಹೇಗೆ ಭೂಮಿ ನೀಡುವುದು’ ಎಂದು ಪ್ರಶ್ನಿಸಿದರು.

ಬಲ್ಲಹಳ್ಳಿಯಲ್ಲಿ ಭೂಮಿ ಬರಡು ಬಿದ್ದಿಲ್ಲ. ಕೊಳವೆ ಬಾವಿಯಲ್ಲಿ ಸಮೃದ್ಧ ನೀರು ಬರುತ್ತಿದೆ. ಉತ್ತಮ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಫಲವತ್ತಾದ ಭೂಮಿಯನ್ನು ಕಡಿಮೆ ದರಕ್ಕೆ ಸ್ವಾಧೀನಪಡಿಸಿಕೊಳ್ಳುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಒಂದು ವೇಳೆ ಭೂಸ್ವಾಧೀನಪಡಿಸಿಕೊಳ್ಳುವುದಾದರೆ ಉದ್ದೇಶಿತ ಯೋಜನೆ 50:50ರ ಅನುಪಾತದ ಹಂಚಿಕೆ ಬೇಡ. ಎಕರೆಗೆ ₹ 1.5 ಕೋಟಿ ಪರಿಹಾರ ಹಾಗೂ ಕೊಳವೆಬಾವಿ, ಮರಗಳು, ತೋಟಗಳಿಗೆ ಪ್ರತ್ಯೇಕ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಮಾತನಾಡಿ, ‘ಬಲ್ಲಹಳ್ಳಿ ಯೋಜನೆಗೆ ಶೇ 90ರಷ್ಟು ರೈತರು ವಿರೋಧಿಸುತ್ತಿರುವಾಗ ಹೇಗೆ ಅಧಿಸೂಚನೆ ಹೊರಡಿಸಿದಿರಿ’ ಎಂದು ಪ್ರಶ್ನಿಸಿದರು.

ಪ್ರಾಧಿಕಾರದ ಅಧಿಕಾರಿಗಳು ಶೇ 80ರಷ್ಟು ರೈತರ ಒಪ್ಪಿಗೆ ಇದೆ ಎಂದು ಹೇಳುತ್ತಿರುವುದು ಹಸಿಸುಳ್ಳು ಎಂದು ಅವರು ಆರೋಪಿಸಿದರು.

ಒಂದು ವೇಳೆ ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಜನ ಪ್ರತಿನಿಧಿಗಳಿಗೂ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು. ರಾಜ್ಯದ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕ ಹರ್ಷವರ್ಧನ್, ಆಯುಕ್ತ ಪಿ.ಎಸ್.ಕಾಂತರಾಜು, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)