ಶನಿವಾರ, ಸೆಪ್ಟೆಂಬರ್ 26, 2020
27 °C
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಕರೆಯಿರಿ: ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹ

ಮುಡಾ ನಿವೇಶನ: ಹರಾಜು ಮುಂದೂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ತನ್ನ ಅಧೀನದಲ್ಲಿರುವ 300ಕ್ಕೂ ಹೆಚ್ಚು ಮೂಲೆ, ವಾಣಿಜ್ಯ ಹಾಗೂ ಮಧ್ಯಂತರ ನಿವೇಶನಗಳ ಇ–ಹರಾಜು ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದ್ದು, ತಕ್ಷಣವೇ ಇದನ್ನು ಕೈ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.

ಪ್ರಾಧಿಕಾರದ ಸರ್ವ ಸದಸ್ಯರ ಸಭೆ ಕರೆದು ಚರ್ಚಿಸದೆ, ಆಯುಕ್ತರೇ ಈ ನಿರ್ಧಾರ ಪ್ರಕಟಿಸಿರುವುದು ಸರಿಯಲ್ಲ. ತುರ್ತಾಗಿ ವಿವಿಧ ವಿಷಯಗಳ ಕುರಿತಂತೆ ಚರ್ಚಿಸಲು ಸಭೆ ಕರೆಯಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲದ, ಮನೆಗಳು ನಿರ್ಮಾಣವಾಗದ ಹಾಗೂ ಇನ್ನೂ ಕ್ರಯಪತ್ರ ನೀಡದಿರುವ ಹೊಸ ಬಡಾವಣೆಗಳಾದ ವಸಂತ ನಗರ, ಲಾಲ್‌ಬಹದ್ದೂರ್ ಶಾಸ್ತ್ರಿ ನಗರ, ಲಲಿತಾದ್ರಿ ನಗರ, ಆರ್‌.ಟಿ.ನಗರಗಳಲ್ಲಿಯೂ ಮೂಲೆ ಮತ್ತು ವಾಣಿಜ್ಯ ನಿವೇಶನಗಳ ಇ–ಹರಾಜಿಗೆ ಮುಂದಾಗಿದ್ದು, ಇದರಿಂದ ಪ್ರಾಧಿಕಾರಕ್ಕೆ ಭಾರಿ ನಷ್ಟ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

ಮುಡಾ ನಿಯಮಗಳಲ್ಲಿ ಮಧ್ಯಂತರ ನಿವೇಶನ ಹರಾಜು ಮಾಡಲು ಅವಕಾಶವಿಲ್ಲ. ಆದರೆ ಈ ಹರಾಜಿನಲ್ಲಿ ಶೇ 60ರಷ್ಟು ಮಧ್ಯಂತರ ನಿವೇಶನಗಳನ್ನು ತರಲಾಗಿದೆ. ಮಧ್ಯಂತರ ನಿವೇಶನ ಹರಾಜಿಗೆ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕಿದೆ. ಆದರೆ ಈ ಕೆಲಸವೇ ನಡೆದಿಲ್ಲ ಎಂದು ಮರಿತಿಬ್ಬೇಗೌಡ ದೂರಿದ್ದಾರೆ.

ಕೋವಿಡ್‌ ಸಂಕಷ್ಟ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿವೇಶನಗಳ ಹರಾಜಿನಿಂದ ಪ್ರಾಧಿಕಾರಕ್ಕೆ ತುಂಬಾ ಆರ್ಥಿಕ ನಷ್ಟವಾಗಲಿದೆ. ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲಿದೆ. ಆದ್ದರಿಂದ ತಕ್ಷಣವೇ ಇ–ಹರಾಜನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ತುರ್ತಾಗಿ ಸಭೆ ನಡೆಸುವಂತೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮೈಸೂರು ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು